ನಾಳೆಯಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆರಂಭ: ಸಚಿವ ಎಂ.ಬಿ. ಪಾಟೀಲ

Most read

ಬೆಂಗಳೂರು:  ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್‌ ಕರ್ನಾಟಕ 2025ಕ್ಕೆ ಆತಿಥ್ಯ ವಹಿಸಲು ಕರ್ನಾಟಕ ರಾಜ್ಯ ಸರ್ಕಾರವು ಸಜ್ಜಾಗಿದ್ದು, ನಾಳೆ, ಮಂಗಳವಾರ  ಮಧ್ಯಾಹ್ನ ಚಾಲನೆ ನೀಡಲಾಗುತ್ತದೆ. ನಾಲ್ಕು  ದಿನಗಳ ಕಾಲ ಸಮಾವೇಶ ನಡೆಯಲಿದೆ.

ಈ ಹೂಡಿಕೆದಾರರ ಸಮಾವೇಶವು, ಕರ್ನಾಟಕವನ್ನು  ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ. ನಾವೀನ್ಯತೆ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದಲ್ಲಿನ ಸೌಲಭ್ಯಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಇದು ವೇದಿಕೆ  ಒದಗಿಸಲಿದೆ. ವಿವಿಧ ಕ್ಷೇತ್ರಗಳ ದಿಗ್ಗಜರು ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಪ್ರಗತಿಯ ಭವಿಷ್ಯ ರೂಪಿಸಲು ತಮ್ಮ ಒಳನೋಟಗಳನ್ನು ನೀಡಲಿದ್ದಾರೆ.

ಮೊದಲ ದಿನ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಸರ್ಕಾರ: ಅನಿಶ್ಚಿತ ಜಗತ್ತಿನಲ್ಲಿ ಡಿಜಿಟಲ್ ಕ್ಷಮತೆ ನಿರ್ಮಾಣ (AI, Cybersecurity, and Government: Building Digital Resilience in an Uncertain World) ಕುರಿತು ತಜ್ಞರು ಮಾತನಾಡಲಿದ್ದಾರೆ.

  ಮಧ್ಯಾಹ್ನ ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ  ಸಾಧಿಸುವುದು ವಿಷಯ ಕುರಿತು ಅರ್ಥಶಾಸ್ತ್ರಜ್ಞ, ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಬಾಷಣ ಮಾಡಲಿದ್ದಾರೆ. ಭವಿಷ್ಯಕ್ಕೆ ನಾವೀನ್ಯತೆ (Innovating the Future) ಕುರಿತು ನಥಿಂಗ್‌-ನ ಸಹ-ಸಂಸ್ಥಾಪಕ ಮತ್ತು ಮಾರಾಟ ಮುಖ್ಯಸ್ಥ ಅಕಿಸ್ ಇವಾಂಜೆಲಿಡಿಸ್ ಮುಖ್ಯ ಭಾಷಣ ಮಾಡಲಿದ್ದಾರೆ. ಭಾರತದ ಭವಿಷ್ಯ  ರೂಪಿಸುತ್ತಿರುವ ಯುವ ನಾವೀನ್ಯಕಾರರು (Leading the Charge: Young Innovators Shaping India’s Future) ಕುರಿತು ಜೆಎಸ್‌ಡಬ್ಲ್ಯು ಸಿಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ : ಪಾರ್ಥ್ ಜಿಂದಾಲ್ ಮಾತನಾಡಲಿದ್ದಾರೆ.

ಕೈಗಾರಿಕಾ ಸಚಿವ  ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ  ಇನ್ವೆಸ್ಟ್ ಕರ್ನಾಟಕ 2025 ಕೈಗಾರಿಕಾ ಬೆಳವಣಿಗೆ, ನಾವೀನ್ಯತೆ ಮತ್ತು ಜಾಗತಿಕ ಸಹಯೋಗ  ಬೆಳೆಸುವ ರಾಜ್ಯದ ಬದ್ಧತೆಗೆ ನಿದರ್ಶನವಾಗಿದೆ. ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜೊತೆಗಿನ ಒಪ್ಪಂದಗಳ ಮೂಲಕ ಶೈಕ್ಷಣಿಕ ಹಾಗೂ ಉದ್ಯಮದ ಪಾಲುದಾರಿಕೆಗಳನ್ನು ಬಲಪಡಿಸುವಂತಹ ಪ್ರಮುಖ ಉಪಕ್ರಮಗಳನ್ನು ಮುನ್ನಡೆಸುವಲ್ಲಿ ಸಚಿವ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಕರ್ನಾಟಕವು ಅತ್ಯಾಧುನಿಕ ಕೈಗಾರಿಕೆಗಳಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನದಲ್ಲಿ ಮುಂದುವರೆಯುವುದನ್ನು ಖಚಿತಪಡಿಸಿಕೊಳ್ಳಲು ಇವರು ಕ್ವಿನ್‌ ಸಿಟಿ ಉಪಕ್ರಮವನ್ನು ಮುನ್ನಡೆಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಶೃಂಗಸಭೆಯು, ವಿವಿಧ ಕೈಗಾರಿಕಾ ವಲಯಗಳಲ್ಲಿ ಜಾಗತಿಕ ಪಾಲುದಾರಿಕೆ ಬೆಳೆಸುವುದರ ಜೊತೆಗೆ, ನಾವೀನ್ಯತೆ ಮತ್ತು ಹೂಡಿಕೆ ಕೇಂದ್ರವಾಗಿರುವ  ಕರ್ನಾಟಕದ ಮಹತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆ. ಸಮಾವೇಶದ ಕಾರ್ಯಕ್ರಮಗಳ ವಿವರಗಳಿಗೆ  https://investkarnataka.co.in/gim2025/events-schedule/ ಭೇಟಿ ನೀಡಬಹುದಾಗಿದೆ.

More articles

Latest article