“ನಲವತ್ತೇಳರ ಸ್ವಾತಂತ್ರ್ಯವೂ, ಮಿಲೇನಿಯಲ್ ಆಝಾದಿಯೂ”

Most read

ಸಿಕ್ಕಸಿಕ್ಕಲ್ಲೆಲ್ಲಾ ತಮ್ಮ ವೈಯಕ್ತಿಕ ಮಾಹಿತಿಗಳನ್ನು ನಿಸ್ಸಂಕೋಚವಾಗಿ ದಾನ ಮಾಡಿ ಮರೆತುಬಿಡುವ ನಾವು, ನಿತ್ಯಬಳಕೆಯ ಮೊಬೈಲ್ ಅಪ್ಲಿಕೇಷನ್ನುಗಳು ನಮ್ಮ ಡೇಟಾ ಕದಿಯುತ್ತಿವೆ ಎಂದಾಗ ಬೆಚ್ಚಿಬೀಳುವಂತೆ! ನಿನ್ನೆಯವರೆಗೆ ಏನೂ ಅಲ್ಲದಿದ್ದ ಸಂಗತಿಯೊಂದು ಇಂದು ಏಕಾಏಕಿ ಎಲ್ಲವೂ ಆಗಿಬಿಡುವ ವಿಚಿತ್ರ ಪಲ್ಲಟವಿದು. ಬಹುಷಃ ಸ್ವಾತಂತ್ರ್ಯವೂ ಇದಕ್ಕೆ ಹೊರತಲ್ಲವೇನೋ – ಪ್ರಸಾದ್‌ ನಾಯ್ಕ್‌, ದೆಹಲಿ.

 ಎಲ್ಲೋ ಒಂದು ಕಡೆ ಓದಿದ ನೆನಪು.

ಒಂದೂರಿನಲ್ಲಿ ಒಬ್ಬನಿದ್ದನಂತೆ. ಅವನು ಆ ಊರಿನಲ್ಲಿ ಅದೆಷ್ಟೋ ವರ್ಷಗಳಿಂದ ಬದುಕಿದ್ದಾನೆ. ಆದರೆ ಒಂದು ದಿನವೂ ಆತ ತನ್ನೂರನ್ನು ಬಿಟ್ಟು ಬೇರೊಂದು ಊರಿಗೆ ಹೋದವನಲ್ಲ. ಎಷ್ಟರಮಟ್ಟಿಗೆ ಅಂದರೆ ಏನಾದರೊಂದು ಕೆಲಸವೆಂದು ಪಕ್ಕದ ಹಳ್ಳಿಗೆ ಹೋಗುತ್ತಿದ್ದ ಇತರ ಗ್ರಾಮಸ್ಥರಂತೆಯೂ ಇವನು ಊರಾಚೆಗೆ ಹೋಗುತ್ತಿರಲಿಲ್ಲ. ಊರಾಚೆಗೆ ಹೋಗಿಬಂದವರು ತಾವು ಹೋಗಿ ಬಂದ ಜಾಗಗಳ ಬಗ್ಗೆ ಸ್ವಾರಸ್ಯಕರ ಕತೆಗಳನ್ನು ಹೇಳುತ್ತಿದ್ದರೆ ಈತನಿಗೆ ಅವುಗಳಲ್ಲೂ ಆಸಕ್ತಿಯಿಲ್ಲ. ತಾನು ಕೂಡ ತಿರುಗಾಡಬೇಕು. ಈ ಜಗತ್ತು ಬಹಳ ದೊಡ್ಡದಿದೆಯಂತೆ, ಅವೆಲ್ಲವನ್ನು ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ಯೋಚನೆಗಳು ಇವನಿಗೆ ಬಂದಿದ್ದೇ ಇಲ್ಲ. ತಾನರಿಯದ ಜಗತ್ತನ್ನು ನೋಡುವ ಆಸಕ್ತಿ ಹಾಗಿರಲಿ. ಈ ಬಗ್ಗೆ ಕನಿಷ್ಠ ಕುತೂಹಲವೂ ಇಲ್ಲದಂತಹ ಭೂಪನಾಗಿದ್ದ ಈತ.

ದಿನಗಳು ಹೀಗೆ ನಡೆಯುತ್ತಿರಲು ಆ ಊರಿನ ರಾಜನಿಗೊಮ್ಮೆ ಈತನ ಬಗ್ಗೆ ತಿಳಿಯುತ್ತದೆ. ಅವನ ಕತೆಯನ್ನು ಕೇಳಿ ಬಹಳ ಅಚ್ಚರಿಯೂ ಆಗುತ್ತದೆ. ಆಗಲಿ, ಇದನ್ನೊಂದು ಸವಾಲಾಗಿ ಸ್ವೀಕರಿಸೋಣ ಎಂಬಂತೆ ಈ ಬಗ್ಗೆ ಏನಾದರೂ ಮಾಡಬೇಕೆಂದು ರಾಜ ಒಳಗೊಳಗೇ ಲೆಕ್ಕಹಾಕುತ್ತಾನೆ. ಹೇಳಿಕಳಿಸಿ ಕರೆಸುತ್ತಾನೆ. ಆದರೆ ಇವನಿಗೋ, ಸಲಹೆಯೆಂದರೆ ಸೇರದ ಕಹಿಮದ್ದು. ಪ್ರೀತಿಮಾತುಗಳಿಗೆ ಬಾಗಲಾರ, ಆಮಿಷಗಳಿಗೆ ಬಗ್ಗಲಾರ. ಇದೊಂಥರಾ ತಲೆನೋವಾಯಿತೆಂದು ರಾಜನೀಗ ಹೊಸ ಆದೇಶವೊಂದನ್ನು ಹೊರಡಿಸುತ್ತಾನೆ. ಆ ಆದೇಶದಲ್ಲಿ ಆತ ಯಾವತ್ತೂ, ಯಾವ ಕಾರಣಕ್ಕೂ ತಾನಿರುವ ಹಳ್ಳಿಯನ್ನು ಬಿಟ್ಟುಹೋಗಬಾರದೆಂಬ ವಿಚಿತ್ರ ಫರ್ಮಾನಿರುತ್ತದೆ.

ಹಾಗೆ ನೋಡಿದರೆ ರಾಜನ ಆದೇಶವು ಅವನಲ್ಲಿ ಅಂಥಾ ಪರಿಣಾಮವನ್ನೇನೂ ಬೀರಬಾರದಿತ್ತು. ಆದರೆ ರಾಜನ ಕಿಲಾಡಿ ಯೋಜನೆಯು ಫಲ ನೀಡುತ್ತದೆ. ಈವರೆಗೆ ತನ್ನೂರಿನಲ್ಲೇ, ತನ್ನ ಪಾಡಿಗೆ ನೆಮ್ಮದಿಯಾಗಿದ್ದ ಆತ ಮೊದಲಬಾರಿ ತನಗೆ ತಾನೇ ಪ್ರಶ್ನೆಹಾಕುತ್ತಾನೆ: “ಅಯ್ಯೋ, ನಾನಿನ್ನು ಊರಾಚೆಗೆ ಹೋಗುವಂತಿಲ್ಲ. ಈ ಮುಂಚೆ ಹೋಗಿಲ್ಲ ಅನ್ನುವುದು ಬೇರೆ ಮಾತು. ಆದರೆ ಈಗ ಬೇಕೆಂದರೂ ಹೋಗುವಂತಿಲ್ಲ. ಬದುಕು ಹೀಗಾದರೆ ಹೇಗೆ?”

ಆ ವ್ಯಕ್ತಿಯ ನಿಜವಾದ ತಳಮಳವು ಶುರುವಾಗುವುದೇ ಅಲ್ಲಿಂದ. ನಿನ್ನೆಯವರೆಗೆ ನಾನು-ನನ್ನ ಪಾಡೆಂದು ಹಾಯಾಗಿದ್ದ ಬದುಕು, ಈಗ ಅಚಾನಕ್ಕಾಗಿ ರಾಜನ ಹಂಗಿಗೆ ಬಿದ್ದಂತಾಗುತ್ತದೆ. ಮುಂಚೆ ಊರಾಚೆಗೆಂದೂ ಹೋಗಿರಲಿಲ್ಲ. ಅದು ತನ್ನ ಆಯ್ಕೆಯಾಗಿತ್ತು. ಆದರೆ ನಾಳೆ ಮನಸ್ಸು ಬದಲಾಗಬಹುದು. ಎದ್ದು ಎಲ್ಲೋ ಹೋಗಿಬಿಡೋಣ ಅಂತ ಒಳಮನಸ್ಸು ಗೋಗರೆಯಬಹುದು. ಆದರೇನು ಮಾಡುವುದು? ಹೋಗುವ ಇಚ್ಛೆಯಿದ್ದರೂ ಹೋಗುವಂತಿಲ್ಲ. ಏಕೆಂದರೆ ರಾಜಾಜ್ಞೆಯನ್ನು ಉಲ್ಲಂಘಿಸಿದವರಿಗೆ ಅಲ್ಲಿ ಉಳಿಗಾಲವಿಲ್ಲ.

ಸ್ವಾತಂತ್ರ್ಯ ಅಂದ ಕೂಡಲೇ ನನಗೆ ನೆನಪಾಗುವ ಮೆಚ್ಚಿನ ಕತೆಯೆಂದರೆ ಇದು. ಈ ಮನಸ್ಸಿನ ಆಟಗಳೇ ಒಂದು ವಿಚಿತ್ರ. ಸ್ವಾತಂತ್ರ್ಯದ ಬಗ್ಗೆ ಅಷ್ಟಾಗಿ ಯೋಚಿಸಿಯೇ ಇರದಿದ್ದ ಕಾಲದಲ್ಲಿ ನಮ್ಮದೇ ಲೋಕದಲ್ಲಿ ನಾವು ಹಾಯಾಗಿರುತ್ತೇವೆ. ಆದರೆ ನಮ್ಮ ವ್ಯಕ್ತಿಸ್ವಾತಂತ್ರ್ಯವನ್ನು ಯಾವುದೇ ವ್ಯಕ್ತಿ, ವ್ಯವಸ್ಥೆ ಅಥವಾ ಮತ್ಯಾವುದೋ ಸಂಗತಿಯೊಂದು ಬಂದು ಕಸಿದುಕೊಂಡಾಗ ತಕ್ಷಣ ಗಾಬರಿ ಬೀಳುತ್ತೇವೆ. ಕಿತ್ಕೊಂಡೇ ಬಿಟ್ರಲ್ಲಾ ಅಂತ ಗೋಳಾಡುತ್ತೇವೆ. ಸಿಕ್ಕಸಿಕ್ಕಲ್ಲೆಲ್ಲಾ ತಮ್ಮ ವೈಯಕ್ತಿಕ ಮಾಹಿತಿಗಳನ್ನು ನಿಸ್ಸಂಕೋಚವಾಗಿ ದಾನ ಮಾಡಿ ಮರೆತುಬಿಡುವ ನಾವು, ನಿತ್ಯಬಳಕೆಯ ಮೊಬೈಲ್ ಅಪ್ಲಿಕೇಷನ್ನುಗಳು ನಮ್ಮ ಡೇಟಾ ಕದಿಯುತ್ತಿವೆ ಎಂದಾಗ ಬೆಚ್ಚಿಬೀಳುವಂತೆ! ನಿನ್ನೆಯವರೆಗೆ ಏನೂ ಅಲ್ಲದಿದ್ದ ಸಂಗತಿಯೊಂದು ಇಂದು ಏಕಾಏಕಿ ಎಲ್ಲವೂ ಆಗಿಬಿಡುವ ವಿಚಿತ್ರ ಪಲ್ಲಟವಿದು. ಬಹುಷಃ ಸ್ವಾತಂತ್ರ್ಯವೂ ಇದಕ್ಕೆ ಹೊರತಲ್ಲವೇನೋ.

