ಪಾಲನ್ ಪುರ: ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಪಟಾಕಿ ಗೋದಾಮಿನಲ್ಲಿಬ ಭಾರಿ ಸ್ಫೋಟ ಸಂಭವಿಸಿದ್ದು, ಕಟ್ಟಡದ ಸ್ಲ್ಯಾಬ್ ಕುಸಿದು 18 ಮಂದಿ ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ 9.45ರ ಸುಮಾರಿಗೆ ದೀಸಾ ಪಟ್ಟಣದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ 18 ಜನರು ಮೃತಪಟ್ಟಿದ್ದು, ಭಾರಿ ಸ್ಫೋಟದಿಂದ ಕಟ್ಟಡದ ಸ್ಲ್ಯಾಬ್ ಕುಸಿದು ಐದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್‌ರಾಜ್ ಮಕ್ವಾನಾ ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರು ಮಧ್ಯಪ್ರದೇಶ ಮೂಲದ ಕಾರ್ಮಿಕರು ಎಂದು ಅವರು ಹೇಳಿದ್ದಾರೆ.
ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ‘ದೀಸಾ ಪಟ್ಟಣದ ಪಟಾಕಿ ಗೋದಾಮಿನಲ್ಲಿ ಬೆಂಕಿ ಸ್ಫೋಟ ಮತ್ತು ಸ್ಲ್ಯಾಬ್ ಕುಸಿದು ಕಾರ್ಮಿಕರು ಮೃತಪಟ್ಟಿರುವುದು ಆತಂಖ ಮೂಡಿಸಿದೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳಿಗೆ ಶೀಘ್ರ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ರೂ. 4 ಲಕ್ಷ ಮತ್ತು ಗಾಯಗೊಂಡವರಿಗೆ ರೂ. 50ಸಾವಿರ ಆರ್ಥಿಕ ನೆರವು ನೀಡಲಿದೆ ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

                                    