ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರು, ಉಪಾಧ್ಯಕ್ಷ ಹಾಗೂ ಪದನಿಮಿತ್ತ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧ್ಯಕ್ಷರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಲಾಗಿದೆ. ಬೆಂಗಳೂರಿನ ಸಚಿವರು, ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ಪಾಲಿಕೆಗಳ ಮಹಾಪೌರರು ಸೇರಿದಂತೆ ಒಟ್ಟು 75 ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಎನ್.ಆರ್.ಚೌಕದಲ್ಲಿರುವ ಬಿಬಿಎಂಪಿ ಕಚೇರಿ ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಾಗಿರಲಿದೆ. ಮೇಯರ್ ಅವರ ಕೊಠಡಿ ಜಿಬಿಎ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಾಗಿ ಪರಿವರ್ತನೆಯಾಗಲಿದೆ.
5 ಪಾಲಿಕೆಗಳ ವಿವಿರ ಹೀಗಿದೆ:
- ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ
- ಬೆಂಗಳೂರು ಉತ್ತರ ಮಹಾನಗರ ಪಾಲಿಕೆ
- ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ
- ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ
- ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