Thursday, May 23, 2024

“ಒಂದು ಮಿನಿ ಮಳೆಯ ಕಥೆ”

Most read

ಪ್ರಕೃತಿಯು ಚಿಕ್ಕದಾಗಿ ಮುನಿಸಿಕೊಂಡಾಗಲೇ ಮಾನವ ನಿರ್ಮಿತ ನಗರಗಳ ಬಣ್ಣಗಳು ಆಗಾಗ ಕಳಚಿಬೀಳುತ್ತವೆ. ʼಸ್ಮಾರ್ಟ್ʼ ಕಿರೀಟವು ಅಚಾನಕ್ಕಾಗಿ ಭಾರವೆನಿಸತೊಡಗುತ್ತದೆ. ಒಟ್ಟಿನಲ್ಲಿ ಮಹಾನಗರಗಳ ಹಣೆಬರಹವೇ ಇಷ್ಟೆಂದು ನಗರವಾಸಿಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಿಕೊಂಡುಬಿಟ್ಟಿದ್ದೇವೆ. ಹೀಗಾಗಿ ಹೊಸದಾಗಿ ಹುಟ್ಟಿಕೊಂಡ ನಗರಗಳಲ್ಲಿ ಹಳೆಯ ಸಮಸ್ಯೆಗಳು ಕಾಡತೊಡಗಿದಾಗ ನಮಗೆ ಅಚ್ಚರಿಯೂ ಆಗುವುದಿಲ್ಲ. ಕನಿಷ್ಠಮಟ್ಟದ ಹಳಹಳಿಕೆಯೂ ಮೂಡುವುದಿಲ್ಲ- ಪ್ರಸಾದ್‌ ನಾಯ್ಕ್‌ , ದೆಹಲಿ

ಮೆಟ್ರೋ ಟೈಮ್ಸ್‌ -4

“ಎಂಥಾ ಮಳೆ ಸಾರ್”, ಎಂದರವರು.

“ಇದು ಮಳೆ ಅಲ್ಲ, ಮಜಾಕ್ ಅಷ್ಟೇ”, ಎಂದ ಮತ್ತೊಬ್ಬ.

ನಾಲ್ಕೈದು ತಿಂಗಳುಗಳ ಭರ್ಜರಿ ಮಾನ್ಸೂನ್ ಅವಧಿಯನ್ನು ನೋಡಿ ಬಂದಿರುವ ಭಾರತದ ಕರಾವಳಿ ಪ್ರದೇಶದ ಮಂದಿಗೆ ದಿಲ್ಲಿಯಂತಹ ಶಹರಗಳಲ್ಲಿ ಸುರಿಯುವ ಮಳೆಯು ಮಳೆಯೆಂಬಂತೆ ಅನ್ನಿಸುವುದೇ ಇಲ್ಲ. ಹೀಗಾಗಿ ಇಲ್ಲಿಯ ಮಳೆಯು ಅವರಿಗೆ ಮಜಾಕಿನಂತೆ ಕಾಣುತ್ತದೆ. ಹಾಗಿದ್ದರೂ ಜುಲೈ ತಿಂಗಳ ಚಿಕ್ಕದೊಂದು ಮಳೆಯು ಇಡೀ ಗುರುಗ್ರಾಮವನ್ನು ಕೆಲ ತಾಸುಗಳ ಕಾಲ ಅಕ್ಷರಶಃ ನಿಶ್ಚಲವಾಗಿಸಿಬಿಟ್ಟಿತ್ತು. ಥೇಟು “ತುಮ್ ಮಿಲೇ” ಚಿತ್ರದಲ್ಲಿ ಬರುವ, ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡು ಇಷ್ಟಿಷ್ಟೇ ಮುಳುಗುವ ಮುಂಬೈ ಮಹಾನಗರಿಯಂತೆ. ಮಹಾನಗರಗಳಿಗೆ ಸಾಮಾನ್ಯವಾಗಿ ನಿಲ್ಲುವ ಜಾಯಮಾನವಿಲ್ಲದಿರುವುದರಿಂದ ಇದೊಂದು ಅಪರೂಪದ ಸಂಗತಿಯೂ ಹೌದು.

ಅಂದು ಸಂಜೆ ನಮ್ಮ ತಂಡವು ಆರೂವರೆಯ ಹೊತ್ತಿಗೆ ಆಫೀಸು ಬಿಟ್ಟು ಹೊರಟಾಗಿತ್ತು. ನಮಗದು ಎಂದಿಗಿಂತ ಬೇಗದ ಸಮಯ. ಕಳೆದೊಂದು ತಾಸಿನಿಂದ ನಿರಂತರ ಮಳೆಯಾಗುತ್ತಲೇ ಇದ್ದ ಪರಿಣಾಮವಾಗಿ ಕೊಂಚ ಮುಂಜಾಗ್ರತೆಯೆಂಬಂತೆ ನಾವು ಒಂದರ್ಧ ತಾಸು ಬೇಗನೆ ಆಫೀಸಿನಿಂದ ಹೊರಟಿದ್ದೆವು. ಆದರೆ ಹೊರಟು ತಪ್ಪು ಮಾಡಿಬಿಟ್ಟೆವು ಎಂಬ ಜ್ಞಾನೋದಯವಾಗಲು ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ವಾಹನವನ್ನು ಹಿಂದಕ್ಕೆ ತಿರುಗಿಸಿ ಆಫೀಸಿಗೆ ಮತ್ತೆ ಹೋಗಿಬಿಡೋಣ, ಇಲ್ಲಿದ್ದರೆ ತಾಸುಗಟ್ಟಲೆ ಇಲ್ಲೇ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ನಮ್ಮ ಸಾರಥಿ ಹೇಳಿದಾಗ ಕೂತಿದ್ದ ಉಳಿದವರಿಗೆ ಬೇರೆ ಆಯ್ಕೆಗಳಿರಲಿಲ್ಲ. ಹೀಗಾಗಿ ಮತ್ತೆ ಅಫೀಸಿಗೆ ತೆರಳಿ, ನಿಮಿಷಗಳು ಕಳೆದಂತೆ ತೀವ್ರವಾಗುತ್ತಿದ್ದ ಸಂಜೆಯ ಟ್ರಾಫಿಕ್ ಅನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡು ಮತ್ತೆ ಹೊರಡುವುದೆಂದು ತೀರ್ಮಾನವಾಯಿತು.

ಆದರೆ ಹಾಗೆ ಹೊರಡುವುದೆಂದರೆ ಮನದಲ್ಲಿ ಯೋಚಿಸಿದಷ್ಟು ಸುಲಭವಲ್ಲವಲ್ಲ. ಮಳೆಯ ಕಾಲದಲ್ಲಿ ಮಹಾನಗರಿಗಳು ಅಕ್ಷರಶಃ ಚಕ್ರವ್ಯೂಹದಂತಾಗುತ್ತವೆ. ವಾಹನ ಚಾಲಕರು ಸಮೂಹಸನ್ನಿಯಲ್ಲಿ ಬುದ್ಧಿಭ್ರಮಣೆಗೊಳಗಾದವರಂತೆ ಎಲ್ಲಾ ಕಡೆಯಿಂದ, ಸಿಕ್ಕಸಿಕ್ಕಲ್ಲಿ ನುಗ್ಗಿಸಲು ಪ್ರಯತ್ನಿಸುತ್ತಿರುತ್ತಾರೆ. ವಾಹನಗಳ ಚಕ್ರಗಳು ನಿಂತಲ್ಲೇ ಅತ್ತಿತ್ತ ಸರಿಯುತ್ತವೆ ಎಂಬುದನ್ನು ಬಿಟ್ಟರೆ, ಯಾವ ದಿಕ್ಕಿನತ್ತಲೂ ಸಾಗಲಾಗದೆ ಗೊಂದಲಕ್ಕೀಡಾಗಿಬಿಡುತ್ತವೆ. ಎಲ್ಲರಿಗೂ ಆದಷ್ಟು ಬೇಗ ಮನೆ ಸೇರುವ ತವಕ. ಪಕ್ಕದವನನ್ನು ಮೋರಿಗೆ ತಳ್ಳಿಯಾದರೂ ತಾನು ಮುಂದೆ ಹೋಗಬೇಕು ಎಂಬ ಗಡಿಬಿಡಿ. ಎಂತೆಂಥಾ ಪರಿಣತ ಡ್ರೈವರುಗಳ ಅಸಲಿ ಅಗ್ನಿಪರೀಕ್ಷೆಗಳು ಶುರುವಾಗುವುದೇ ಇಂತಹ ಇಕ್ಕಟ್ಟಿನ ಸಂದರ್ಭಗಳಲ್ಲಿ. 

