ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BSY) ವಿರುದ್ಧ ಪೋಕ್ಸೋ (POCSO) ಅಡಿಯಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಪ್ರತಿಕ್ರಿಯೆ ನೀಡಿದ್ದು, ಇದೊಂದು ಸೂಕ್ಷ್ಮ ವಿಚಾರ, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ 17 ವರ್ಷದ ಬಾಲಕಿ ಮತ್ತು ಆಕೆಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಗೆ ಬಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ಇಷ್ಟೇ ಮಾಹಿತಿ ನಮ್ಮ ಬಳಿ ಇದೆ ಎಂದು ತಿಳಿಸಿದ್ದಾರೆ.
ಇದೊಂದು ಬಹಳ ಸೂಕ್ಷ್ಮ ವಿಷಯವಾಗಿದೆ. ಯಾಕೆಂದರೆ ಇದರಲ್ಲಿ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಯ ಹೆಸರಿದೆ ಎಂದು ಅವರು ಹೇಳಿದರು.
ಪ್ರಕರಣದಲ್ಲಿ ರಾಜಕೀಯ ಕೈವಾಡ ಇರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ರಾಜಕೀಯ ಕೋನವನ್ನು ನೀಡಬೇಡಿ, ಆ ಮಹಿಳೆ ನಮಗೆ ಗೊತ್ತಿಲ್ಲ, ಆಕೆಯ ಕುರಿತೂ ನಮಗೆ ಏನೇನೂ ಗೊತ್ತಿಲ್ಲ. ಆಕೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಲಾಗಿದೆ ಎಂಬುದಷ್ಟೇ ನಮಗೆ ಗೊತ್ತು ಎಂದು ಹೇಳಿದರು.
ಈ ನಡುವೆ ತಾಯಿ-ಮಗಳು ತಮಗೆ ಅನ್ಯಾಯವಾಗಿದೆಯೆಂದು ನನ್ನ ಬಳಿ ಬಂದಿದ್ದು ನಿಜ. ಅವರಿಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಕಮಿಷನರ್ ಗೆ ವಿನಂತಿಸಿದ್ದೆ. ಈಗ ನನ್ನ ವಿರುದ್ಧವೇ ದೂರು ದಾಖಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ತಾಯಿ ಮಗಳು ತಮಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಹಲವು ಬಾರಿ ತಮ್ಮ ಬಳಿಗೆ ಬಂದಿದ್ದು ನಿಜ. ನಾನು ಈ ಸಂಬಂಧ ಪೊಲೀಸ್ ಕಮಿಷನರ್ ಗೆ ಕರೆ ಮಾಡಿ ಅವರಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ, ಈ ಕುರಿತು ವಿಚಾರಣೆ ನಡೆಸಿ ನ್ಯಾಯ ಕೊಡಿಸಿ ಎಂದು ಹೇಳಿದ್ದೆ. ನಂತರ ಅವರು ನನ್ನ ವಿರುದ್ಧವೇ ಮಾತನಾಡಲು ಆರಂಭಿಸಿದರು. ನಿನ್ನೆ ಅವರು ಪ್ರಕರಣ ದಾಖಲಿಸಿದ್ದಾರೆ ಎಂಬ ವಿಷಯ ತಿಳಿಯಿತು. ಮುಂದೇನಾಗುತ್ತೋ ನೋಡೋಣ ಎಂದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜಕೀಯ ಕೈವಾಡ ಏನಾದರೂ ಇರಬಹುದೇ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಹಾಗೇನೂ ಕಾಣುತ್ತಿಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು.
ನಿನ್ನೆ 17 ವರ್ಷದ ಬಾಲಕಿ ಮತ್ತು ಆಕೆಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಗೆ ಬಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದರು. ಸಮಸ್ಯೆ ಹೇಳಿಕೊಳ್ಳಲು ಯಡಿಯೂರಪ್ಪ ಅವರ ಬಳಿಗೆ ಹೋದಾಗ ಬಾಲಕಿಯನ್ನು ಕೊಠಡಿಗೆ ಕರೆಯಿಸಿಕೊಂಡು ಬಾಗಿಲು ಹಾಕಿಕೊಂಡು ಲೈಂಗಿಕ ಕಿರುಕುಳ ನೀಡಿದರು ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.