ಬೆಂಗಳೂರು: ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಹಣವನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ ಕುಪ್ಪಂ ಗ್ಯಾಂಗ್ ನ ಓರ್ವ ಮಹಿಳೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
30 ವರ್ಷದ ಆರೋಪಿ ಜ್ಯೋತಿ ಎಂಬಾಕೆಯನ್ನು ಬಂಧಿಸಿ 50 ಸಾವಿರ ನಗದು ಸೇರಿದಂತೆ 11.54 ಲಕ್ಷ ಬೆಲೆ ರೂ.ಬಾಳುವ 153 ಗ್ರಾಂ ಚಿನ್ನಾಭರಣ, 21 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರುವ ಇಬ್ಬರು ಮಹಿಳೆಯರ ಪತ್ತೆಗೆ ಹುಡುಕಾಟ ನಡೆದಿದೆ. ಕೃಷ್ಣಗಿರಿಗೆ ಹೋಗಿ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ಹೆಬ್ಬಗೋಡಿಯ ನಾರಾಯಣ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಇಬ್ಬರು ಮಹಿಳೆಯರು ಪ್ರಯಾಣಿಕರಂತೆ ಬಸ್ ಹತ್ತಿ, ನನ್ನ ಪಕ್ಕದಲ್ಲಿ ಕುಳಿತುಕೊಂಡಿದ್ದರು. ಸ್ವಲ್ಪ ದೂರ ಬಂದ ನಂತರ ನನ್ನ ಗಮನವನ್ನು ಬೇರೆಡೆಗೆ ಸೆಳೆದು ಆಭರಣ ಮತ್ತು ಹಣವಿದ್ದ ಪರ್ಸ್ ಅನ್ನು ಕಳವು ಮಾಡಿ ಮುಂದಿನ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದರು ಎಂದು ಸೊಣ್ಣೇಹಳ್ಳಿಯ ನಿವಾಸಿಯೊಬ್ಬರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಬಸ್ ನಿಲ್ದಾಣ ಬಳಿ ಅನುಮಾನಸ್ಪದವಾಗಿ ನಿಂತಿದ್ದ ಮಹಿಳೆಯನ್ನು ಚಿನ್ನಾಭರಣ ಹಾಗೂ ನಗದು ಸಹಿತ ವಶಕ್ಕೆ ಪಡೆದಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಇಬ್ಬರು ಮಹಿಳೆಯರು ಪರಾರಿಯಾಗಿದ್ದಾರೆ. ಅವರೂ ಸಹ ಪ್ರಯಾಣಿಕರ ಸೋಗಿನಲ್ಲಿ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈಕೆಯ ಬಂಧನದಿಂದ ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಗೋಡಿ, ಮಡಿವಾಳ ಹಾಗೂ ಸೂರ್ಯ ನಗರ ಠಾಣೆಯ 9 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.