ನಾವು ಶಾಲೆಯಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಮನೆಬಿಟ್ಟು ಓಡಿಹೋಗುವುದೇ ನಿಜವಾದ ಸ್ವಾತಂತ್ರ್ಯ ಅಂತೆಲ್ಲ ನಮಗನ್ನಿಸುತ್ತಿತ್ತು. ಈ ಬಗ್ಗೆ ನಾವು ಯಾರ ಬಳಿಯೂ ಮುಕ್ತವಾಗಿ ಹೇಳಿಕೊಳ್ಳದಿದ್ದರೂ, ಇಂಥದ್ದೊಂದು ಯೋಚನೆಯು ನಮ್ಮೆಲ್ಲರ ಮನದಲ್ಲಿ ಹಲವು ವರ್ಷಗಳ ಕಾಲ ಇದ್ದಿದ್ದಂತೂ ಸತ್ಯ. ಈ ಮಧ್ಯೆ ಒಮ್ಮೆ ಏನಾಯಿತೆಂದರೆ ನಮ್ಮ ಬಳಗದಲ್ಲಿದ್ದ ಹುಡುಗನೊಬ್ಬ ನಿಜಕ್ಕೂ ಹೇಳದೆ ಕೇಳದೆ ಪರಾರಿಯಾಗಿದ್ದ. ನಾವೆಲ್ಲಾ ಆಗ ಹೆಚ್ಚೆಂದರೆ ಮೂರು ಅಥವಾ ನಾಲ್ಕನೇ ತರಗತಿಯಲ್ಲಿರಬಹುದು. ಆ ಹುಡುಗನ ತಾಯಿ ಬಹಳ ಹೊತ್ತು ನನ್ನನ್ನು ಪಕ್ಕದಲ್ಲಿ ಕೂರಿಸಿ ಮಗ ಕಾಣೆಯಾದ ಬಗ್ಗೆ ಕಣ್ಣೀರು ಹಾಕಿದ್ದರು. ಅವರು ತನ್ನ ಮನದಾಳದ ದುಃಖವನ್ನೆಲ್ಲಾ ಪುಟ್ಟ ಬಾಲಕನಾಗಿದ್ದ ನನ್ನ ಬಳಿ ಅಷ್ಟು ಮುಕ್ತವಾಗಿ ಹೇಗೆ ತೋಡಿಕೊಂಡರು ಎಂಬುದು ಇಂದಿಗೂ ನನಗೊಂದು ಅಚ್ಚರಿ. ಅದೃಷ್ಟವಶಾತ್ ನಾಲ್ಕೈದು ದಿನಗಳ ನಂತರ ಅವನು ದೂರದ ಶಹರವೊಂದರಲ್ಲಿ ಪತ್ತೆಯಾಗಿದ್ದ. ಅಲ್ಲಿಗೆ ನಮ್ಮ ಸುತ್ತ ನಡೆಯುತ್ತಿದ್ದ ರೋಚಕ ಕತೆಯೊಂದು ಮುಕ್ತಾಯವಾಗಿತ್ತು.

ಅಂದಹಾಗೆ ಈ “ಓಡಿಹೋಗುವ ಹಂಬಲ” ಅನ್ನುವುದು ಬೆಳೆಯುವ ಮಕ್ಕಳಲ್ಲಿ ಕಾಣಸಿಗುವ ಬಹಳ ಸಾಮಾನ್ಯ ಕಲ್ಪನೆಗಳಲ್ಲೊಂದು ಎಂಬುದು ನನಗೆ ಹಲವು ವರ್ಷಗಳ ನಂತರ ಮನೋವೈದ್ಯರೊಬ್ಬರಿಂದ ಗೊತ್ತಾಯಿತು. ಈ ಫ್ಯಾಂಟಸಿಯು ಸಾಮಾನ್ಯವಾಗಿದ್ದರೂ ಆ ಅವಧಿಯಲ್ಲಿ ಅದೆಷ್ಟರ ಮಟ್ಟಿಗೆ ತೀವ್ರವಾಗಿರುತ್ತದೆ ಎಂಬುದು ನಿಜಕ್ಕೂ ಬಹಳ ಸ್ವಾರಸ್ಯಕರವಾದ ಸಂಗತಿ. ಸ್ವಾತಂತ್ರ್ಯದ ಹಂಬಲವು ಮನುಷ್ಯನ ಸಹಜ ಪ್ರವೃತ್ತಿಯೆಂಬುದನ್ನು ಮನಗಾಣಲು ಈ ಮಕ್ಕಳ ಸಹವಾಸವೇ ಸಾಕು.