ಇಂಥಾ ಸಂದರ್ಭಗಳಲ್ಲಿ ಕೂತಿರುವ ವಾಹನಗಳಿಂದ ಇಳಿಯುವುದೂ ಕೂಡ ಒಂದು ದೊಡ್ಡ ಸಾಹಸದಂತೆ ಬದಲಾಗುತ್ತದೆ. ಏಕೆಂದರೆ ಮಹಾನಗರಿಗಳಲ್ಲಿ ನೀರು ಇಂಗುವ ವ್ಯವಸ್ಥೆಗಳು ಇಲ್ಲದ ಪರಿಣಾಮವಾಗಿ ಎಲ್ಲಾ ಕಡೆ ನೀರು ತುಂಬಿಕೊಂಡಂತಹ, ಕೃತಕ ಪ್ರವಾಹದ ಪರಿಸ್ಥಿತಿ. ಅಂದಿನ ಪರಿಸ್ಥಿತಿಯೂ ಕೂಡ ಬಹುತೇಕ ಅಂಥದ್ದೇ ಆಗಿತ್ತು. ವಾಹನದ ವ್ಯವಸ್ಥೆಯಿಲ್ಲದ ಪಾದಚಾರಿಗಳು ಮೊಣಕಾಲಿನವರೆಗೆ ಬರುತ್ತಿದ್ದ ನೀರಿನ ಮಟ್ಟದೊಂದಿಗೆ ಸೆಣಸಾಡುತ್ತಾ ಮುನ್ನಡೆಯುತ್ತಲೇ ಇದ್ದರು. ಕಾಲಿನಡಿಯಲ್ಲಿ ರಸ್ತೆಯಿದೆಯೋ, ಮೋರಿಯಿದೆಯೋ, ಹೈ-ಟೆನ್ಷನ್ ಕೇಬಲ್ಲುಗಳಿವೆಯೋ, ಪ್ರಪಾತವಿದೆಯೋ ಎಂಬುದನ್ನೂ ಗುರುತಿಸಲಾಗದಂತಹ ದುಸ್ಥಿತಿ. ಹೀಗಾಗಿ ಪ್ರತಿಯೊಂದು ಹೆಜ್ಜೆಯೂ ಒಂದು ಬಗೆಯ ಜೂಜಾಟ-ಜೂಟಾಟ!

ಇದಾದ ಕೆಲ ಹೊತ್ತಿನಲ್ಲಿ ನಾವೆಲ್ಲಾ ಹೇಗೋ ಒದ್ದಾಡಿಕೊಂಡು ಮರಳಿ ಆಫೀಸು ತಲುಪಿದ್ದಾಯಿತು. ಮಳೆ ಒಂದರೆಕ್ಷಣ ಬಿಟ್ಟಿದ್ದರೂ, ಟ್ರಾಫಿಕ್ ಅಷ್ಟು ಬೇಗ ಮುಗಿಯುವ ಪ್ರಶ್ನೆಯೇ ಇರಲಿಲ್ಲ. ಇನ್ನು ನಗರವನ್ನು ಸತಾಯಿಸುತ್ತಿದ್ದ ಪ್ರವಾಹದ ಪರಿಸ್ಥಿತಿಯಂತೂ ಹತ್ತಾರು ತಾಸುಗಳ ಕಾಲ ತಿಳಿಯಾಗುವ ಸಾಧ್ಯತೆಗಳೇ ಇರಲಿಲ್ಲ. ಈ ಗಡಿಬಿಡಿಯಲ್ಲಿ ನಮ್ಮದೇ ಸಹೋದ್ಯೋಗಿಯೊಬ್ಬ ಶಹರದ ಮತ್ತೊಂದು ಮೂಲೆಯಿಂದ ಕಾಲೆಳೆಯುತ್ತಾ ಆಫೀಸಿನವರೆಗೆ ಬಂದಿದ್ದ. ಎಲ್ಲರಂತೆ ಅವನದ್ದೂ ಒಂದು ಕತೆಯಾಗಿತ್ತು.

ಅಷ್ಟಕ್ಕೂ ಆಗಿದ್ದೇನೆಂದರೆ ಅವನು ಪ್ರಯಾಣಿಸುತ್ತಿದ್ದ ಕ್ಯಾಬೊಂದು ಶಹರದ ಅಂಡರ್-ಪಾಸ್ ಒಂದರಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿಹಾಕಿಕೊಂಡಿದೆ. ಅಂಡರ್-ಪಾಸಿನೊಳಗೆ ನೀರಿನ ಮಟ್ಟವು ನಿಧಾನವಾಗಿ ಮೇಲಕ್ಕೇರತೊಡಗಿದಂತೆ ವಾಹನದ ಎಂಜಿನ್ನಿಗೂ ತೊಂದರೆಯಾಗಿ ಎಂಜಿನ್ ಜೀವ ಕೈಚೆಲ್ಲಿದೆ. ಈ ಮಧ್ಯೆ ಟ್ರಾಫಿಕ್ಕು ಕೊಂಚವಾದರೂ ಸರಿಹೋಗಬಹುದು ಎಂದು ಇವರೆಲ್ಲ ಕಾದಿದ್ದೇ ಬಂದಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ. ಬದಲಾಗಿ ವಾಹನದೊಳಗೆ ದೀರ್ಘಕಾಲ ಕೂತು ಉಸಿರುಗಟ್ಟಿದಂತಾಗಿ ಈತ ಅನಿವಾರ್ಯವಾಗಿ ವಾಹನದಿಂದ ಹೊರಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ಕ್ಯಾಬಿನೊಳಗೂ ಕೂರಲಾಗದೆ, ಇತ್ತ ಗಮ್ಯವನ್ನೂ ತಲುಪಲಾಗದೆ ಎಲ್ಲೂ ಸಲ್ಲದಂತಿನ ಫಜೀತಿ. ಅಂತೂ ಆತ ಹೀಗೆ ಕಾಲೆಳೆದುಕೊಂಡು ಆಫೀಸು ತಲುಪುವಷ್ಟರಲ್ಲಿ ಒಂದೆರಡು ತಾಸುಗಳು ಕಳೆದುಹೋಗಿದ್ದವು. ದೇಹಕ್ಕೆ ರಾಕ್ಷಸ ಸುಸ್ತು ಆವರಿಸಿಕೊಂಡಿತ್ತು.

ಈ ಹೊತ್ತಿಗಾಗಲೇ ಬಹುಷಃ ಶಹರದ ಪ್ರಮುಖ ಸುದ್ದಿವಾಹಿನಿಗಳು ಎಚ್ಚರಗೊಂಡಿದ್ದವು. ನಗರದ ಎಫ್ಫೆಮ್ ಸ್ಟೇಷನ್ನುಗಳು ಟ್ರಾಫಿಕ್ ಬಗೆಗಿನ ಅಪ್ಡೇಟ್ ಗಳನ್ನು ಕೇಳುಗರಿಗಾಗಿ ನಿಷ್ಠೆಯಿಂದ ಕೊಡಲಾರಂಭಿಸಿದ್ದವು. ಡಿಜಿಟಲ್ ವಾಹಿನಿಗಳಲ್ಲಿ ಮಿನಿ ಬ್ರೇಕಿಂಗ್ ನ್ಯೂಸ್ ಗಳು ಬುಲೆಟ್ ಪಾಯಿಂಟ್ಸ್ ಗಳಲ್ಲಿ ಬಿತ್ತರವಾಗತೊಡಗಿದ್ದವು. ಈಗಾಗಲೇ ಟ್ರಾಫಿಕ್ಕಿನಲ್ಲಿ ಹೊರಟವರು ಒಂದಿಂಚೂ ಮುನ್ನಡೆಯದೆ ಹಲವು ತಾಸುಗಳು ಆಗಲೇ ಕಳೆದುಹೋಗಿದ್ದವು. ಮಳೆಯು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತಾದರೂ, ವಾಹನಗಳ ಚಕ್ರವ್ಯೂಹದಂತೆ ಬದಲಾಗಿದ್ದ ಶಹರದ ಪರಿಸ್ಥಿತಿಯು ಒಂದಿನಿತೂ ಬದಲಾಗದಿರುವ ಪರಿಣಾಮವಾಗಿ ಗ್ರೌಂಡ್ ರಿಯಾಲಿಟಿಯ ಹಂತದಲ್ಲಿ ಹೆಚ್ಚಿನ ಉಪಯುಕ್ತ ಬದಲಾವಣೆಗಳೇನೂ ಬದಲಾಗಿರಲಿಲ್ಲ.

