“ನೀವು ಗಾಂಧಿಯಂತೆ ವ್ಯವಹರಿಸುತ್ತೀರಿ. ಇಷ್ಟು ವರ್ಷ ಕೆಲಸ ಮಾಡಿಯೂ ನಿಮಗೆ ಕೆಲಸಗಳನ್ನು ಮಾಡಿಸಿಕೊಳ್ಳುವ ಕಲೆಯು ಕರಗತವಾಗಿಲ್ಲ. ಪ್ರಾಮಾಣಿಕತೆ ಇದ್ದರೆ ಸಾಲದು. ಚಾಲಾಕಿತನವೂ ಇರಬೇಕು. ಯಾರ ಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡರೂ, ಮೈಗೆ ಎಣ್ಣೆ ಹಚ್ಚಿಕೊಂಡ ಪೈಲ್ವಾನನಂತೆ ನುಣುಚಿ ಪಾರಾಗುವ ಕಲೆ ಗೊತ್ತಿರಬೇಕು. ನೀವೂ ಹೀಗೆಯೇ ಕಾಲೆಳೆದುಕೊಂಡು ಹೋಗುತ್ತಿದ್ದರೆ, ನಿಮ್ಮ ಕೆಳಗಿನವರು ನಿಮ್ಮನ್ನು ಓವರ್ ಟೇಕ್ ಮಾಡಿಕೊಂಡು ಹೋಗಿಬಿಡುತ್ತಾರೆ ನೋಡಿ…”, ಆತ ಕಾರ್ಪೋರೆಟ್ ಭೂತವನ್ನು ಆವಾಹಿಸಿಕೊಂಡವನಂತೆ ಮಾತನಾಡುತ್ತಲೇ ಇದ್ದ – ʼಮೆಟ್ರೋ ಟೈಮ್ಸ್ʼ ಅಂಕಣದಲ್ಲಿ ಪ್ರಸಾದ್ ನಾಯ್ಕ್, ದೆಹಲಿ.
ಮೆಟ್ರೋ ಟೈಮ್ಸ್ – 5
“ನನ್ನ ಬೆಡ್ರೂಮಿನಲ್ಲಿ ನನಗೆ ಬಹಳ ಮುಖ್ಯವಾದ ಎರಡು ಸಂಗತಿಗಳಿವೆ: ಒಂದು ನನ್ನ ಹೆಂಡತಿ, ಇನ್ನೊಂದು ನನ್ನ ಪೆನ್ನು-ನೋಟ್ ಪ್ಯಾಡ್. ಮ್ಯಾನೇಜ್‌ಮೆಂಟ್‌ನಿಂದ ಯಾರದ್ದಾದರೂ ಕರೆ ಬಂದರೆ, ನಾನು ಥಟ್ಟನೆ ಪೆನ್ನು-ನೋಟ್ ಪ್ಯಾಡ್ ಕೈಗೆತ್ತಿ ನೋಟ್ಸ್ ಮಾಡಿಕೊಳ್ಳುತ್ತೇನೆ. ಮಾಡಬೇಕಿರುವ ಕೆಲಸವನ್ನು ಮುಗಿಸುತ್ತೇನೆ…”
ಮಧ್ಯವಯಸ್ಸಿನ ಅವರು ಹಾಗೆ ಹೇಳುತ್ತಿದ್ದರೆ ನಮಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಆತ ಪ್ರತಿಷ್ಠಿತ ಸರಕಾರಿ ಸಂಸ್ಥೆಯೊಂದರಲ್ಲಿ ಹಿರಿಯ ಅಧಿಕಾರಿ. ಸಂಬಳ ಚೆನ್ನಾಗಿದೆ. ಅಲ್ಲಲ್ಲಿ ಲಂಚ ಹುಟ್ಟಿಸುವ ಪ್ರಾಜೆಕ್ಟುಗಳು ಆತನ ಸುಪರ್ದಿಯಲ್ಲಿವೆ. ಷೇರ್ ಮಾರ್ಕೆಟ್ ಮೇಲಕ್ಕೂ ಕೆಳಕ್ಕೂ ಹೋದಾಗ ಇವರ ರಕ್ತದೊತ್ತಡಕ್ಕೂ ಆಗಾಗ ಕುತ್ತಾಗುವುದುಂಟು ಎಂಬುದನ್ನು ಬಿಟ್ಟರೆ ಸಂಪತ್ತು ಅಲ್ಲೂ ಹುಟ್ಟುತ್ತದೆ. ಕೈಗೊಬ್ಬ ಕಾಲಿಗೊಬ್ಬ ಎಂಬಂತೆ ಆಳುಗಳಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಅವರದ್ದು ಭಲೇ ಸುಖ ಜೀವನ ಎಂದು ಯಾರಿಗಾದರೂ ಅನ್ನಿಸಬೇಕು. ನಾನೂ ಹಾಗಂದುಕೊಂಡಿದ್ದೆ. ಮೇಲಿನ ನುಡಿಮುತ್ತನ್ನು ಕೇಳುವ ಕ್ಷಣದವರೆಗೂ!
ನಾನು ಗಮನಿಸಿರುವಂತೆ ಆತ ಆ ಸಂಸ್ಥೆಯ ಯಶಸ್ವಿ ನಾಯಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಅಧಿಕಾರಿಯೇನಲ್ಲ. ಅವರು ತಮ್ಮನ್ನು ಓರ್ವ ಯಶಸ್ವಿ ಅಧಿಕಾರಿ ಎಂದು ಯೋಚಿಸಿದ್ದರೆ ಅದು ಬೇರೆ ವಿಷಯ. ಬಹುಷಃ ಆ ಕಾರಣಕ್ಕಾಗಿಯೇ ಅವರು ನಮ್ಮಂತಹ ಎಳಸುಗಳಿಗೆ ಯಶಸ್ಸಿನ ಸೂತ್ರವನ್ನು ಹೇಳುತ್ತಿದ್ದರು. ಇದ್ಯಾವ ರೀತಿಯ ಕರ್ತವ್ಯನಿಷ್ಠೆ ಎಂಬುದು ನನಗಂತೂ ಗೊತ್ತಾಗಲಿಲ್ಲ. ಏಕೆಂದರೆ ತಲೆ ಹೋಗುವಂತಿನ ಯಾವ ಕೆಲಸಗಳನ್ನೂ ಆ ಸಂಸ್ಥೆಯು ನಿರ್ವಹಿಸುವುದಿಲ್ಲ. ಅಂತಹ ತುರ್ತುಗಳು ಅಪರೂಪಕ್ಕೊಮ್ಮೆ ಬಂದುಹೋದರೆ ಅದನ್ನೂ ಸರಿಯೆಂದು ಒಪ್ಪಿಕೊಳ್ಳೋಣ. ಆದರೆ ಅದು ನಿತ್ಯದ ಮಾತಾಯಿತು ಎಂದರೆ ಆ ವ್ಯವಸ್ಥೆಯಲ್ಲಿ ಹುಳುಕಿದೆ ಎಂದೇ ಹೇಳಬೇಕಾಗುತ್ತದೆ.
