ಬೆಂಗಳೂರು ಮಾರ್ಚ 28 : ಆರ್.ಸಿ.ಬಿಯ ಎಡಗೈ ವೇಗಿ ಮಂಗೇಶ್ರವರ ತಂದೆ ತಮ್ಮ ಆರಂಭಿಕ ದಿನಗಳ ಬವಣೆಯ ಬಗ್ಗೆ ಮಾತನಾಡಿದರು. “ಒಬ್ಬ ಟ್ರಕ್ ಡ್ರೈವರ್ ಜೀವನ ಅಷ್ಟು ಸುಲಭವಲ್ಲ. ನಮಗೆ ಸರಿಯಾಗಿ ಊಟವಾಗಲಿ ಅಥವಾ ಸ್ನಾನವಾಗಲಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಗಾಡಿ ಲೋಡ್ ಆಗಿದ್ದರೆ ಅದನ್ನು ಇಳಿಸುವ ಚಿಂತೆ, ಖಾಲಿ ಇದ್ದರೆ ಮತ್ತೆ ಲೋಡ್ ಮಾಡುವ ಆತಂಕ. ಹೀಗೆ ನಮ್ಮ ಜೀವನ ಸಾಗುತ್ತಿತ್ತು,” ಎಂದು ನೆನಪಿಸಿಕೊಂಡರು.
ಇವತ್ತು ಬೆಂಗಳೂರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಆರ್.ಸಿ.ಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಭಾರಿ ಪೈಪೋಟಿ ಪದ್ಯ ನಡೆಯಲಿದೆ. ಈ ಪದ್ಯದಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದ ಮಂಗೇಶ್, ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ, ಯುವ ವೇಗಿಯ ಪಾಲಿಗೆ ಇವತ್ತಿನ ದಿನ ಕನಸು ನನಸಾದ ಕ್ಷಣವಾಗಿದೆ, ಆದರೆ ಇದರ ಹಿಂದಿನ ಹೋರಾಟ ಮಾತ್ರ ಅಸಾಧಾರಣವಾದುದು.

ಕುಟುಂಬದ ತ್ಯಾಗದಿಂದ ಹಿಡಿದು, ಬಾಲ್ಯದ ಕೋಚ್ ಮತ್ತು ತರಬೇತುದಾರರು ಆತನನ್ನು ರೂಪಿಸಲು ಪಟ್ಟ ಶ್ರಮದವರೆಗೆ ಆತನ ಪಯಣ ಸ್ಫೂರ್ತಿದಾಯಕವಾಗಿದೆ. ಆರ್‌ಸಿಬಿ ‘ಬೋಲ್ಡ್ ಡೈರೀಸ್’ನ (RCB Bold Diaries) ಇತ್ತೀಚಿನ ಸಂಚಿಕೆಯಲ್ಲಿ ಮಂಗೇಶ್ ಯಾದವ್, ಅವರ ತಂದೆ ಮತ್ತು ಬಾಲ್ಯದ ಕೋಚ್ ಫೂಲ್ ಚಂದ್ ಶರ್ಮಾ ಅವರು ತಮ್ಮ ಜೀವನದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ತಮ್ಮ ಬಾಲ್ಯದ ಬಗ್ಗೆ ಮಾತನಾಡುತ್ತಾ ಮಂಗೇಶ್, “ನಾನು ಚಿಕ್ಕವನಿದ್ದಾಗ ಆಟವಾಡಲು ಹೋದಾಗ ಮಕ್ಕಳು ಪರಸ್ಪರ ಜಗಳವಾಡುತ್ತಿದ್ದರು, ಆಗ ನಾನು ಅಳುತ್ತಾ ಮನೆಗೆ ಹೋಗುತ್ತಿದ್ದೆ,” ಎಂದರು. ಇದಕ್ಕೆ ಧ್ವನಿಗೂಡಿಸಿದ ಅವರ ತಂದೆ, “ನಾನು ಯಾರ ಜೊತೆಯೂ ಆಡುವುದಿಲ್ಲ, ನನಗೆ ಬ್ಯಾಟ್ ಮತ್ತು ಬಾಲ್ ತಂದುಕೊಡಿ ಎಂದು ಅವನು ಹಠ ಹಿಡಿಯುತ್ತಿದ್ದ. ನಾವು ಬ್ಯಾಟ್-ಬಾಲ್ ತಂದುಕೊಟ್ಟ ಮೇಲೆ, ಅವರ ಅಮ್ಮನೇ ಮನೆಯ ಸಣ್ಣ ಅಂಗಳದಲ್ಲಿ ಆತನಿಗೆ ಬೌಲಿಂಗ್ ಮಾಡುತ್ತಿದ್ದರು, ಇವನು ಬ್ಯಾಟಿಂಗ್ ಮಾಡುತ್ತಿದ್ದ,” ಎಂದು ಮಂಗೇಶ್ ಕ್ರಿಕೆಟ್ ಪ್ರೇಮವನ್ನು ಸ್ಮರಿಸಿದರು.
ಟೆನಿಸ್ ಬಾಲ್ ಮತ್ತು ರಬ್ಬರ್ ಬಾಲ್ ಕ್ರಿಕೆಟ್ ಮೂಲಕ ಮಂಗೇಶ್ ವೃತ್ತಿಜೀವನ ಆರಂಭವಾಯಿತು. ಹಳ್ಳಿಯಲ್ಲಿ ಮಂಗೇಶ್ ಆಡುವುದನ್ನು ನೋಡಿದ ಅವರ ಚಿಕ್ಕಪ್ಪ, ಇವನು ವೃತ್ತಿಪರವಾಗಿ ಕ್ರಿಕೆಟ್ ಆಡಬಲ್ಲ ಎಂದು ಗುರುತಿಸಿ ಆತನನ್ನು ದೆಹಲಿಯ ಫೂಲ್ ಸರ್ ಅವರ ಬಳಿ ಕಳುಹಿಸಿಕೊಟ್ಟರು.
ಆದರೆ ದೆಹಲಿಯಂತಹ ನಗರದಲ್ಲಿ ಜೀವನ ನಿರ್ವಹಣೆ ದುಬಾರಿಯಾಗಿತ್ತು. ಮಂಗೇಶ್ ತಂದೆ ಆರ್ಥಿಕ ಸಂಕಷ್ಟದ ಬಗ್ಗೆ ಹೇಳುತ್ತಾ, “ಅವನ ಖರ್ಚು ವೆಚ್ಚಗಳಿಗಾಗಿ ನಾನು ಬಹಳ ಕಷ್ಟಪಡಬೇಕಾಯಿತು. ಹಣದ ಹೊಂದಾಣಿಕೆಗಾಗಿ ಅನೇಕ ಬಾರಿ ರಾತ್ರಿ ಪೂರ್ತಿ ನಿದ್ದೆಯಿಲ್ಲದೆ ಲಾರಿ ಚಲಾಯಿಸುತ್ತಾ ಯೋಚಿಸುತ್ತಿದ್ದೆ. ನನಗೆ ಪರಿಚಯವಿದ್ದವರ ಬಳಿ ಹಣಕ್ಕಾಗಿ ಕೇಳುತ್ತಿದ್ದೆ. ಅವನ ಖರ್ಚು ಮತ್ತು ನನ್ನ ಜೀವನದ ನಿರ್ವಹಣೆಗಾಗಿ ನಾನು ನಡೆಸಿದ ಹೋರಾಟ ನಿಜಕ್ಕೂ ಕಠಿಣವಾಗಿತ್ತು,” ಎಂದು ಭಾವುಕರಾದರು.

