ನೂತನ ದಂಪತಿಗಳು ವಿಳಂಬ ಮಾಡದೆ ಬೇಗನೆ ಮಕ್ಕಳನ್ನು ಹೆರಬೇಕು: ತಮಿಳುನಾಡು ಸಿಎಂ

Most read

ನಾಗಪಟ್ಟಣ (ತಮಿಳುನಾಡು): ಸಂಸತ್ತಿನಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ನೂತನ ದಂಪತಿಗಳು ವಿಳಂಬ ಮಾಡದೆ ಬೇಗನೆ ಮಕ್ಕಳನ್ನು ಹೇರಬೇಕು ಎಂದು ಕರೆ ನೀಡಿದ್ದಾರೆ

ನಾಗಪಟ್ಟಣದಲ್ಲಿ ಡಿಎಂಕೆ ಪಕ್ಷದ ಕಾರ್ಯಕರ್ತರೊಬ್ಬರ ಪುತ್ರನ ವಿವಾಹ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಸಂಸದರ ಸಂಖ್ಯೆ ರಾಜ್ಯದ ಜನಸಂಖ್ಯೆಯ ಮೇಲೆ ಅವಲಂಬಿತವಾಗಿದೆ. ಜನಸಂಖ್ಯೆ ಆಧಾರಿತ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯು ತಮಿಳುನಾಡಿನ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ನೂತನ ದಂಪತಿಗಳು ಹೆಚ್ಚು ಮಕ್ಕಳನ್ನು ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಮೊದಲು ನಾವು ನಿಮ್ಮ ಸಮಯ ಮತ್ತು ಅನುಕೂಲ ನೋಡಿಕೊಂಡು ಮಕ್ಕಳನ್ನು ಪಡೆಯಿರಿ ಎಂದು ಹೇಳುತ್ತಿದ್ದೆವು. ಆದರೆ, ಈಗ ಅದರ ಅಗತ್ಯವಿಲ್ಲ, ಅದನ್ನೂ ಹೇಳುವುದೂ ಇಲ್ಲ. ನಾವು ಕುಟುಂಬ ಯೋಜನೆಗೆ ಹೆಚ್ಚು ಒತ್ತು ನೀಡಿದ್ದೆವು. ಇದರಿಂದಾಗಿ ಸಮಸ್ಯೆ ಎದುರಾಗುತ್ತಿದೆ. ಸದ್ಯ ಜನಸಂಖ್ಯೆಯ ಆಧಾರದ ಮೇಲೆ ಸಂಸದರ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಹಾಗಾಗಿ ನೂತನ ದಂಪತಿಗಳು ತಕ್ಷಣ ಮಕ್ಕಳನ್ನು ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

ಸಂಸದರ ಸಂಖ್ಯೆಯು ಜನಸಂಖ್ಯೆಯೊಂದಿಗೆ ನೇರ ಸಂಬಂಧ ಹೊಂದಿದೆ. ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯಿಂದಾಗಿ ಉತ್ತರ ಪ್ರದೇಶದಂತಹ ಇತರ ರಾಜ್ಯಗಳಿಗೆ ಹೆಚ್ಚು ಲಾಭವಾಗಲಿದೆ. 39 ಸಂಸದರನ್ನು ಹೊಂದಿರುವ ನಾವು ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಸಂಸತ್‌ನಲ್ಲಿ ರಾಜ್ಯದ ಸಂಸದರ ಸಂಖ್ಯೆ ಹೆಚ್ಚಿದಷ್ಟೂ ಬೇಡಿಕೆಗಳ ಈಡೇರಿಕೆಗೆ ಹೋರಾಡಬಹುದಾಗಿದೆ ಎಂದು ಸಿಎಂ ಸ್ಟಾಲಿನ್ ಪ್ರತಿಪಾದಿಸಿದ್ದಾರೆ.

ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಸಂಬಂಧ ಚರ್ಚೆ ನಡೆಸಲು ಸರ್ವಪಕ್ಷ ಸಭೆ ಕರೆಯಲಾಗಿದೆ. ಎಲ್ಲಾ ಪಕ್ಷಗಳ ನಾಯಕರು ತಪ್ಪದೆ ಸಭೆಗೆ ಹಾಜರಾಗುವಂತೆ ಸ್ಟಾಲಿನ್ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

More articles

Latest article