“ಪತ್ನಿ ಮತ್ತು ಪೆನ್ನು-ನೋಟ್ ಪ್ಯಾಡ್ ಗಳಲ್ಲಿ ಒಂದಕ್ಕೆ ನಿಷ್ಠನಾಗಿದ್ದರೂ ಈತ ಬಹುಷಃ ಖುಷಿಯಾಗಿರುತ್ತಿದ್ದ”, ಎಂದು ನಂತರ ಸಹೋದ್ಯೋಗಿಯೊಬ್ಬ ಹುಳ್ಳಗೆ ನಗೆಯಾಡಿದ. ನಿಷ್ಠೆ ಎಂಬುದು ಬಹಳ ತೂಕದ ಪದವಾಗಿದ್ದರಿಂದ ನಾನು ಪ್ರತಿಕ್ರಿಯೆಯನ್ನು ನೀಡುವ ಗೋಜಿಗೆ ಹೋಗದೆ ಸುಮ್ಮನಾಗಿಬಿಟ್ಟೆ. ಏಕೆಂದರೆ ಕಾರ್ಪೊರೆಟ್ ಸಂಸ್ಥೆಗಳಲ್ಲಿ ಗೋಡೆಗಳಿಗೆ ಮಾತ್ರ ಕಿವಿಯಿರುವುದಲ್ಲ. ಗಾಳಿಯಲ್ಲಿ ಅದೆಷ್ಟೋ ಕಣ್ಣಿಗೆ ಕಾಣದ ಕಿವಿಗಳು ವೈರಸ್ಸುಗಳಂತೆ ತೇಲಾಡುತ್ತಲೇ ಇರುತ್ತವೆ. ಪರಿಸ್ಥಿತಿಯು ಹೀಗಿರುವಾಗ ತಮ್ಮ ಜಾಗ್ರತೆಯಲ್ಲಿ ತಾವಿರುವುದು ಜಾಣತನ.
ಈ ಬಗೆಯ ಜೀವನಶೈಲಿಯನ್ನು ನಮ್ಮ ನಡುವಿನ ದೈತ್ಯ ಸಂಸ್ಥೆಗಳು ತಮ್ಮ ಉದ್ಯೋಗಿಗಳಲ್ಲಿ ಉತ್ತೇಜಿಸುತ್ತಿವೆಯಾ? ಇದು “ನಾಳೆ ನೀವೂ ಹೀಗಾಗಬೇಕು” ಎಂದು ನಮಗೆ ನೀಡಲಾಗುತ್ತಿರುವ ಮೋಟಿವೇಷನಲ್ ಭಾಷಣವೋ? “ನೋಡ್ತಾ ಇರಿ, ನಿಮಗೂ ಹೀಗಾಗಲಿದೆ” ಎಂಬ ಎಚ್ಚರಿಕೆಯೋ? ಅಥವಾ “ಇದೆಲ್ಲಾ ನಾರ್ಮಲ್. ಇದೇ ನಮ್ಮ ನ್ಯೂ ನಾರ್ಮಲ್” ಎಂದು ನಯ-ನಾಜೂಕಿನ ಲೇಪ ಹಚ್ಚಿಕೊಂಡು ಉದ್ಯೋಗಿಗಳಿಗೆ ಮಾಡಲಾಗುತ್ತಿರುವ ಮೆಂಟಲ್ ಪ್ರೋಗ್ರಾಮಿಂಗ್ ತಂತ್ರಗಳೋ?
***********
ಅಂದು ರಾಷ್ಟ್ರೀಯ ಸದ್ಭಾವನಾ ದಿವಸ.
