ನವದೆಹಲಿ: ಜಾಗತಿಕ ಲಿಂಗ ಸಮಾನತೆಯ ಅಂತರದ ಪಟ್ಟಿಯಲ್ಲಿ ಭಾರತ ದೇಶವು ಎರಡು ಸ್ಥಾನದ ಕುಸಿತ ಕಂಡಿದ್ದು, 131 ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಭಾರತ 129 ನೇ ಸ್ಥಾನದಲ್ಲಿತ್ತು. ವಿಶ್ವ ಆರ್ಥಿಕ ವೇದಿಕೆ ಇಂದು ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಕಿ ಅಂಶಗಳು ವ್ಯಕ್ತವಾಗಿವೆ.
ಈ ವರದಿಯ ಪ್ರಕಾರ, ಸತತ 16ನೇ ವರ್ಷವೂ ಐಸ್ ಲ್ಯಾಂಡ್ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದರೆ ಫಿನ್ ಲ್ಯಾಂಡ್ ಎರಡನೇ ಸ್ಥಾನ, ನಾರ್ವೆ ಮೂರನೇ ಸ್ಥಾನ, ಬ್ರಿಟನ್ ನಾಲ್ಕನೇ ಮತ್ತು ನ್ಯೂಜಿಲೆಂಡ್ ಐದನೇ ಸ್ಥಾನದಲ್ಲಿವೆ. ಭಾರತವು ಕೇವಲ ಶೇ 64.1 ರಷ್ಟು ಅಂಕಗಳೊಂದಿಗೆ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕಿತ ದೇಶಗಳಲ್ಲಿ ಒಂದಾಗಿದೆ.
ಜಾಗತಿಕವಾಗಿ ಪ್ರಮುಖ ಉದ್ಯಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಎಷ್ಟಿದೆ ಎಂಬುದನ್ನು ವರದಿ ವಿಶ್ಲೇಷಣೆಗೆ ಒಳಪಡಿಸಿದೆ. ಜಾಗತಿಕ ಲಿಂಗ ಅಂತರ ಸೂಚ್ಯಂಕವನ್ನು ಪ್ರಮುಖ 4 ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಆರ್ಥಿಕ ಪಾಲ್ಗೊಳ್ಳುವಿಕೆ (ಉದ್ಯೋಗ), ಶೈಕ್ಷಣಿಕ ಸಾಧನೆ (ಶಿಕ್ಷಣ), ಆರೋಗ್ಯ ಮತ್ತು ರಾಜಕೀಯ ಸಬಲೀಕರಣದ ಆಧಾರದಲ್ಲಿ ನಿರ್ಧಾರ ಮಾಡಲಾಗುತ್ತದೆ.
ಉದ್ಯೋಗ, ಶಿಕ್ಷಣ ಮತ್ತು ರಾಜಕೀಯದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು, ಪುರುಷರಿಗೆ ಇರುವ ಅವಕಾಶಗಳಿಗಿಂತ ತುಂಬಾ ಕಡಿಮೆ ಇದೆ. ಈ ಕ್ಷೇತ್ರಗಳಲ್ಲಿ ಪುರುಷರಿಗೆ ದೊರೆಯುತ್ತಿರುವ ಅವಕಾಶಗಳು ಮತ್ತು ಮಹಿಳೆಯರಿಗೆ ಲಭ್ಯವಿರುವ ಅವಕಾಶಗಳ ನಡುವಣ ವ್ಯತ್ಯಾಸವನ್ನೇ ‘ಲಿಂಗ ಸಮಾನತೆಯ ಅಂತರ’ ಎನ್ನಲಾಗುತ್ತದೆ. ವಿಶ್ವದ 148 ದೇಶಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಜಾಗತಿಕವಾಗಿ ಲಿಂಗ ಅಂತರವು ಶೇ 68.8ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.