ಕೊಪ್ಪಳ: ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಹಾಲವರ್ತಿ ಗ್ರಾಮದಲ್ಲಿ ಬಲ್ಡೋಟಾ ಕಂಪನಿ ಆರಂಭಿಸಲಿರುವ ರಾಜ್ಯದ ಎರಡನೇ ಅತಿದೊಡ್ಡ ಸ್ಟೀಲ್ ಆ್ಯಂಡ್ ಪವರ್ ಪ್ಲ್ಯಾಂಟ್ ಕೈಗಾರಿಕೆ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕಾರ್ಖಾನೆಯಿಂದ ಜಿಲ್ಲೆಗೆ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಕೊಪ್ಪಳ ನಿವಾಸಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬಕಾರಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕಾರ್ಖಾನೆ ವಿರೋಧಿ ಹೋರಾಟಕ್ಕೆ ಕೊಪ್ಪಳದ ಸುಪ್ರಸಿದ್ಧ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದ ಹೊರವಲಯದಲ್ಲಿ ಎಂಎಸ್ಪಿಎಲ್ ಸ್ಟೀಲ್ ಘಟಕವಿದ್ದು, ಇದೀಗ ಅದರ ವಿಸ್ತರಣೆಗೆ ಮುಂದಾಗಿದೆ. ಸುಮಾರು 54 ಸಾವಿರ ಕೋಟಿ ರೂಪಾಯಿ ಬಂಡವಾಳವನ್ನು ಹೂಡುತ್ತಿದ್ದು, ಇಲ್ಲಿ ವಾರ್ಷಿಕ 10.50 ಮಿಲಿಯನ್ ಟನ್ ಉತ್ಪಾದನೆ ಸಾಮಾರ್ಥ್ಯದ ಘಟಕದ ನಿರ್ಮಾಣಕ್ಕೆ ಮುಂದಾಗಿದೆ. ದಶಕಗಳ ಹಿಂದೆಯೇ 380 ರೈತರಿಂದ ಒಂದು ಸಾವಿರ ಎಕರೆ ಭೂಮಿಯನ್ನು ಕಂಪನಿ ರೈತರಿಂದ ಖರೀದಿಸಿದ್ದು, ಇದೀಗ ಘಟಕ ಆರಂಭದ ಕೆಲಸ ಆರಂಭಿಸಿದೆ. ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೂಡಾ ಸರ್ಕಾರ ಮತ್ತು ಕಂಪನಿ ಒಡಬಂಡಿಕೆಗೆ ಸಹಿ ಹಾಕಿವೆ. ಈ ಘಟಕದಿಂದ 15 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಕಂಪನಿ ಪ್ರತಿಪಾದಿಸುತ್ತಿದೆ.
ಆದರೆ ಈ ಕೈಗಾರಿಕೆ ಸ್ಥಾಪನೆಯೇ ಕೊಪ್ಪಳ ಜಿಲ್ಲೆಯ ಜನರ ಸಂಕಟಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಈಗಾಗಲೇ ಕಾರ್ಖಾನೆಗಳಿಂದ ಹೊರಸೂಸುವ ದೂಳಿನಿಂದ ಕೊಪ್ಪಳ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯ ಹದಗೆಡುತ್ತಿದೆ. ಇದೀಗ ಬೃಹತ್ ಕೈಗಾರಿಕೆ ಆರಂಭದಿಂದ ಜನರ ಜೀವನ ಮತ್ತಷ್ಟು ಹಾಳಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾರ್ಖಾನೆ ಬೇಡ ಎಂದು ಇಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಖಾನೆ ಸ್ಥಾಪನೆಗೆ ವಿರೋಧಿ ಹೋರಾಟ ತೀರ್ವ ಸ್ವರೂಪ ಪಡೆಯುತ್ತಿದೆ. ಕಾರ್ಖಾನೆ ಸ್ಥಾಪನೆಗೆ ವಿರೋಧಿಸಿ ಈಗಾಗಲೇ ಪೆಬ್ರವರಿ 24 ಕ್ಕೆ ಕೊಪ್ಪಳ ಬಂದ್ ಕರೆ ನೀಡಲಾಗಿದೆ. ಬಲ್ಡೋಟಾ ಕಾರ್ಖಾನೆ ಸ್ಥಾಪನೆ ವಿರೋಧಿ ಹೋರಾಟಕ್ಕೆ ಕೊಪ್ಪಳ ಗವಿಮಠದ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಗವಿಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿದ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಘಟಕರು, ಹೋರಾಟಕ್ಕೆ ತಮ್ಮ ನೇತೃತ್ವ ಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಸ್ವಾಮೀಜಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