ಆತನೂ ಓರ್ವ ಹಿರಿಯ ಅಧಿಕಾರಿ. ಆ ದಿನಕ್ಕೆಂದೇ ನಿರ್ಮಿಸಿದ್ದ ಪುಟ್ಟ, ತಾತ್ಕಾಲಿಕ ವೇದಿಕೆಯಲ್ಲಿ ಚೆನ್ನಾಗಿಯೇ ಭಾಷಣ ಮಾಡಿದ್ದ. ಚಪ್ಪಾಳೆಗಳು ಪರವಾಗಿಲ್ಲ ಎಂಬಷ್ಟು ಬಿದ್ದಿದ್ದವು. ಆತನ ಎದೆಯು ಹೆಮ್ಮೆಯಿಂದ ಉಬ್ಬಿಹೋಗಿತ್ತು. “ಹೆಂಗೆ ನಾನು? ಗಣ್ಯರ ಪಟ್ಟಿಯಲ್ಲಿಲ್ಲದಿದ್ದರೂ, ಯಾರನ್ನೋ ಗಡಿಬಿಡಿಯಲ್ಲಿ ಯಾಮಾರಿಸಿ ಮೈಕು ಕಿತ್ತುಕೊಂಡು ಭಾಷಣ ಮಾಡಿದೆ ನೋಡು…”, ಎಂಬಂತೆ ದೂರದಲ್ಲಿದ್ದ ಆತನದ್ದೇ ಬ್ಯಾಚಿನ ಮತ್ತೊಬ್ಬ ಅಧಿಕಾರಿಯತ್ತ ಕಣ್ಣು ಮಿಟುಕಿಸಿದ. ಅವನೂ ಇದಕ್ಕೆ ಉತ್ತರವೆಂಬಂತೆ ನಕ್ಕು ತನ್ನ ಸಮ್ಮತಿಯನ್ನು ಸೂಚಿಸಿದ. ಅಲ್ಲಿಗೆ ಆ ಬೆಳಗೂ ಎಂದಿನಂತೆ ಕಳೆದುಹೋಗಿತ್ತು.
ಅದೇ ದಿನ ಮಧ್ಯಾಹ್ನದ ಭೋಜನದ ಅವಧಿಯ ನಂತರ ಆತನ ಕ್ಯಾಬಿನ್ನಿನಿಂದ ಬರುತ್ತಿದ್ದ ಗದ್ದಲದ ದನಿ ಬಲು ಜೋರಾಗಿತ್ತು. ಸಂಸ್ಥೆಯ ಕೆಳಮಟ್ಟದ ಅಧಿಕಾರಿಯೊಬ್ಬ ತನಗೆ ನೇಮಿಸಲಾಗಿದ್ದ ಚಿಕ್ಕ ಕೆಲಸವೊಂದನ್ನು ಮಾಡಲು ವಿಫಲನಾಗಿದ್ದ. ಅದು ಅವತ್ತೇ ಆಗಬೇಕಿದ್ದ ಕೆಲಸವೇನೂ ಆಗಿರಲಿಲ್ಲ. ಅದರಿಂದ ಸಂಸ್ಥೆಗೆ ನಾಲ್ಕಾಣೆ ನಷ್ಟವೂ ಆಗಿರಲಿಲ್ಲ. ಪರಿಸ್ಥಿತಿಗಳು ಆ ಉದ್ಯೋಗಿಯ ನಿಯಂತ್ರಣಕ್ಕೆ ಮೀರಿದ್ದ ಪರಿಣಾಮವಾಗಿ, ನಾಳೆ ಮತ್ತೊಮ್ಮೆ ಪ್ರಯತ್ನಿಸಿ ನೋಡಿ ಸಾರ್ ಎಂದು ಸುಲಭವಾಗಿ ಸಾಗಹಾಕಬಹುದಿತ್ತು. ಆದರೆ ಸಾಹೇಬರು ಆ ಮೂಡಿನಲ್ಲಿರಲಿಲ್ಲವಲ್ಲ.
