ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು(ಬಿಬಿಎಂಪಿ) ಆಡಳಿತಾತ್ಮಕ ದೃಷ್ಟಿಯಿಂದ 7 ಪಾಲಿಕೆಗಳನ್ನಾಗಿ ವಿಭಜಿಸಿ ಪುನಾರಚನೆ ಮಾಡಲು ಜಂಟಿ ಸದನ ಸಮಿತಿ ಶಿಫಾರಸ್ಸು ಮಾಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ಅಧ್ಯಯನಕ್ಕಾಗಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ವರದಿಯನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಎಸ್.ಟಿ.ಸೋಮಶೇಖರ್, ಪ್ರಿಯಾಕೃಷ್ಣ, ಎಸ್. ಶಿವಣ್ಣ, ಶ್ರೀನಿವಾಸ್, ಜವರಾಯಿಗೌಡ ಉಪಸ್ಥಿತರಿದ್ದರು.
ಹೊಸದಾಗಿ ಅಸ್ತಿತ್ವಕ್ಕೆ ಬರುವ ಪ್ರತಿ ಪಾಲಿಕೆಗಳಿಗೆ 100 ರಿಂದ 125 ವಾರ್ಡ್ ಗಳಿರಬೇಕು. ಮೇಯರ್ ಮತ್ತು ಉಪ ಮೇಯರ್ ಅವಧಿ 30 ತಿಂಗಳಿರಬೇಕು ಎಂದೂ ಸಲಹೆ ನೀಡಿದೆ. ನಗರದ ಎಲ್ಲ ವಿಭಾಗಗಳಲ್ಲಿ ಶಾಸಕರು, ಸಾರ್ವಜನಿಕರು ಮತ್ತು ನಗರ ತಜ್ಞರ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳನ್ನು ಪಡೆದು ಈ ವರದಿಯನ್ನು ರಚಿಸಿದೆ. ಜೂ.30ರೊಳಗೆ ವಾರ್ಡ್‌ಗಳ ಗಡಿ ಗುರುತಿಸಬೇಕು. ಅಷ್ಟರೊಳಗೆ ಹೊಸ ಪಾಲಿಕೆ, ವಾರ್ಡ್‌ಗಳ ರಚನೆಯಾಗಬೇಕು. ಬಳಿಕ ಮೀಸಲಾತಿ ನಿಗದಿಯಾಗಬೇಕು. ಇಷ್ಟೆಲ್ಲ ಪ್ರಕ್ರಿಯೆಗಳು ಪೂರ್ಣಗೊಂಡರೆ ಜುಲೈ ಅಥವಾ ಆಗಸ್ಟ್ ನಲ್ಲಿ ಹೊಸ ಪಾಲಿಕೆಗಳಿಗೆ ಚುನಾವಣೆ ನಡೆಸಬಹುದು ಎಂದೂ ಸಮಿತಿ ತಿಳಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ:
ಬೆಂಗಳೂರು 877 ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು, ಒಂದೂವರೆ ಕೋಟಿ ಜನಸಂಖ್ಯೆ ಇದೆ. ಇಂತಹ ನಗರವನ್ನು ನಿಭಾಯಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಗತ್ಯವಿದೆ ಎಂದೂ ಸಮಿತಿ ವರದಿ ಹೇಳಿದೆ. ಹೊಸ ಪಾಲಿಕೆಗಳ ಆಡಳಿತ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿವೆ. ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷ ಮತ್ತು ಬೆಂಗಳೂರು ಉಸ್ತುವಾರಿ ಸಚಿವರು ಸದಸ್ಯರಾಗಿರುತ್ತಾರೆ. ಪಾಲಿಕೆಗಳ ಮೇಲಿನ ಜವಬ್ಧಾರಿ ಜತೆಗೆ ತೆರಿಗೆ ನಿಗದಿ, ಶುಲ್ಕ ಸೆಸ್ ಮತ್ತು ಬಳಕೆದಾರರ ಶುಲ್ಕಗಳನ್ನು ನಿಗಧಿಪಡಿಸುವ ಅಧಿಕಾರ ಹೊಂದಿರುತ್ತದೆ. ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ಜಾರಿಯ ಜವಬ್ಧಾರಿ ಮತ್ತು ಕೇಂದ್ರ, ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಹಂಚಿಕೆಯ ಅಧಿಕಾರವೂ ಇರಲಿದೆ.
ಬೆಸ್ಕಾಂ, ಜಲ ಮಂಡಳಿ ಮೆಟ್ರೋ ನಿಗಮ, ನಗರ ಪೊಲೀಸ್ ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲ. ಹೊಂದಾಣಿಕೆ ಸಾಧಿಸಲು ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ. ರಾಜ್ಯ ಸರಕಾರ ಕಳೆದ ಜುಲೈ ಅಧಿವೇಶನದಲ್ಲೇ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024 ಅನ್ನು ಸದನದಲ್ಲಿ ಮಂಡಿಸಿತ್ತು. ಬಿಜೆಪಿ ಶಾಸಕರ ವಿರೋಧದ ನಂತರ ಈ ಮಸೂದೆಯ ಪರಾಮರ್ಶೆಗೆ ಜಂಟಿ ಸದನ ಸಮಿತಿ ರಚಿಸಲಾಗಿತ್ತು. ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳಿವೆ.