ಬೆಂಗಳೂರು: ಕೇಂದ್ರ ಸರ್ಕಾರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ರಾಜ್ಯಕ್ಕೆ 2.84 ಲಕ್ಷ ಟನ್ ಗಳಷ್ಟು ಗೊಬ್ಬರ ಬಾಕಿ ಉಳಿಸಿಕೊಂಡಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ.
ಶೂನ್ಯವೇಳೆಯಲ್ಲಿ ಜೆಡಿಎಸ್ ನ ಟಿ.ಎ.ಶರವಣ ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಉಂಟಾಗಿರುವ ಬಗ್ಗೆ ವಿಷಯ ಪ್ರಸ್ತಾಪಿಸಿ ರಾಜ್ಯ ಸರ್ಕಾರವು ಅಗತ್ಯವಿರುವಷ್ಟು ಪ್ರಮಾಣದ ಗೊಬ್ಬರವನ್ನು ಪೂರೈಸಿ ಎಂದು ಕೇಂದ್ರ ಸರ್ಕಾರಕ್ಕೆ ಆರಂಭದಲ್ಲೇ ಪತ್ರ ಬರೆದು ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಸರ್ಕಾರ ಹಾಗೆ ಮಾಡಿಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಉತ್ತರ ನೀಡಿದ ಚಲುವರಾಯಸ್ವಾಮಿ ಅವರು, ಈ ಸಾಲಿನ ಮುಂಗಾರಿಗೆ ರಾಜ್ಯಕ್ಕೆ 12.95 ಲಕ್ಷ ಟನ್ ಗೊಬ್ಬರದ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಮುಂಚಿತವಾಗಿ ಪತ್ರ ಬರದು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇವಲ 11.17 ಲಕ್ಷ ಟನ್ ಮಾತ್ರ ಮಂಜೂರು ಮಾಡಿದೆ. ಮನವಿ ಸಲ್ಲಿಸಿದ್ದರೂ, ಅಗತ್ಯಕ್ಕಿಂತ ಕಡಿಮೆ ಗೊಬ್ಬರ ಮಂಜೂರು ಮಾಡಿದೆ ಎಂದು ತಿಳಿಸಿದರು.
ಗೊಬ್ಬರ ತಯಾರಿಕೆ,ಆಮದು ಹಂಚಿಕೆ ಎಲ್ಲವೂ ಕೇಂದ್ರ ಸರ್ಕಾರದ ಜವಬ್ದಾರಿಯಾಗಿರುತ್ತದೆ. ಏಪ್ರಿಲ್–ಜುಲೈ ಅವಧಿಗೆ ಹಂಚಿಕೆಯಾಗಿದ್ದ ಗೊಬ್ಬರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1.27 ಲಕ್ಷ ಟನ್ ಗಳಷ್ಟು ಕಡಿಮೆ ಗೊಬ್ಬರ ಪೂರೈಕೆ ಮಾಡಿದೆ. ಪ್ರತಿಪಕ್ಷಗಳ ನಾಯಕರು ಸುಖಾಸುಮ್ಮನೆ ಗೊಬ್ಬರ ಕೊರತೆ ಎಂದು ಹುಯಿಲೆಬ್ಬಿಸಿದ್ದರಿಂದ ಸಮಸ್ಯೆ ಉಂಟಾಯಿತು ಎಂದರು.