“ನೀವು ಗಾಂಧಿಯಂತೆ ವ್ಯವಹರಿಸುತ್ತೀರಿ. ಇಷ್ಟು ವರ್ಷ ಕೆಲಸ ಮಾಡಿಯೂ ನಿಮಗೆ ಕೆಲಸಗಳನ್ನು ಮಾಡಿಸಿಕೊಳ್ಳುವ ಕಲೆಯು ಕರಗತವಾಗಿಲ್ಲ. ಪ್ರಾಮಾಣಿಕತೆ ಇದ್ದರೆ ಸಾಲದು. ಚಾಲಾಕಿತನವೂ ಇರಬೇಕು. ಯಾರ ಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡರೂ, ಮೈಗೆ ಎಣ್ಣೆ ಹಚ್ಚಿಕೊಂಡ ಪೈಲ್ವಾನನಂತೆ ನುಣುಚಿ ಪಾರಾಗುವ ಕಲೆ ಗೊತ್ತಿರಬೇಕು. ನೀವೂ ಹೀಗೆಯೇ ಕಾಲೆಳೆದುಕೊಂಡು ಹೋಗುತ್ತಿದ್ದರೆ, ನಿಮ್ಮ ಕೆಳಗಿನವರು ನಿಮ್ಮನ್ನು ಓವರ್ ಟೇಕ್ ಮಾಡಿಕೊಂಡು ಹೋಗಿಬಿಡುತ್ತಾರೆ ನೋಡಿ…”, ಆತ ಕಾರ್ಪೋರೆಟ್ ಭೂತವನ್ನು ಆವಾಹಿಸಿಕೊಂಡವನಂತೆ ಮಾತನಾಡುತ್ತಲೇ ಇದ್ದ. ಆತನ ದನಿಯು ಅಂದು ಅದೆಷ್ಟು ಜೋರಾಗಿತ್ತೆಂದರೆ ಛೇಂಬರಿನ ಬಾಗಿಲು ಕೊಂಚವೇ ತೆರೆದಿದ್ದರೂ, ಆ ತೀಕ್ಷ್ಣವಾದ ಮಾತುಗಳು ಹೊರಗಿದ್ದ ಎಲ್ಲರಿಗೂ ಸ್ಪಷ್ಟವಾಗಿ ಕೇಳುತ್ತಿದ್ದವು.
ಇದೂ ಒಂದು ರೀತಿಯಲ್ಲಿ ಮೋಟಿವೇಷನಲ್ ಭಾಷಣವೇ. ಆದರೆ ಇಲ್ಲಿ ಸಮಯ-ಸಂದರ್ಭ ಮತ್ತು ಸನ್ನಿವೇಶಗಳು ಭಿನ್ನವಾಗಿದ್ದರಿಂದ ಅದು ಬೈಗುಳದ ರೂಪವನ್ನು ಪಡೆದುಕೊಂಡಿತ್ತು. ಏನಿದರ ಗೂಡಾರ್ಥ? ನಾನು ಚಾಲಾಕಿಯಾಗಿದ್ದರಿಂದಲೇ ಮೇಲಧಿಕಾರಿಯಾಗಿದ್ದೇನೆ ಅಂತಲೇ? ಪ್ರಾಮಾಣಿಕತೆಗಿಂತ ಚಾಲಾಕಿತನವೇ ಕೆಲಸಕ್ಕೆ ಬರುವ ಮೌಲ್ಯ ಅಂತಲೇ? ಹೇಗಾದರೂ ಮಾಡಿ ಉಳಿದವರನ್ನು ಹಿಂದಿಕ್ಕಿ ತಾನೊಬ್ಬ ಗೆಲ್ಲುವುದೊಂದೇ ಯಶಸ್ಸು ಅಂತಲೇ?
************
ಯಶಸ್ಸು ಎಂಬುದು ಸವಕಲು ಪದವಾಗಿ ಬದಲಾಗಿ ವರ್ಷಗಳೇ ಕಳೆದಿವೆ.
