ತುಮಕೂರು: ಮದುವೆ ಹೆಸರಿನಲ್ಲೊಂದು ಕಂಪೆನಿ. ಅದರಲ್ಲಿ ರಿಜಿಸ್ಟರ್ ಆದರೆ ವಯಸ್ಸಿಗೆ ಬಂದ ಹುಡುಗರಿಗೆ ಹುಡುಗಿಯರನ್ನು ತೋರಿಸಲಾಗುತ್ತದೆ. ಎಲ್ಲ ಶಾಸ್ತ್ರ ಸಂಪ್ರದಾಯದಂತೆ ಮದುವೆಯೂ ಆಗುತ್ತೆ. ಆದರೆ ಮದುವೆಯಾದ ನಾಲ್ಕೈದು ದಿನಗಳಿಗೆ ಹುಡುಗಿ ಮಾಯವಾಗುತ್ತಾಳೆ, ಹುಡುಗನ ಕಡೆಯವರು ಒಡವೆ, ಹಣ ಎಲ್ಲ ಕಳೆದುಕೊಂಡಿರುತ್ತಾರೆ!
ನಂಬಲು ಅಸಾಧ್ಯ, ಆದರೆ ನಿಜ. ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರು ವಂಚಕ ಮದುವೆ ಕಂಪೆನಿಯೊಂದನ್ನು ಪತ್ತೆ ಹಚ್ಚಿ, ರಹಸ್ಯ ಭೇದಿಸಿದ್ದಾರೆ. ಮೋಸದ ನಾಟಕದಲ್ಲಿ ಮೂರೇ ತಿಂಗಳಲ್ಲಿ ಐದು ಬಾರಿ ಮದುಮಗಳಾದ ವೇಷ ತೊಟ್ಟ ಯುವತಿ ಸೇರಿದಂತೆ ಇಡೀ ತಂಡವನ್ನು ಬಂಧಿಸಿದ್ದಾರೆ.
ಮದುವೆ ವಯಸ್ಸು ಮೀರುತ್ತಿರುವ ಯುವಕರಿಗೆ ಮದುವೆಯ ಆಮಿಷ ತೋರಿಸುತ್ತಿದ್ದ ಈ ಕಂಪೆನಿ ನಿಧಾನವಾಗಿ ಹುಡುಗನ ಮನೆಯವರಿಗೆ ಖೆಡ್ಡಾ ತೋಡುತ್ತದೆ. ನಡೆಯುತ್ತಿರುವುದು ನಾಟಕದ ಮದುವೆ ಎಂಬುದು ಗೊತ್ತಾಗುವಷ್ಟರಲ್ಲಿ ಅವರು ಮೋಸ ಹೋಗಿರುತ್ತಾರೆ.
ಹೊಸ ಬಗೆಯ ವಂಚನೆಗೆ ಕೈ ಇಟ್ಟಿರುವ ಈ ಮದುವೆ ಗ್ಯಾಂಗ್ ನವರೆಲ್ಲ ಐನಾರಿ ಕಳ್ಳರು. ಹೆಣ್ಣು ಮತ್ತು ಹೆಣ್ಣಿನ ಕಡೆಯವರನ್ನು ಮೊದಲೇ ಸಿದ್ಧ ಮಾಡಿಟ್ಟುಕೊಳ್ಳುತ್ತಾರೆ. ಎಂಟು ಜನ ಪ್ರಚಂಡ ನಾಟಕವಾಡಿ ಹೆಣ್ಣು ತೋರಿಸುವ ಶಾಸ್ತ್ರವನ್ನೂ ಮಾಡಿಸುತ್ತಾರೆ. ಹುಡುಗಿ ಅನಾಥೆ ಎಂದು ನಾಟಕವಾಡುತ್ತಾರೆ.
ಮದುವೆ ದಿನ ನಿಗದಿಯಾಗುತ್ತದೆ. ಮದುವೆಯೂ ನಡೆದುಹೋಗುತ್ತದೆ. ಗಂಡನ ಮನೆ ಸೇರುವ ಹುಡುಗಿ ಉಪಾಯವಾಗಿ ಚಿನ್ನಾಭರಣ, ನಗದು ಎಲ್ಲ ಗುಡ್ಡೆ ಹಾಕಿಕೊಂಡು ಪರಾರಿಯಾಗುತ್ತಾಳೆ.
ರಾಜ್ಯದ ಹಲವು ಭಾಗಗಳಲ್ಲಿ ಇಂಥ ನಾಟಕದ ಮದುವೆಗಳನ್ನು ಮಾಡಿ ಲಕ್ಷಾಂತರ ರುಪಾಯಿ ಮೌಲ್ಯದ ನಗದು, ಚಿನ್ನಾಭರಣ ಲೂಟಿ ಮಾಡಿದ್ದ ತಂಡ ಈಗ ಗುಬ್ಬಿ ಪೊಲೀಸರ ಬಲೆಗೆ ಬಿದ್ದಿದೆ. ಪೊಲೀಸರು ಈ ತಂಡ ಮಾಡಿರುವ ಎಲ್ಲ ಅಪರಾಧಗಳ ಮಾಹಿತಿ ಕಲೆಹಾಕುತ್ತಿದ್ದಾರೆ.
ವಯಸ್ಸು ಮೀರಿದ ಹುಡುಗರೇ ಇವರ ಟಾರ್ಗೆಟ್ ಆಗಿದ್ದು, ಹೇಗೋ ಒಂದು ಮದುವೆಯಾದರೆ ಸಾಕು ಎನ್ನುವ ಕುಟುಂಬದ ಹುಡುಗರನ್ನು ಆಯ್ದುಕೊಂಡು ನಾಟಕದ ಮದುವೆ ಮಾಡಿ ಲೂಟಿ ಮಾಡುತ್ತವೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.