ಇತ್ತ ಟ್ರಾಫಿಕ್ಕಿನ ಚಕ್ರವ್ಯೂಹವನ್ನು ಮೊದಲೇ ಅಂದಾಜಿಸಿ, ಆಫೀಸ್ ಸಂಕೀರ್ಣದಲ್ಲೇ ಉಳಿದಿದ್ದ ನಮ್ಮಂಥವರ ಪರಿಸ್ಥಿತಿಯು ಕೊಂಚವಾದರೂ ವಾಸಿಯಿತ್ತು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಆದರೆ ಮುಂದಿನ ನಡೆಗಳನ್ನು ಅಂದಾಜಿಸಲು ಬಿತ್ತರವಾಗುತ್ತಿದ್ದ ಬ್ರೇಕಿಂಗ್ ನ್ಯೂಸ್ ಗಳನ್ನು ಅವಲಂಬಿಸದೆ ಬೇರೆ ದಾರಿಗಳಿರಲಿಲ್ಲ. ಹೀಗಾಗಿ ತಾಸುಗಳು ಕಳೆದರೂ, ಕ್ಷಣಕ್ಷಣದ ಮಾಹಿತಿಗಳು ಲಭ್ಯವಿದ್ದರೂ ಮುಳುಗುತ್ತಿದ್ದ ಶಹರದೊಳಗೆ ಕಾಲಿಡುವ ಸಾಹಸಕ್ಕಿಳಿಯುವುದು ಅಪಾಯಕಾರಿ ನಡೆಯೇ ಆಗಿತ್ತು. ಕ್ಯಾಬ್ ಜಾಲವು ಸಂಪೂರ್ಣವಾಗಿ ಹಳ್ಳಹಿಡಿದು ಪ್ರಯಾಣಿಕರು ರಸ್ತೆಯಲ್ಲೇ ಬಾಕಿಯಾಗಿದ್ದರು. ನಿತ್ಯೋಪಯೋಗಿ ಬಳಕೆಯ ಆಪ್ ಗಳ ವೆಬ್ ಸರ್ವರುಗಳು ಮಕಾಡೆ ಮಲಗಿದ್ದವು. ಹಠಾತ್ತನೆ ಮೆಟ್ರೋ ಎಂಬುದು ನೆಚ್ಚಿಕೊಳ್ಳಬಹುದಾದ ಕೊನೆಯ ಮತ್ತು ಏಕೈಕ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಿತ್ತು. ಇನ್ನು ನಿಧಾನವಾಗಿ ಎತ್ತರಕ್ಕೆ ಏರುತ್ತಿದ್ದ ನೀರಿನ ಮಟ್ಟದಿಂದಾಗಿ ಪುಟ್ಟ ಕಾರುಗಳು ನಿಂತಲ್ಲೇ ಕೆಟ್ಟುಹೋಗುತ್ತಾ ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿಯು ಕೂಡ ಸೃಷ್ಟಿಯಾಗಿತ್ತು.

************

ಇದು ಎನ್.ಸಿ.ಆರ್ ಪ್ರದೇಶದಲ್ಲಿ ಇತ್ತೀಚೆಗೆ ಬಂದು ಹೋದ ಒಂದು ಮಿನಿ ಮಳೆಯ ಕತೆ.

ಮಿನಿ ಮಳೆಯೊಂದು ಹೀಗೆ ತಂದಿಟ್ಟ ಅವಾಂತರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಇದನ್ನೊಂದು ಮಹಾಮಳೆ ಅಂತಲೂ ಕರೆಯಬಹುದು. ನಗರದ ಕೊಂಚವೂ ಉತ್ಪ್ರೇಕ್ಷೆಯಿಲ್ಲದ ಸತ್ಯಕತೆಯೊಂದು ಅದ್ಯಾವ ಮಟ್ಟಿನಲ್ಲಿ ರೋಚಕವಾಗಿ, ಸಿನಿಮೀಯವಾಗಿ ಓದಿಸಿಕೊಂಡು ಹೋಗುತ್ತದೆ ನೋಡಿ! ನನಗನಿಸುವಂತೆ ಮಹಾನಗರವಾಸಿಗಳಲ್ಲಿ ಬಹುತೇಕರಿಗೆ ಇಂಥಾ ಅನುಭವಗಳು ಒಂದಲ್ಲ ಒಂದು ಬಾರಿ ಖಂಡಿತ ಆಗಿರುತ್ತವೆ. ಮಜಾಕ್ ಅನಿಸುವ ಕೂಡ ಒಂದರ್ಧ ತಾಸಿನ ಮಳೆಯೂ ಕೂಡ ಅಚಾನಕ್ಕಾಗಿ ಮಹಾಮಳೆ ಎಂದನ್ನಿಸತೊಡಗುತ್ತದೆ. ವಿಪರ್ಯಾಸವೆಂದರೆ ಇಂತಹ ಘಟನೆಗಳು ನಮ್ಮ ನಡುವೆ ಕಾಲಾಂತರದಲ್ಲಿ ಸಾಮಾನ್ಯವಾಗುತ್ತಾ ಹೋಗಿರುವುದು.