ಹಿಂದೆಲ್ಲಾ ಅವನೊಬ್ಬ ಯಶಸ್ವಿ ಮನುಷ್ಯ ಎಂದರೆ ನಾವು ಯೋಚನೆಗೆ ಬೀಳುತ್ತಿದ್ದೆವು. ಇವನ್ಯಾರು? ಯಶಸ್ವಿ ಶಿಕ್ಷಕನೇ? ಯಶಸ್ವಿ ರಾಜಕಾರಣಿಯೇ? ಯಶಸ್ವಿ ಕಲಾವಿದನೇ? ಯಶಸ್ವಿ ಉದ್ಯಮಿಯೇ? ಹೀಗೆ ಬಹಳಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದವು. ಕ್ರಮೇಣ ದುಡ್ಡು ಕೂಡಿಡುವುದೇ ಯಶಸ್ಸು ಎಂಬರ್ಥದಲ್ಲಿ ಪರಿಸ್ಥಿತಿಗಳು ಬದಲಾದ ಮೇಲೆ ಈ ಬಗೆಯ ಗೊಂದಲಗಳು ಈಗ ಮೂಡುವುದಿಲ್ಲ. ಯಶಸ್ಸು ಗಳಿಸುವುದು ಹೇಗೆ ಎಂಬ ಪಾಠವನ್ನು ಹಲವು ಬಗೆಗಳಲ್ಲಿ ಪ್ರಸ್ತುತಪಡಿಸುವ ಸೆಲ್ಫ್ ಹೆಲ್ಪ್ ಇಂಡಸ್ಟ್ರಿ ಇಂದು ಬಿಲಿಯನ್ ಗಟ್ಟಲೆ ಡಾಲರು ಬೆಲೆಬಾಳುವ ದೈತ್ಯ ಉದ್ಯಮ. ಒಳಗಿರುವ ವೈನ್ ಅದೇ. ಆದರೆ ಬಾಟಲ್ಲುಗಳು ಮಾತ್ರ ಹೊಸತು!
ಹೀಗಾಗಿಯೇ ಸರಕಾರಿ ನೌಕರನೊಬ್ಬ ಪ್ರಾಮಾಣಿಕನಾಗಿ ಕೆಲಸ ಮಾಡಿದರೆ, ಲಂಚ ಮುಟ್ಟದಿದ್ದರೆ ಆತ ದೈವಾಂಶಸಂಭೂತನಂತೆ (ಕನಿಷ್ಠಪಕ್ಷ ಹೊರಗಿನವರಿಗೆ; ಆ ವರ್ತುಲದಲ್ಲಿದ್ದವರಿಗೆ ಆತನೊಬ್ಬ ನಾಲಾಯಕ್ಕೇ!) ಕಾಣತೊಡಗುತ್ತಾನೆಯೇ ಹೊರತು, ಅದು ಆತನ ಆದ್ಯ ಕರ್ತವ್ಯ ಎಂದನಿಸುವುದೇ ಇಲ್ಲ. ಚಲನಚಿತ್ರಗಳಲ್ಲಿ ನಾಲ್ಕಾರು ಅಶ್ಲೀಲ ಜೋಕುಗಳು-ಎರಡು ಐಟಮ್ ಸಾಂಗ್ಸ್ ಗಳನ್ನು ತುರುಕದಿದ್ದರೆ ಅದು ಜನಪ್ರಿಯ ಚಿತ್ರಗಳ ಪಟ್ಟಿಗೆ ಸೇರುವುದೇ ಇಲ್ಲ. ನಾಲ್ಕು ದಿನಗಳಿಗೊಮ್ಮೆ ಅಸಂಬದ್ಧ ಮಾಡಿ ಸುದ್ದಿಗೆ ಗ್ರಾಸವಾಗದ ರಾಜಕಾರಣಿ ಇಂದಿನ ಕಾಲಮಾನಕ್ಕೆ ಮಹಾಬೋರು. ಇಂದು ನಟರಿಗೆ ನಟನೆಯಲ್ಲಿ, ಲೇಖಕರಿಗೆ ಬರವಣಿಗೆಯಲ್ಲಿ, ಹೋರಾಟಗಾರರಿಗೆ ಹೋರಾಟಗಳಲ್ಲಿ, ಅಧಿಕಾರಿಗಳಿಗೆ ತಮ್ಮ ಕರ್ತವ್ಯದಲ್ಲಿ, ರಾಜಕಾರಣಿಗಳಿಗೆ ತಮ್ಮ ಜನಸೇವೆಯಲ್ಲಿ… ತನ್ನ ಪಾಡಿಗೆ ತಾನೆಂಬಂತೆ ವ್ಯಸ್ತರಾಗಿ ಕಳೆದುಹೋಗುವ ವಿಲಾಸವಿಲ್ಲ. ಕೆಲಸ ಮಾಡುವುದು ಮೊದಲ ಭಾಗ. ನಂತರ ಅದನ್ನು ಮಾರ್ಕೆಟಿಂಗ್ ಮಾಡುವ ಕಸರತ್ತುಗಳದ್ದು ಬೇರೆಯದ್ದೇ ಆಟ.
