ಬೆಂಗಳೂರು: 2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸಲು ಶೇ.5ರಷ್ಟು ರಿಯಾಯಿತಿ ನೀಡುತ್ತಿರುವ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.
ಆಸ್ತಿ ಮಾಲೀಕರು ಏಪ್ರಿಲ್ 30ರೊಳಗೆ ಸಂಪೂರ್ಣ ತೆರಿಗೆ ಪಾವತಿಸಿದರೆ ಶೇಕಡಾ 5 ರಷ್ಟು ರಿಯಾಯಿತಿ ಪಡೆಯಲು ಅವಕಾಶ ನೀಡಲಾಗಿತ್ತು. ಶೇ.5 ರಷ್ಟು ರಿಯಾಯಿತಿ ಸೌಲಭ್ಯ ಪಡೆಯಲು ಒಂದು ದಿನವಷ್ಟೇ ಬಾಕಿ ಉಳಿದಿತ್ತು. ಸಾರ್ವಜನಿಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿಯನ್ನು ಮೇ 31 ವರೆಗೆ ವಿಸ್ತರಿಸಲಾಗಿದೆ.ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಕ್ಸ್ ನಲ್ಲಿ ಆದೇಶ ಹೊರಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2025-26 ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಏ.30ರ ಒಳಗಾಗಿ ಪಾವತಿಸುವ ಎಲ್ಲಾ ತೆರಿಗೆದಾರರಿಗೆ ಆಸ್ತಿತೆರಿಗೆಯ ಮೇಲೆ ಶೇ.5% ರಷ್ಟು ರಿಯಾಯಿತಿ ನೀಡಲಾಗಿರುತ್ತದೆ. ಆದರೆ, ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಶೇ.5ರಷ್ಟು ರಿಯಾಯಿತಿಯನ್ನು ಒಳಗೊಂಡ ಆಸ್ತಿ ತೆರಿಗೆ ಪಾವತಿ ಅವಧಿಯನ್ನು ಇದೀಗ ಮೇ 31ರವರೆಗೆ ವಿಸ್ತಣೆ ಮಾಡಲಾಗಿದೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಹೆಚ್ಚಿನ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿ ಮಾಡುವಂತೆ ಮನವಿ ಮಾಡಿದ್ದಾರೆ.
ಬಿಬಿಎಂಪಿ ಕಾಯ್ದೆ 2020 ರ ಪ್ರಕರಣ 144 (8) ರಲ್ಲಿ ಸರ್ಕಾರವು ಪಾಲಿಕೆಯ ಶಿಫಾರಸ್ಸಿನ ಮೇರೆಗೆ ಅಧಿಸೂಚನೆ ಮೂಲಕ ಯಾವುದೇ ಹಣಕಾಸು ವರ್ಷಗಳಿಗೆ ರಿಯಾಯಿತಿ ಅವಧಿಯನ್ನು ವಿಸ್ತರಿಸಬಹುದೆಂದು ಉಲ್ಲೇಖಿಸಲಾಗಿರುತ್ತದೆ. ಆದುದರಿಂದ 2025-26 ನೇ ಸಾಲಿನ ಆಸ್ತಿತೆರಿಗೆ ಶೇ.5ರಷ್ಟು ರಿಯಾಯಿತಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. 2025-26 ನೇ ಸಾಲಿನ ಆಸ್ತಿತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಮೇ 31ರ ಒಳಗಾಗಿ ಪಾವತಿಸುವ ಎಲ್ಲಾ ತೆರಿಗೆದಾರರಿಗೆ ಆಸ್ತಿತೆರಿಗೆಯ ಮೇಲೆ ಶೇ.5 ರಷ್ಟು ರಿಯಾಯಿತಿ ನೀಡುವ ಸಂಬಂಧ ಬಿಬಿಎಂಪಿ ಆಡಳಿತಗಾರರ ನಡವಳಿಗಳಿಗೆ ಸರ್ಕಾರದ ಆದೇಶ ಕೋರಿ ಪ್ರಸ್ತಾವನೆ ಮಂಡಿಸಲಾಗಿತ್ತು. ಸದರಿ ಪ್ರಸ್ತಾವನೆಗೆ ಸರ್ಕಾರದಿಂದ ಆದೇಶ ನೀಡಿ ಅಧಿಸೂಚನೆ ಹೊರಡಿಸಲಾಗಿದೆ.
ಸರ್ಕಾರದ ನಗರಭಿವೃದ್ಧಿ ಇಲಾಖೆಯ ಆದೇಶದ ಅನ್ವಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2025-26 ನೇ ಸಾಲಿನ ಆಸ್ತಿತೆರಿಗೆ ರಿಯಾಯಿತಿ ಅವಧಿಯನ್ನು ವಿಸ್ತರಿಸಿ, 2025-26 ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಮೇ 31ರ ಒಳಗಾಗಿ ಪಾವತಿಸುವ ಎಲ್ಲಾ ತೆರಿಗೆದಾರರಿಗೆ ಆಸ್ತಿತೆರಿಗೆಯ ಮೇಲೆ ಶೇ.5 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.