ವಿಶೇಷವೆಂದರೆ ಈ ಓಟವು ಅಲ್ಲಿಗೇ ನಿಲ್ಲುವುದಿಲ್ಲ. ಶಾಲೆಯಲ್ಲಿದ್ದಾಗ ಕಾಲೇಜಿಗೆ ಹೋಗೋದೇ ಸ್ವಾತಂತ್ರ್ಯ ಎಂಬ ಭ್ರಮೆಯಲ್ಲಿರುತ್ತೇವೆ. ಕಾಲೇಜಿಗೆ ಬಂದಾದ ಮೇಲೆ ಖ್ಯಾತ ಬಹುರಾಷ್ಟ್ರೀಯ ಕಂಪೆನಿಗಳು ಬಂದು ತಮ್ಮನ್ನು ಬೆಂಗಳೂರಿಗೋ, ಮುಂಬೈಗೋ, ಅಮೆರಿಕಾ-ಲಂಡನ್ನಿಗೋ ಪ್ಲೇಸ್ಮೆಂಟ್ ಮಾಡಿಕೊಂಡು ಕರೆದೊಯ್ಯುವುದೇ ನಿಜವಾದ ಸ್ವಾತಂತ್ರ್ಯ ಎಂದನ್ನಿಸತೊಡಗುತ್ತದೆ. ಮಹಾನಗರಗಳಲ್ಲಿ ನೆಲೆಸಿರುವ ಹಲವರು ವರ್ಷಕ್ಕೊಮ್ಮೆ ತಮ್ಮೂರಿಗೆ ಬಂದು ಹೋಗುವಾಗ ಬಹಳ ಉಲ್ಲಸಿತರಾಗಿ ಮರಳುತ್ತಾರೆ. ಒಂದಿಷ್ಟು ವರ್ಷ ಮೆಟ್ರೋಸಿಟಿಗಳಲ್ಲಿ ಕೆಲಸ ಮಾಡಿ, ಕಾಸು ಗಳಿಸಿ, ಮರಳಿ ತನ್ನೂರಿಗೆ ಬಂದು ಹಾಯಾಗಿರಬೇಕು ಎಂದು ಕನಸು ಕಾಣುತ್ತಾರೆ. 

ಆದರೆ ಇತ್ತ ಹಳ್ಳಿಯಲ್ಲಿರುವ ಮಂದಿಗೆ ಇಲ್ಲಿಯ ಬದುಕು ನಿಂತ ನೀರಿನಂತೆ ಸಪ್ಪೆಯಾಗಿ ಕಾಣಿಸುತ್ತದೆ. ಮೆಟ್ರೋಸಿಟಿಗಳ ವೇಗವಿರದ ನಮ್ಮೂರುಗಳು ಯಾವುದಕ್ಕೂ ಲಾಯಕ್ಕಿಲ್ಲ ಅಂತೆಲ್ಲ ರೋಸಿಹೋಗುತ್ತದೆ. ಗೃಹಿಣಿಯೊಬ್ಬಳಿಗೆ ಉದ್ಯೋಗಿ ಮಹಿಳೆಯೊಬ್ಬಳು ಸ್ವಚ್ಛಂದ ಹಕ್ಕಿಯಂತೆ ಕಂಡಂತೆಯೇ, ಉದ್ಯೋಗಿ ಮಹಿಳೆಗೆ ಗೃಹಿಣಿಯೊಬ್ಬಳು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವ ಹೆಣ್ಣಿನಂತೆ ಕಾಣುತ್ತಿರುತ್ತಾಳೆ. ಎಲ್ಲರಿಗೂ ತಾವಿರುವ ನಿಲ್ದಾಣವು ಜೈಲಿನಂತೆಯೂ, ದೂರದ ಗೋಪುರವೊಂದು ನಿಜಾರ್ಥದ ಬಿಡುಗಡೆಯಂತೆಯೂ ಕಾಣುತ್ತಿರುತ್ತದೆ. ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದರ್ಥದಲ್ಲಿ ಸ್ವಾತಂತ್ರ್ಯದ ತವಕ. ಹೌದು, ಅದು ಜನ್ಮಸಿದ್ಧ ಹಕ್ಕು.

