ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂಬ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ ಗೌರವ್ ವಲ್ಲಬ್ ಕೆಲವೇ ಗಂಟೆಗಳಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ.
ನಾನು ಸನಾತನ ವಿರೋಧಿ ಘೋಷಣೆಗಳನ್ನು ಕೂಗಲಾರೆ, ದೇಶದ ಸಂಪತ್ತನ್ನು ಸೃಷ್ಟಿಸುವವರನ್ನು (ದೊಡ್ಡ ಉದ್ಯಮಿಗಳು) ಟೀಕಿಸಲಾರೆ, ಅದಕ್ಕಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಗೌರವ್, ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಗೌರವ್ ಅವರೊಂದಿಗೆ ಬಿಹಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅನಿಲ್ ಶರ್ಮಾ ಕೂಡ ಬಿಜೆಪಿ ಸೇರ್ಪಡೆಗೊಂಡರು.
ಐದು ಟ್ರಿಲಿಯನ್ ನಲ್ಲಿ ಎಷ್ಟು ಸೊನ್ನೆಗಳಿವೆ ಹೇಳಿ ಎಂದು ಬಿಜೆಪಿ ವಕ್ತಾರ ಸಂಭಿತ್ ಪಾತ್ರ ಅವರನ್ನು ಟೀವಿ ಸಂವಾದವೊಂದರಲ್ಲಿ ಕೇಳಿ ಕಕ್ಕಾಬಿಕ್ಕಿಗೊಳಿಸಿದ್ದ ಗೌರವ್, ಬಿಜೆಪಿಯ ಅತಿದೊಡ್ಡ ಟೀಕಾಕಾರರಂತೆ ಕಂಡುಬಂದಿದ್ದರು. ಆದರೆ ಇಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರೆದ ಪತ್ರದಲ್ಲಿ, ಪಕ್ಷದ ನಿಲುವುಗಳಿಂದಾಗಿ ನನಗೆ ಕಿರಿಕಿರಯಾಗುತ್ತಿದೆ. ಪಕ್ಷ ಯುವ ಜನತೆಯನ್ನು ಹೊಸ ವಿಚಾರಗಳಿಂದ ಸೆಳೆಯಲು ವಿಫಲವಾಗಿದೆ ಎಂದು ಹೇಳಿದ್ದರು.
ಅಯೋಧ್ಯೆ ರಾಮಮಂದಿರದ ವಿಷಯದಲ್ಲಿ ಪಕ್ಷದ ನಿಲುವು ನನಗೆ ಒಪ್ಪಿಗೆಯಾಗಲಿಲ್ಲ. ನಾನು ಹುಟ್ಟಿನಿಂದಲೂ ಹಿಂದೂ, ವೃತ್ತಿಯಿಂದ ಶಿಕ್ಷಕ. ಪಕ್ಷದ ನಿಲುವುಗಳು ನನಗೆ ಸದಾ ಕಿರಿಕಿರಿ ಮೂಡಿಸುತ್ತಿತ್ತು. ಪಕ್ಷದ ಜೊತೆ ಗುರುತಿಸಿಕೊಂಡ ಹಲವರು ಸದಾ ಸನಾತನದ ವಿರುದ್ಧ ಮಾತನಾಡುತ್ತಿದ್ದಾಗ ಪಕ್ಷ ಇದಕ್ಕೆ ಅನುಮೋದನೆ ನೀಡಿದಂತೆ ಸುಮ್ಮನಿತ್ತು.
ಪಕ್ಷ ತಪ್ಪು ದಾರಿಯಲ್ಲಿ ಸಾಗುತ್ತಿದೆ ಎಂದು ನನಗೆ ಸದಾ ಅನ್ನಿಸುತ್ತಿತ್ತು. ಒಂದು ಕಡೆ ಪಕ್ಷ ಜಾತಿ ಜನಗಣತಿ ನಡೆಯಬೇಕು ಎನ್ನುತ್ತದೆ ಮತ್ತೊಂದೆಡೆ ಇಡೀ ಹಿಂದೂ ಸಮಾಜವನ್ನು ವಿರೋಧಿಸುತ್ತದೆ. ಇದು ಸಾರ್ವಜನಿಕರಿಗೆ ತಪ್ಪು ಸಂದೇಶಕ್ಕೆ ನೀಡುತ್ತಿತ್ತು. ಪಕ್ಷ ಕೇವಲ ಒಂದು ಸಮುದಾಯದ ಪರ ಇದೆ ಎಂಬ ಭಾವನೆ ಮೂಡುತ್ತಿತ್ತು. ಇದು ಪಕ್ಷದ ಮೂಲ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂದು ಖರ್ಗೆಯವರಿಗೆ ಬರೆದ ಪತ್ರದಲ್ಲಿ ಗೌರವ್ ವಲ್ಲಭ್ ಹೇಳಿದ್ದರು.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿದ್ದರೂ ಗೌರವ್ ಚುನಾವಣಾ ರಾಜಕಾರಣದಲ್ಲಿ ಸಫಲರಾಗಿರಲಿಲ್ಲ. 2023ರಲ್ಲಿ ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತಾವರ್ ಚಂದ್ ಜೈನ್ ಎದುರು ಅವರು ಭಾರೀ ಅಂತರದಿಂದ ಸೋತಿದ್ದರು. ಇದಕ್ಕೂ ಮುನ್ನ 2019ರಲ್ಲಿ ಜಾರ್ಖಂಡ್ ನ ಜಮ್ ಶೆಡ್ ಪುರ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೇವಲ 18,000 ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.