ಹಿಂದೆ ಉದ್ಯಮಕ್ಷೇತ್ರಗಳಲ್ಲಿರುವ ನೈತಿಕ ಮೌಲ್ಯಗಳ ಬಗ್ಗೆ ಮಾತಾಡುವಾಗಲೆಲ್ಲಾ ಟಾಟಾರವರ ಕತೆಗಳನ್ನು ಉದ್ಧರಿಸಲಾಗುತ್ತಿತ್ತು. ನಾನು ಹಿಂದೊಮ್ಮೆ ಓದಿದ್ದ ಚಂದದ ಸತ್ಯಕತೆಯಲ್ಲಿ ದೈತ್ಯ ಕೋಲ್ಡ್ ಡ್ರಿಂಕ್ ಕಂಪೆನಿಯೊಂದರ ಸೀಕ್ರೆಟ್ ಫಾರ್ಮುಲಾ ಒಂದು, ತನ್ನ ಪ್ರತಿಸ್ಪರ್ಧಿ ಕಂಪೆನಿಯ ಉದ್ಯೋಗಿಯೊಬ್ಬನ ಕೈಸೇರುತ್ತದೆ. ಕಾರ್ಮಿಕನೊಬ್ಬನ ಕಣ್ತಪ್ಪಿನಿಂದ ಆಗಿದ್ದ ಅವಾಂತರವಾಗಿತ್ತದು. ಇತ್ತ ಇದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವುದು ದ್ರೋಹ ಎಂಬುದನ್ನು ಅರಿಯುವ ಆತ, ಆ ಕಟ್ಟನ್ನು ಅಷ್ಟೇ ಶಿಸ್ತಿನಿಂದ ತಲುಪಿಸಬೇಕಾದಲ್ಲಿ ಸುರಕ್ಷಿತವಾಗಿ ತಲುಪಿಸುತ್ತಾನೆ. ನಂತರ ಪ್ರತಿಸ್ಪರ್ಧಿ ಕಂಪೆನಿಯ ಮುಖ್ಯಸ್ಥ ಖುದ್ದು ಕರೆ ಮಾಡಿ ಆ ನೌಕರನನ್ನು ಅಭಿನಂದಿಸಿದನಂತೆ. ಬಹುಷಃ ಚಾಲಾಕಿತನ, ಬಕೆಟ್ಟು, ಫಾಸ್ಟು, ರ್ಯಾಟ್ ರೇಸ್… ಇತ್ಯಾದಿ ಪದಗಳು ಆಗಿನ ಸಮಯದಲ್ಲಿ ಟ್ರೆಂಡ್ ಆಗಿರಲಿಲ್ಲವೇನೋ!
