ಜಿಎಸ್‌ ಟಿ ಸರಳೀಕರಣದಿಂದ ಕಾರ್ಪೋರೇಟ್‌ ಉದ್ಯಮಿಗಳಿಗೆ ಹೆಚ್ಚಿನ ಲಾಭ; ಸಚಿವರಾದ ಪ್ರಿಯಾಂಕ್ ಖರ್ಗೆ, ಜಮೀರ್‌ ಅಹಮದ್‌ ಪ್ರತಿಕ್ರಿಯೆ

Most read

ಬೆಂಗಳೂರು: ಒಟ್ಟು ಜಿಎಸ್‌ಟಿ ಮೊತ್ತದಲ್ಲಿ ಶೇ. 64 ರಷ್ಟು ಬಡವರು ಮತ್ತು ಮಧ್ಯಮ ವರ್ಗದವರ ಜೇಬಿನಿಂದ ಬರುತ್ತದೆ. ಕೇವಲ ಶೇ. 3 ರಷ್ಟು ಜಿಎಸ್‌ಟಿಯನ್ನುಮಾತ್ರ  ಕೋಟ್ಯಾಧಿಪತಿಗಳಿಂದ ಸಂಗ್ರಹಿಸಲಾಗುತ್ತದೆ. ಆದರೆ ಕಾರ್ಪೊರೇಟ್ ತೆರಿಗೆ ದರವನ್ನು ಶೇ. 30 ರಿಂದ ಶೇ. 22ಕ್ಕೆ ಇಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಆಪಾದಿಸಿದ್ದಾರೆ.

 ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಜಿಎಸ್‌ ಟಿ ತೆರಿಗೆ ಸರಳೀಕರಣವನ್ನು ವಿಶ್ಲೇಷಿಸಿರುವ ಅವರು ಗಬ್ಬರ್‌ಸಿಂಗ್‌ ಟ್ಯಾಕ್ಸ್‌ನಲ್ಲಿ ಮೋದಿ ಸರ್ಕಾರಕ್ಕೆ ಈಗ ಸ್ವಲ್ಪ ಸಾಮಾನ್ಯ ಜ್ಞಾನ ಬಂದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಜಿಎಸ್‌ಟಿಯನ್ನು ಸರಳೀಕರಿಸಬೇಕೆಂದು ಒಂದು ದಶಕದಿಂದ ಕಾಂಗ್ರೆಸ್ ಒತ್ತಾಯಿಸುತ್ತಾ ಬಂದಿತ್ತು. “ಒಂದು ರಾಷ್ಟ್ರ, ಒಂದು ತೆರಿಗೆ” ಎಂಬುದು “ಒಂದು ರಾಷ್ಟ್ರ 9 ತೆರಿಗೆ ಎಂಬಂತಾಗಿತ್ತು”. 0%, 5%, 12%, 18%, 28%, ಮತ್ತು ವಿಶೇಷ ದರಗಳು 0.25%, 1.5%, 3% ಮತ್ತು 6%” ಆಗಿಬದಲಾಗಿದ್ದವು ಎಂದು ಅವರು ಟೀಕಿಸಿದ್ದಾರೆ.

ಜಿಎಸ್‌ ಟಿ ದರವನ್ನು ಶೇ. 18ರ ಮಿತಿ ಅಥವಾ ಅದಕ್ಕಿಂತ ಕಡಿಮೆಗೊಳಿಸುವಂತೆ ಕಾಂಗ್ರೆಸ್‌ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿತ್ತು. ಕಾಂಗ್ರೆಸ್ ತನ್ನ 2019 ಮತ್ತು 2024 ರ ಪ್ರಣಾಳಿಕೆಗಳಲ್ಲಿ GST- 2.0ಗೆ ಒತ್ತಾಯಿಸಿತ್ತು ಎಂದಿದ್ದಾರೆ.

ಜಮೀರ್‌ ಅಹಮದ್‌ ಟೀಕೆ:

ಜಿಎಸ್ ಟಿ ಸ್ಲಾಬ್ ಪರಿಷ್ಕರಣೆ ಯಿಂದ ಕೇವಲ ಉದ್ಯಮಿಗಳಿಗೆ ಮಾತ್ರ ಲಾಭವಾಗಲಿದ್ದು ಬಡವರಿಗೆ ಹೆಚ್ಚಿನ ರೀತಿಯ ಉಪಯೋಗವಾಗದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಡವರಿಗೆ ಮನೆ ಕಟ್ಟಿ ಕೊಡುವ ವಸತಿ ಯೋಜನೆಗಳಿಗೆ ಜಿಎಸ್ ಟಿ ವಿನಾಯಿತಿ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಬಡವರ ಹೊರೆ ಕಡಿಮೆ ಮಾಡುವ ಬದಲು ಮತ್ತಷ್ಟು ಹೆಚ್ಚು ಮಾಡಲಾಗಿದೆ. ಪ್ರಧಾನಿ ಹಾಗೂ ಹಣಕಾಸು ಸಚಿವರು ಈ ಬಗ್ಗೆ ಮತ್ತೆ ಪರಿಶೀಲನೆ ಮಾಡಿ ವಸತಿ ಯೋಜನೆ ಗಳಿಗೆ ಜಿ ಎಸ್ ಟಿ ವಿನಾಯಿತಿ ನೀಡಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಬಡವರ ಪರ ಕಾಳಜಿ ತೋರಬೇಕು ಎಂದು ಆಗ್ರಹಿಸಿದ್ದಾರೆ.

More articles

Latest article