ಮುಂಬೈನಲ್ಲೂ ವರ್ಷಕ್ಕೊಂದೆರಡು ಬಾರಿ ಹೀಗಾಗುತ್ತದೆ. ಸಿಕ್ಕಸಿಕ್ಕಲ್ಲಿ ನೀರು ತುಂಬಿಕೊಂಡು, ಪ್ರವಾಹ ಪರಿಸ್ಥಿತಿಯೊಂದು ಉದ್ಭವವಾಗಿ ಜನಜೀವನವು ಸಂಪೂರ್ಣವಾಗಿ ಅಸ್ತವ್ಯಸ್ತವಾಗುತ್ತದೆ. ಆಗ ಸುದ್ದಿವಾಹಿನಿಗಳು ಬ್ರೇಕಿಂಗ್ ನ್ಯೂಸ್ ಎಂದು ಅರಚುತ್ತವೆ. ಮಹಾನಗರಪಾಲಿಕೆಗಳು ಎಲ್ಲಿ ಸತ್ತಿವೆ ಎಂದು ಪತ್ರಿಕೆಗಳ ಮುಖಪುಟಗಳು ಅಬ್ಬರಿಸುತ್ತವೆ. ಹಲವು ಇಲಾಖೆಗಳ ಅದೆಷ್ಟೋ ಅಧಿಕಾರಿಗಳನ್ನು ರಾತ್ರೋರಾತ್ರಿ ತುರ್ತುಸಭೆಗಳ ಹೆಸರಿನಲ್ಲಿ ಜಾಗರಣೆ ಮಾಡಿಸಲಾಗುತ್ತದೆ. ಒಂದೆರಡು ದಿನಗಳ ಬಳಿಕ ಮೂಗಿನ ಮಟ್ಟದವರೆಗೆ ಏರಿದ್ದ ನೀರು ಇಳಿದುಹೋದ ನಂತರ ಎಲ್ಲವೂ ಮತ್ತೆ ಯಥಾಸ್ಥಿತಿಗೆ ಬರುತ್ತದೆ. ಮತ್ತದೇ ಪ್ರಹಸನಗಳು ಮುಂದಿನ ವರ್ಷ ಯಾವುದೇ ಪಶ್ಚಾತ್ತಾಪದ ಭಾವನೆಗಳಿಲ್ಲದೆ ಪುನರಾವರ್ತನೆಗೊಳ್ಳುತ್ತವೆ!

