ವಡೋದರಾ: ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ 9 ಮಂದಿ ಮೃತಪಟ್ಟಿರುವ ಭೀಕರ ಘಟನೆ ಗುಜರಾತ್ ನ ವಡೋದರಾದ ಪದ್ರಾ ತಾಲ್ಲೂಕಿನಲ್ಲಿ ನಡೆದಿದೆ.
ಮುಜ್‌ಪುರ ಸೇತುವೆಯ ಒಂದು ಭಾಗ ಇಂದು ಕುಸಿದು ಬಿದ್ದಿದೆ. ಪರಿಣಾಮವಾಗಿ ಹಲವಾರು ವಾಹನಗಳು ಮಹಿಸಾಗರ್ (ಮಹಿ) ನದಿಗೆ ಬಿದ್ದಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆನಂದ್ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯು ಪ್ರತಿದನವೂ ಬೆಳಗಿನ ಹೊತ್ತು ವಾಹನ ದಟ್ಟನೆಯಿಂದ ಕೂಡಿರುತ್ತದೆ.
ಈವರೆಗಿನ ಮಾಹಿತಿಗಳ ಪ್ರಕಾರ ಎರಡು ಟ್ರಕ್, ಬೊಲೆರೊ ಎಸ್‌ಯುವಿ ಮತ್ತು ಪಿಕಪ್ ವ್ಯಾನ್ ಸೇರಿದಂತೆ ನಾಲ್ಕು ವಾಹನಗಳು ಸೇತುವೆಯನ್ನು ದಾಟುತ್ತಿದ್ದಾಗ ನದಿಗೆ ಉರುಳಿ ಬಿದ್ದಿವೆ. ವಾಹನಗಳು ನದಿಗೆ ಬೀಳುವ ಕೆಲವೇ ಕ್ಷಣಗಳ ಮೊದಲು ದೊಡ್ಡ ಬಿರುಕು ಬಿಟ್ಟ ಶಬ್ದ ಕೇಳಿಬಂದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ತಂಡಗಳು, ಸ್ಥಳೀಯ ಪೊಲೀಸರು ಮತ್ತು ವಡೋದರಾ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಕ್ಷಣದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ಪೊಲೀಸರು ಗಾಯಾಳುಗಳನ್ನು ಅವಶೇಷಗಳಿಂದ ಹೊರತೆಗೆದಿದ್ದಾರೆ. ಇಲ್ಲಿಯವರೆಗೆ, ಮೂವರನ್ನು ರಕ್ಷಿಸಲಾಗಿದೆ ಮತ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಸ್ಥಳಿಯ ಶಾಸಕ ಚೈತನ್ಯಸಿಂಹ ಜಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.