ತಾ.ಪಂ, ಜಿಪಂ ಚುನಾವಣೆ ನಡೆಸಲು ಸರ್ಕಾರ ಬದ್ಧ:ವಿಪಕ್ಷಗಳಿಗೆ ಬೈರತಿ ಸುರೇಶ್ ತಿರುಗೇಟು

Most read

ಬೆಳಗಾವಿ: ಅಧಿಕಾರಕ್ಕೆ ಬಂದ ಕೇವಲ ಎರಡು ವರ್ಷಗಳಲ್ಲಿ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಕಾಂಗ್ರೆಸ್ ಪಕ್ಷ ಗಟ್ಟಿ ನಿರ್ಧಾರ ಮಾಡಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಪ್ರತಿಪಕ್ಷಗಳಿಗೆ ಮಾರುತ್ತರ ನೀಡಿದ್ದಾರೆ.

ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರ ಚುನಾವಣೆ ನಡೆಸಲು ವಿಳಂಬ ಮಾಡುತ್ತಿದೆ ಎಂದು ಆಕ್ಷೇಪಿಸಿದಾಗ ಮಾತನಾಡಿದ ಸಚಿವರು, ಈ ಹಿಂದೆ ಆರೇಳು ವರ್ಷಗಳಿಂದ ಅಧಿಕಾರ ನಡೆಸಿದ ಬಿಜೆಪಿ ಚುನಾವಣೆ ನಡೆಸದೇ ಕಾಲಹರಣ ಮಾಡುತ್ತಾ ಮತ್ತು ಈ ಬಗ್ಗೆ ಯಾವುದೇ ಧ್ವನಿ ಎತ್ತಿರಲಿಲ್ಲ. ಯಾವುದೇ ತಾಲೂಕು, ಜಿಲ್ಲಾ ಪಂಚಾಯ್ತಿ ಅಥವಾ ಪಾಲಿಕೆಗಳಿಗೆ ಚುನಾವಣೆಯನ್ನೇ ನಡೆಸುವ ಧೈರ್ಯ ತೋರಲಿಲ್ಲ. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ತಾಲೂಕು, ಜಿಲ್ಲಾ ಪಂಚಾಯ್ತಿ ಮತ್ತು ಪಾಲಿಕೆಗಳಿಗೆ ಚುನಾವಣೆ ನಡೆಸಲು ಮುಂದಾಗಿದೆ ಎಂದು ತಿರುಗೇಟು ನೀಡಿದರು.

ಬಡ, ಮಧ್ಯಮ ವರ್ಗಗಳ ಅನುಕೂಲಕ್ಕಾಗಿ ಬಿ-ಖಾತಾ:

ಸದಸ್ಯ ಚಿದಾನಂದ ಎಂ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರ ಪ್ರದೇಶಗಳು ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿಬಡ ಮತ್ತು ಮಧ್ಯಮ ವರ್ಗಗಳ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿ-ಖಾತಾವನ್ನು ನೀಡಲಾಗುತ್ತಿದೆ. ಅವರಿಗೆ ತಮ್ಮ ಆಸ್ತಿಯ ಅಧಿಕೃತ ಮತ್ತು ಪ್ರಮಾಣೀಕೃತ ದಾಖಲೆಯನ್ನು ಒದಗಿಸುವುದು ಇದರ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಇದಲ್ಲದೇ, ಇದುವರೆಗೆ ಆಸ್ತಿ, ಕಟ್ಟಡಗಳಿದ್ದರೂ ಸರಿಯಾದ ತೆರಿಗೆಯನ್ನು ಪಾವತಿ ಮಾಡುತ್ತಿರಲಿಲ್ಲ. ಈಗ ಬಿ-ಖಾತೆಯನ್ನು ನೀಡುತ್ತಿರುವುದರಿಂದ ನಗರ ಸಂಸ್ಥೆಗಳಿಗೆ ಆದಾಯವೂ ಬರಲಿದೆ ಮತ್ತು ನಾಗರಿಕರಿಗೆ ತಮ್ಮ ಆಸ್ತಿಗೊಂದು ಶಾಶ್ವತ ದಾಖಲೆ ದೊರೆತಂತಾಗುತ್ತದೆ ಎಂದು ಬೈರತಿ ಸುರೇಶ್ ತಿಳಿಸಿದರು.

More articles

Latest article