ನಮ್ಮದು ಮಾಡೆಲ್ಲುಗಳ ಯುಗ. ನಮ್ಮಲ್ಲಿ ಸಿದ್ಧ ಮಾದರಿಗಳು ಜನಪ್ರಿಯವಾಗುವುದೂ ಹೆಚ್ಚು. ಅವುಗಳನ್ನು ಸಿದ್ಧಸೂತ್ರದಂತೆ ಬಹುಬೇಗನೆ ಒಪ್ಪಿಕೊಂಡು ಮುನ್ನಡೆಯುವುದೂ ಹೆಚ್ಚು. ಬಹುಷಃ ಅದು ಮಾನವನ ಯೋಚನಾವಿಧಾನವೂ ಆಗಿರಬಹುದು. ವಿಚಿತ್ರವೆಂದರೆ ನಮ್ಮ ನಡುವಿನ ಬಹಳಷ್ಟು ಜನಪ್ರಿಯ ಮಾಡೆಲ್ಲುಗಳು ತಮ್ಮ ಅಸಲಿ ಉಪಯುಕ್ತತೆಗಿಂತ, ತಮ್ಮ ಸುತ್ತಲಿನ ಗ್ಲಾಮರ್ ಪ್ರಭಾವಳಿಯಿಂದ ಜನಪ್ರಿಯವಾಗಿದ್ದೇ ಹೆಚ್ಚು. ಉದ್ಯಮಶೀಲತೆ, ಲಾಬಿ, ರಾಜಕೀಯ ಲಾಭನಷ್ಟಗಳು, ಜಾಗತಿಕ ಮಾರುಕಟ್ಟೆ… ಹೀಗೆ ಹಲವು ನಿರ್ಣಾಯಕ ಅಂಶಗಳು ಇವುಗಳನ್ನು ನಮಗರಿವಿಲ್ಲದಂತೆ ವ್ಯವಸ್ಥಿತವಾಗಿ ನಡೆಸುತ್ತಿರಬಹುದು. ಹೀಗಾಗಿಯೇ ನಮ್ಮ ನಡುವಿನ ಮಹಾನಗರಿಗಳು ಬಹುತೇಕ ಒಂದೇ ರೀತಿ ಕಾಣುತ್ತವೆ. ಅದ್ದೂರಿ ಶಾಪಿಂಗ್ ಮಾಲ್ ಗಳ ಜಾತ್ರೆಯಂತೆ, ಫ್ಲೈ-ಓವರುಗಳ ಕಾಂಕ್ರೀಟು ಕಾಡಿನಂತೆ, ಅಗಲ ರಸ್ತೆಗಳ ಸಮುದ್ರದಂತೆ ಮತ್ತು ಅಸಂಖ್ಯಾತ ವಾಹನಗಳ ಗೊಂದಲನಗರಿಗಳಂತೆ. ಎಲ್ಲದಕ್ಕೂ ಒಂದೇ ಚಹರೆ! ಇವುಗಳಿಗೆ ನಾವು ಸ್ಮಾರ್ಟ್‍ಸಿಟಿಗಳೆಂದು ಆಕರ್ಷಕ ಹೆಸರನ್ನೂ ಇಟ್ಟಿದ್ದೇವೆ.

ಆದರೆ ಪ್ರಕೃತಿಯು ಹೀಗೆ ಚಿಕ್ಕದಾಗಿ ಮುನಿಸಿಕೊಂಡಾಗಲೇ ಮಾನವ ನಿರ್ಮಿತ ನಗರಗಳ ಬಣ್ಣಗಳು ಆಗಾಗ ಕಳಚಿ ಬೀಳುತ್ತವೆ. ಸ್ಮಾರ್ಟ್ ಕಿರೀಟವು ಅಚಾನಕ್ಕಾಗಿ ಭಾರವೆನಿಸತೊಡಗುತ್ತದೆ. ಒಟ್ಟಿನಲ್ಲಿ ಮಹಾನಗರಗಳ ಹಣೆಬರಹವೇ ಇಷ್ಟೆಂದು ನಗರವಾಸಿಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಿಕೊಂಡು ಬಿಟ್ಟಿದ್ದೇವೆ. ಹೀಗಾಗಿ ಹೊಸದಾಗಿ ಹುಟ್ಟಿಕೊಂಡ ನಗರಗಳಲ್ಲಿ ಹಳೆಯ ಸಮಸ್ಯೆಗಳು ಕಾಡತೊಡಗಿದಾಗ ನಮಗೆ ಅಚ್ಚರಿಯೂ ಆಗುವುದಿಲ್ಲ. ಕನಿಷ್ಠಮಟ್ಟದ ಹಳಹಳಿಕೆಯೂ ಮೂಡುವುದಿಲ್ಲ.

ಶಾರೂಖ್ ಹೇಳುವುದು ಸತ್ಯ: “ಬಡೇ ಬಡೇ ಶಹರ್ ಮೇ ಐಸೀ ಛೋಟೀ ಛೋಟೀ ಬಾತೇಂ ಹೋತೀ ರೆಹ್ತೀ ಹೈ!”

ಪ್ರಸಾದ್ ನಾಯ್ಕ್

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ; ‘ಹಾಯ್ ಅಂಗೋಲಾ’; ಮತ್ತು ‘ಸಫಾ’ ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article