ಬೆಂಗಳೂರು: ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ರನ್ಯಾರಾವ್ ಗೆ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಪ್ರಕರಣದ 2ನೇ ಆರೋಪಿ ತರುಣ್ ಕೊಂಡರಾಜುವಿಗೂ ಜಾಮೀನು ಮಂಜೂರಾಗಿದೆ. ವಿಚಾರಣೆ ನಡೆಸಿದ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಮಂಜೂರಾಗಿದ್ದರೂ ರನ್ಯಾ ರಾವ್ ಮತ್ತು ಆಕೆಯ ಇಬ್ಬರು ಸಹಚರರಾದ ತರುಣ್ ಕೊಡೂರು ರಾಜು ಹಾಗೂ ಸಾಹಿಲ್ ಸಕರಿಯಾ ಜೈನ್ ಅವರನ್ನು ಕಠಿಣ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ 1974 (COFEPOSA ಕಾಯ್ದೆ, 1974) ಅಡಿಯಲ್ಲಿ ಬಂಧಿಸಿರುವುದರಿಂದ ಜೈಲಿನಿಂದ ಬಿಡುಗಡೆ ಆಗುವುದಿಲ್ಲ ಎಂದು ವಕೀಲರು ಹೇಳುತ್ತಾರೆ.
ಕಂದಾಯ ಗುಪ್ತಚರ ನಿರ್ದೇಶನಾಲಯದ ಶಿಫಾರಸಿನಂತೆ ರನ್ಯಾರಾವ್ ಮತ್ತು ಇತರ ಆರೋಪಿಗಳ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ (CEIB) COFEPOSA ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆ ಅನ್ವಯ ಆರೋಪಿ ರನ್ಯಾ ರಾವ್‌ಗೆ ಒಂದು ವರ್ಷ ಜಾಮೀನು ಪಡೆಯಲು ಅವಕಾಶವಿರುವುದಿಲ್ಲ.
ಇಬ್ಬರು ಶ್ಯೂರಿಟಿ, 2 ಲಕ್ಷ ರೂ. ಬಾಂಡ್ ಮೇಲೆ ಜಾಮೀನು ನೀಡಲಾಗಿದ್ದು, ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾದಂತೆ ಹಾಗೂ ದೇಶ ಬಿಟ್ಟು ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ.
ತನಿಖೆಗೆ ಸಹಕಾರ ನೀಡದಿದ್ದರಿಂದ ಮತ್ತು ತನಿಖೆಯ ಸಲುವಾಗಿ ರನ್ಯಾ ವಿರುದ್ಧ ಕಾಫಿಪೋಸಾ ಕಾಯಿದೆ ಜಾರಿಗೊಳಿಸಲಾಗಿತ್ತು. ರನ್ಯಾರಾವ್ ಅವರನ್ನು ಬಿಡುಗಡೆಗೊಳಿಸಿದರೆ ಮತ್ತೆ ಆಕೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ಎಂದು ಡಿಆರ್ ಐ ಆತಂಕ ವ್ಯಕ್ತಪಡಿಸಿತ್ತು. ಕಾಫಿಪೋಸಾ ಕಾಯಿದೆಯ ವಿರುದ್ಧ ರನ್ಯಾ ರಾವ್ ವಕೀಲರು ಹೈಕೋರ್ಟ್ ನಲ್ಲಿ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ.
ರನ್ಯಾ ಅವರನ್ನು ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿ ಆಕೆಯಿಂದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.