ಅಷ್ಟಕ್ಕೂ ಒತ್ತಡವನ್ನು ನಮ್ಮ ಬದುಕಿನ ಭಾಗವಾಗಿಸಿದ್ದು ಯಾರು? ಹಾಗೆ ಮಾಡಿದವರ ಹಿತಾಸಕ್ತಿಗಳೇನು? ಪ್ರಾಡಕ್ಟಿವಿಟಿಯ ಹೆಸರಿನಲ್ಲಿ ಏಕೆ ಅನಗತ್ಯ ತುರ್ತುಗಳನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತದೆ? ಹೇಗೆ ವ್ಯವಸ್ಥೆಯೊಂದು ಪ್ರಾಮಾಣಿಕನೊಬ್ಬನನ್ನು ಅನಿವಾರ್ಯವಾಗಿ ಭ್ರಷ್ಟನನ್ನಾಗಿಸುತ್ತದೆ? ನೀನು ಹುಟ್ಟಿದ್ದೇ ದುಡಿಯುವುದಕ್ಕಾಗಿ, ಕಾಸು ಕೂಡಿಡುವುದಕ್ಕಾಗಿ ಎಂಬ ಭ್ರಮೆಗಳನ್ನು ಸೃಷ್ಟಿಸಲಾಗುತ್ತದೆ? ಕೊನೆಗೆ ಲೋಕರೂಢಿಗೆ ತಕ್ಕಂತೆ ಎಲ್ಲವನ್ನು ಗಳಿಸಿದರೂ ಇಲ್ಲದ ಖಾಲಿತನವೊಂದು ಏಕೆ ಹುಟ್ಟಿಬಿಡುತ್ತದೆ? ಬರೀ ಇದಕ್ಕೇನಾ ಇಷ್ಟೆಲ್ಲಾ ಕೈ-ಕಾಲು ಬಡಿದಿದ್ದು ಎಂಬ ವೈರಾಗ್ಯವೊಂದು ವಯಸ್ಸಲ್ಲದ ವಯಸ್ಸಿನಲ್ಲಿ ಏಕೆ ಥಟ್ಟನೆ ಕಾಡತೊಡಗುತ್ತದೆ?
ಈ ನಿಟ್ಟಿನಲ್ಲಿ ಲೈಫ್ ಕೋಚ್ ಮುಕೇಶ್ ಖತ್ರಿಯವರು ಹೇಳುವ “ಮಿಲಿಯನೇರ್” ಮತ್ತು “ಹ್ಯಾಪೀ ಮಿಲಿಯನೇರ್” ಪರಿಕಲ್ಪನೆಗಳು ನನಗೆ ಬಹಳ ಅರ್ಥಪೂರ್ಣ ಅನ್ನಿಸುತ್ತದೆ. “ಮಿಲಿಯನೇರ್” ಆದರೆ ಸಾಲುವುದಿಲ್ಲ. “ಹ್ಯಾಪೀ ಮಿಲಿಯನೇರ್” ಆದರೇನೇ ಅದಕ್ಕೊಂದು ಸಾರ್ಥಕತೆ ಎಂಬುದು ಅವರ ವಾದ. ಅವರು ಹೇಳುವಂತೆ ಈ ಜಗತ್ತಿನಲ್ಲಿ ಸಾಕಷ್ಟು ಮಿಲಿಯನೇರ್ ಗಳಿದ್ದಾರೆ. ಆದರೆ ಅಷ್ಟಿದ್ದೂ ಸಂತೋಷವಾಗಿರುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೋಟ್ಯಾಧಿಪತಿಯಾದ ನಂತರವೂ ಖುಷಿ-ಸಂತೃಪ್ತಿಗಳಿಲ್ಲ ಎಂದಾದ ಮೇಲೆ ಆ ಕೋಟಿ ಇದ್ದರೇನು ಹೋದರೇನು?
ಸ್ಪರ್ಧೆ, ಮಹಾತ್ವಾಕಾಂಕ್ಷೆ, ಒತ್ತಡಗಳೇನೇ ಇರಲಿ. ಬೆಡ್ರೂಮಿನ ಹಂತದವರೆಗೂ ಹೋಗುವಷ್ಟು ಅವುಗಳನ್ನು ಸಡಿಲ ಬಿಟ್ಟರೆ ಬಹಳ ಕಷ್ಟ!
ಪ್ರಸಾದ್ ನಾಯ್ಕ್
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ; ‘ಹಾಯ್ ಅಂಗೋಲಾ’; ಮತ್ತು ‘ಸಫಾ’ ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.