ಈ ನಡುವೆ ಇವೆಲ್ಲದರಿಂದ ಆಚೆಗಿರುವಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬ ಒಮ್ಮೆ ಪವಾಡದಂತೆ ಸಿಕ್ಕಿದ್ದ. ಆತ ನನಗೆ ಸಿಕ್ಕಿದ್ದು ದಿಲ್ಲಿಯ ಒಂದು rescue center ನಲ್ಲಿ. ಅಲ್ಲಿದ್ದ ಅಷ್ಟೂ ಸ್ಥಳೀಯರ ಮಧ್ಯೆ ಈ ತರುಣನೊಬ್ಬ ಆಫ್ರಿಕನ್ ಆಗಿದ್ದರಿಂದ ಸುಲಭವಾಗಿ ಎಲ್ಲರ ಗಮನ ಸೆಳೆಯುವುದು ಸಹಜವೇ ಆಗಿತ್ತು. ಆದರೆ ಅಂದು ಮಾತ್ರ ಆತ ಇಯರ್-ಫೋನುಗಳನ್ನು ಕಿವಿಗೆ ಸಿಕ್ಕಿಸಿಕೊಂಡು, ಹಳೆಯ ಮೊಬೈಲ್ ಸೆಟ್ ಒಂದನ್ನು ಹಿಡಿದುಕೊಂಡು ಹಾಡು ಕೇಳುವುದರಲ್ಲಿ ಮಗ್ನನಾಗಿದ್ದ. ಹಾಸಿಗೆಯ ಮೇಲೆ ಆರಾಮಾಗಿ ಮೈಚೆಲ್ಲಿಕೊಂಡಿದ್ದ ಆತನನ್ನು ನೋಡಿದರೆ ಆತ ಅನಾಥಾಶ್ರಮದಲ್ಲಿದ್ದಾನೆ ಅನ್ನುವುದಕ್ಕಿಂತ ಯಾವುದೋ ಪಿಕ್ನಿಕ್ ಒಂದಕ್ಕೆ ಬಂದಿದ್ದಾನೆ ಅನ್ನುವಂತಿತ್ತು.

ಇನ್ನು ಈತನನ್ನು ಮಾತನಾಡಿಸಿದಾಗ ಹಲವು ರೋಚಕ ಸಂಗತಿಗಳು ಹೊರಬಿದ್ದಿದ್ದವು. ಶುದ್ಧ ಇಂಗ್ಲಿಷ್ ಮಾತಾಡುತ್ತಿದ್ದ, ಆರೋಗ್ಯವಂತನಾಗಿದ್ದ ಈ ತರುಣ ಗಾಂಬಿಯಾದ ನಾಗರಿಕನಂತೆ (ಬಹಳಷ್ಟು ಮಂದಿ ಗಾಂಬಿಯಾ ಮತ್ತು ಝಾಂಬಿಯಾ ಒಂದೇ ಎಂದು ಭಾವಿಸುತ್ತಾರೆ. ಇವುಗಳು ಆಫ್ರಿಕಾ ಎಂಬ ಒಂದೇ ಖಂಡದಲ್ಲಿದ್ದರೂ ಎರಡು ಪ್ರತ್ಯೇಕ ದೇಶಗಳಾಗಿವೆ). ವೃತ್ತಿಯಲ್ಲಿ ಪತ್ರಕರ್ತ. ತನ್ನ ದೇಶದ ಪ್ರಭಾವಿ ರಾಜಕೀಯ ನಾಯಕರ ಭ್ರಷ್ಟಾಚಾರದ ಕತೆಗಳನ್ನು ಬರೆದು ಅವರಿಗೆ ತಲೆನೋವಾಗಿ ಪರಿಣಮಿಸಿದ್ದನಂತೆ. ಹೀಗಾಗಿ ಈ ಪ್ರಭಾವಿ ಮಂದಿ ಈತನನ್ನು ಹತ್ಯೆ ಮಾಡಲು ಸಂಚೊಂದನ್ನು ರೂಪಿಸಿದ್ದರು. ಅದೃಷ್ಟವಶಾತ್ ಈತನ ಗ್ರಹಚಾರ ನೆಟ್ಟಗಿತ್ತು. ಪಾರಾಗಿಬಿಟ್ಟ. ತಿಂಗಳಾನುಗಟ್ಟಲೆ ಎಲ್ಲೆಲ್ಲೋ ತಲೆಮರೆಸಿಕೊಂಡು ಓಡಾಡಿ ಅದ್ಹೇಗೋ ಭಾರತದವರೆಗೆ ಬಂದು ತಲುಪಿದ್ದ. ಸದ್ಯ ದಿಲ್ಲಿಯ ಮೂಲೆಯೊಂದು ಅವನಿಗೀಗ ತಾತ್ಕಾಲಿಕ ತಂಗುದಾಣವಾಗಿತ್ತು.

ಈಗ ನಿನಗೇನು ಬೇಕು ಎಂದು ಪ್ರಶ್ನಿಸಿದರೆ ