ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಚಿತ್ರ ನಟಿ ರನ್ಯಾ ರಾವ್ ಬಂಧನವಾಗಿದ್ದು, ಡಿಆರ್ ಐ ಹಾಗೂ ಸಿಬಿಐ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿವೆ. ಮತ್ತೊಂದು ಕಡೆ ರನ್ಯಾ ಅವರ ಮಲತಂದೆ ಡಿಐಜಿ ರಾಮಚಂದ್ರರಾವ್ ಅವರ ಪ್ರಭಾವ ಕುರಿತು ತನಿಖೆ ನಡೆಸಲು ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ನೇಮಿಸಲಾಗಿದೆ. ಈ ರನ್ಯಾರಾವ್ ವಿಮನ ನಿಲ್ದಾಣದಿಂದ ಸುಲಭವಾಗಿ ಯಾವುದೇ ತಪಾಸಣೆ ಇಲ್ಲದೆ ಹೊರಬರುತ್ತಿದ್ದರು. ಈ ಪ್ರಕರಣದಲ್ಲಿ ಪೊಲೀಸರ ಲೋಪ ಕುರಿತು ತನಿಖೆ ನಡೆಸಲು ಸಿಐಡಿಗೆ ವಹಿಸಲಾಗಿದೆ. ಈ ಮಧ್ಯೆ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ತಾತ್ಕಾಲಿಕವಾಗಿ ಬಂಧನದಿಂದ ಪಾರಾಗಿದ್ದಾರೆ. ಬಂಧನದ ಭೀತಿಯಿಂದ ಜತಿನ್ ಹುಕ್ಕೇರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸುವಂತಿಲ್ಲ ಎಂದು ಇಂದು ಮಹತ್ವದ ಆದೇಶ ನೀಡಿದೆ.
ಪತ್ನಿ ರನ್ಯಾ ಮೇಲಿನ ಆರೋಪಕ್ಕೂ ಜತಿನ್ ಅವರಿಗೂ ಸಂಬಂಧವಿಲ್ಲ. ಡಿಆರ್ ಐ ಅಧಿಕಾರಿಗಳು ಸಮನ್ಸ್ ನೀಡಿದಾಗ ತನಿಖೆಗೆ ಸಹಕರಿಸಿದ್ದಾರೆ. ಎರಡನೇ ಬಾರಿಯೂ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನ ಪಾಲಿಸದೇ
ಬಂಧಿಸುವ ಸಾಧ್ಯತೆಗಳಿವೆ ಎಂದು ಜತಿನ್ ಪರ ವಕೀಲರು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಕಾನೂನಿನ ಪ್ರಕ್ರಿಯೆ ಪಾಲಿಸದೇ ಜತಿನ್ ಅವರನ್ನು ಬಂಧಿಸದಂತೆ ಆದೇಶ ಹೊರಡಿಸಿದೆ.
ಈಕೆ ಪದೇ ಪದೇ ವಿದೇಶಕ್ಕೆ ಹೋಗಿ ಬರುತ್ತಿರುವ ಮಾಹಿತಿಯನ್ನು ರನ್ಯಾ ಪತಿಯೇ ಸೋರಿಕೆ ಮಾಡಿರಬಹುದೇ ಎಂಬ ಅನುಮಾನವೂ ಕಾಡುತ್ತಿದೆ. ಏಕೆಂದರೆ ಮದುವೆಯಾದ ಕೆಲವೇ ದಿನಗಳಿಂದ ರನ್ಯಾ ದುಬೈಗೆ ಪದೇ ಪದೇ ಹೋಗಿ ಬರುತ್ತಿದ್ದರು. ಈಕೆಯ ಸಂಶಯಾಸ್ಪದ ವರ್ತನೆಯಿಂದ ಇವರ ಸಂಸಾರದಲ್ಲಿ ಬಿರುಕು ಮೂಡಿತ್ತು. ರನ್ಯಾ ಅವರ ವಿದೇಶ ಪ್ರವಾಸದಿಂದ ದಂಪತಿ ನಡುವೆ ಇರಿಸುಮುರಿಸು ಉಂಟಾಗಿತ್ತು ಮತ್ತು ಜಗಳ ನಡೆದಿತ್ತು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಪರಸ್ಪರ ವಿವಾಹ ವಿಚ್ಛೇದನ ಪಡೆಯಲೂ ನಿರ್ಧರಿಸಿದ್ದರು ಎಂಬ ಮಾಹಿತಿ
ಲಭ್ಯವಾಗುತ್ತಿದೆ. ಈ ವಿಷಯವನ್ನು ರನ್ಯಾ ಪತಿ ಸಚಿವರೊಬ್ಬರಿಗೆ ತಿಳಿಸಿದ್ದಾರೆ. ಅವರು ಡಿಆರ್ ಐ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿರುವ ಅನುಮಾನವೂ ಕಾಡುತ್ತಿದೆ.