ಚಿನ್ನ ಕಳ್ಳಸಾಗಾಣೆ: ರನ್ಯಾ ರಾವ್‌ ಇನ್ನಿಬ್ಬರು ಆರೋಪಿಗಳ ಜತೆ ಸಂಬಂಧ ಹೊಂದಿರುವುದು ಎಫ್‌ ಎಸ್‌ ಎಲ್‌ ವರದಿಯಿಂದ ಸಾಬೀತು

Most read

ಬೆಂಗಳೂರು: ದುಬೈ ನಿಂದ ಚಿನ್ನವನ್ನು ಕಳ್ಳ ಸಾಗಾಣೆ ಮಾಡಿದ ಆರೋಪದ ಮೇಲೆ ಜೈಲಿನಲ್ಲಿರುವ ಚಿತ್ರನಟಿ ರನ್ಯಾ ರಾವ್‌ ಅವರಿಗೂ 2 ನೇ ಆರೋಪಿ ತರುಣ್‌ ಕೊಂಡೂರು ರಾಜು ಮತ್ತು 3 ನೇ ಆರೋಪಿ ಬಳ್ಳಾರಿ ಮೂಲದ ಅಮೆರಿಕ ದೇಶದ ಪ್ರಜೆ ಚಿನ್ನಾಭರಣ ವ್ಯಾಪಾರಿ ಸಾಹಿಲ್‌ ಸಕಾರಿಯಾ ಜೈ ಅವರಿಗೂ ಸಂಬಂಧ ಇದೆ ಎನ್ನುವುದನ್ನು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಪತ್ತೆಹಚ್ಚಿದೆ. ಈ ಸಂಬಂಧ ರನ್ಯಾ ಅವರ ಮೊಬೈಲ್‌ ಮತ್ತು ಲ್ಯಾಪ್‌ ಟಾಪ್‌ ಅನ್ನು ವಿಶ್ಲೇಷಿಸಿ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ವರದಿಯನ್ನು ಹೈಕೋರ್ಟ್‌ ಗೆ ಸಲ್ಲಿಸಿದೆ.
ತನಿಖೆಯ ಸಂದರ್ಭದಲ್ಲಿ ಕಂಡು ಬಂದ ಸ್ಫೋಟಕ ಮಾಹಿತಿಗಳನ್ನು ಕುರಿತು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸಮಯಾವಕಾಶ ನೀಡುವಂತೆಯೂ ಹೈಕೋರ್ಟ್‌ ಗೆ ಮನವಿ ಸಲ್ಲಿಸಿದೆ. ಸೋಮವಾರ ನ್ಯಾಯಮೂರ್ತಿ ಎಸ್.‌ ವಿಶ್ವನಾಥ್‌ ಅವರು ರನ್ಯಾ ರಾವ್‌ ಮತ್ತು ತರುಣ್‌ ಕೊಂಡೂರು ರಾಜು ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಇಂದಿಗೆ ಮುಂದೂಡಿದರು.
ರನ್ಯಾ ರಾವ್‌ ಮತ್ತು ತರುಣ್‌ ಕೊಂಡೂರು ರಾಜು ಇಬ್ಬರೂ ಸುಮಾರು 25ಕ್ಕೂ ಹೆಚ್ಚು ಬಾರಿ ಜತೆಯಲ್ಲಿ ದುಬೈಗೆ ತೆರಳಿ ಅಂದೇ ಬೆಂಗಳೂರಿಗೆ ಮರಳಿದ್ದಾರೆ. ದುಬೈ ನಲ್ಲಿ ಚಿನ್ನವನ್ನು ಯಾರು ಕೊಡುತ್ತಿದ್ದರು ಮತ್ತು ಬೆಂಗಳೂರಿಗೆ ತರಲು ಮಾಡಿಕೊಂಡಿದ್ದ ವ್ಯವಸ್ಥೆಯನ್ನು ಕುರಿತ ಸ್ಫೋಟಕ ಮಾಹಿತಿಯನ್ನೂ ಡಿಆರ್‌ ಐ ಸಂಗ್ರಹಿಸಿ ನ್ಯಾಯಾಲಯಕ್ಕೆ ನೀಡಿದೆ.
ದುಬೈನಲ್ಲಿ ತರುಣ್‌ ಕೊಂಡೂರು ರಾಜು ಚಿನ್ನವನ್ನು ರನ್ಯಾ ಅವರಿಗೆ ನೀಡುತ್ತಿದ್ದ. ತರುಣ್‌ ಗೆ ಜಿನೆವಾಗೆ ಟಿಕೆಟ್‌ ಬುಕ್‌ ಮಾಡಿದ್ದರೂ ಆತ ಬೆಂಗಳೂರಿಗೆ ಮರಳುತ್ತಿದ್ದ. ಹಣ ಪಾವತಿ ಮಾಡಲು ಕ್ರೆಡಿಟ್‌ ಕಾರ್ಡ್‌ ಗಳನ್ನು ಬಳಸಲಾಗುತ್ತಿತ್ತು. ರನ್ಯಾಗೆ ವಿವಾಹವಾಗುತ್ತಿದ್ದಂತೆ ನಗದು ಹಣವನ್ನು ಕೊಂಡೂರು ರಾಜು ಖಾತೆಗೆ ವರ್ಗಾಯಿಸಲಾಗುತ್ತಿತ್ತು. ಆ ಹಣದಿಂದ ಆತ ಪ್ರಯಾಣ ಬೆಳೆಸುತ್ತಿದ್ದ. ಪ್ರಕರಣದ 3 ನೇ ಆರೋಪಿ ಸಾಹಿಲ್‌ ಚಿನ್ನವನ್ನು ರನ್ಯಾ ಅವರಿಂದ ಸಂಗ್ರಹಿಸಿಕೊಳ್ಳುತ್ತಿದ್ದ ಮತ್ತು ವಿಲೇವಾರಿ ಮಾಡುತ್ತಿದ್ದ ಎಂಬ ವಿವರವನ್ನು ಡಿಆರ್‌ ಐ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಡಿಆರ್‌ ಐ ವಕೀಲರ ವಾದಕ್ಕೂ ಮುನ್ನ ರನ್ಯಾ ಪರ ವಕೀಲರು ವಾದಿಸಿ, ವಿಮಾನ ಪ್ರಯಾಣ ಅಪರಾಧವನ್ನು ಸಾಬೀತುಪಡಿಸಲು ಸಾಕಾಗುವುದಿಲ್ಲ. ರನ್ಯಾ ರಾವ್‌ ಅವರು 30ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದು ಅವರು ಗೋಲ್ಡ್ ಕಾರ್ಡ್‌ ಸೌಲಭ್ಯ ಹೊಂದಿದ್ದಾರೆ. ಅವರು ದುಬೈನಲ್ಲಿ ಕಂಪನಿ ಹೊಂದಿದ್ದು, ನಿವಾಸಿಯಾಗಿ ಅಲ್ಲಿ ನೆಲೆಸಲು ಅರ್ಹತೆ ಹೊಂದಿದ್ದಾರೆ. ಇವರ ಮೇಲೆ ಇದೇ ಮೊದಲ ಬಾರಿಗೆ ಆರೋಪ ಕೇಳಿ ಬಂದಿದೆ. ಡಿಜಿಪಿ ರಾಮಚಂದ್ರ ರಾವ್‌ ಅವರು ರನ್ಯಾ ಅವರ ಮಲತಂದೆಯಾಗಿರುವ ಕಾರಣ ಎಸ್ಕಾರ್ಟ್‌ ಸೌಲಭ್ಯ ಪಡೆದಿದ್ದಾರೆ ಎಂದು ವಾದಿಸಿದರು.
ಆಗ ಮಧ್ಯೆ ಪ್ರವೇಶಿಸಿದ ನ್ಯಾಯಮೂರ್ತಿಗಳು ವಿವಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ರನ್ಯಾ ಅವರ ತಂದೆ ಕಬ್ಬಿನಹಳ್ಳಿ ಸಿದ್ದೇಗೌಡ ಎಂದು ತೋರಿಸಲಾಗಿದೆ ಎಂದು ವಕೀಲರ ಗಮನಕ್ಕೆ ತಂದರು. ಆಗ ಪ್ರತಿಕ್ರಿಯಿಸಿದ ರನ್ಯಾ ವಕೀಲರು ರಾಮಚಂದ್ರ ರಾವ್‌ ಅವರು ಮಲತಂದೆಯಾಗಿದ್ದಾರೆ ಎಂದರು. ನ್ಯಾಯಾಲಯವು ಅಧಿಕಾರಿಗಳ ಸಂಬಂಧಿಗಳಿಗೂ ಎಸ್ಕಾರ್ಟ್‌ ಸೌಲಭ್ಯ ಸಿಗುವುದಿಲ್ಲ. ಆದರೆ ಇವರು ಹೇಗೆ ಪಡೆದುಕೊಂಡರು ಎಂದು ಮೌಖಿಕವಾಗಿ ಪ್ರಶ್ನಿಸಿದರು.
ತರುಣ್‌ ಪರ ವಕೀಲರು ವಾದಿಸಿ ಯಾರು ಬೇಕಾದರೂ ಚಿನ್ನ ಖರೀದಿಸಲು ದುಬೈ ಅನುಮತಿ ನೀಡಿದೆ. ಅದೇ ಚಿನ್ನವನ್ನು ಜಪ್ತಿ ಮಾಡಿದರೂ ರನ್ಯಾ ಕಸ್ಟಮ್ಸ್‌ ಶುಲ್ಕ ಪಾವತಿಸದಿದ್ದರೆ ತರುಣ್‌ ಜವಬ್ದಾರಿ ಆಗುವುದಿಲ್ಲ ಎಂದರು.

More articles

Latest article