ಮೊಬೈಲ್‌ ವಿಚಾರಕ್ಕೆ ಕೊಲೆ; ಆರೋಪಿ ಬಂಧನ

Most read

ಬೆಂಗಳೂರು: ಮೊಬೈಲ್ ಫೋನ್‌ ನೋಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಟಿ. ನರಸೀಪುರದ ನಾಗರಾಜ್ (36) ಬಂಧಿತ ಆರೋಪಿ. ಈತ ಡಿಸೆಂಬರ್ 26 ರಂದು ತನ್ನ ಜತೆಗೆ ವಾಸವಾಗಿದ್ದ ಶ್ರೀನಿವಾಸ್‌ ಎಂಬಾತನನ್ನು ವಾಟರ್ ಹೀಟರ್ ಕಾಯಿಲ್‌ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ.

ಟಿ. ನರಸೀಪುರದ ಇಬ್ಬರೂ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಶ್ರೀನಿವಾಸನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಮೃತ ಶ್ರೀನಿವಾಸ್ ಪತ್ನಿಯನ್ನು ತೊರೆದಿದ್ದ. ಶ್ರೀನಿವಾಸ್, ಯಾವಾಗಲೂ ನಾಗರಾಜ್‌ನ ಮೊಬೈಲ್ ಫೋನ್‌ ಬಳಸುತ್ತಿದ್ದ ಹಾಗೂ ರೂಮ್‌ನ ಕೀಯನ್ನು ನಾಗರಾಜ್‌ಗೆ ನೀಡುತ್ತಿರಲಿಲ್ಲ. ಇದೇ ವಿಚಾರಕ್ಕೆ ಡಿಸೆಂಬರ್ 26ರಂದು ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಕೋಪದಲ್ಲಿ ನಾಗರಾಜ್ ವಾಟರ್ ಹೀಟರ್ ಕಾಯಿಲ್‌ನಿಂದ ಶ್ರೀನಿವಾಸ್‌ಗೆ ಹೊಡೆದಿದ್ದ. ಆತ ಮೃತಪಟ್ಟಿದ್ದು ಗೊತ್ತಾಗುತ್ತಿದ್ದಂತೆ ನಾಗರಾಜ್ ಮನೆ ಬಿಟ್ಟು ತೆರಳಿದ್ದ. ಇಬ್ಬರೂ ಕೆಲಸಕ್ಕೆ ಬರದಿದ್ದಾಗ ರೂಮ್ ಬಳಿ ಬಂದು ಮೇಸ್ತ್ರಿ ನೋಡಿದಾಗ ಕೊಲೆಯಾಗಿರುವ ವಿಚಾರ ತಿಳಿದು ಬಂದಿದೆ. ನಂತರ ಅವರು ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

More articles

Latest article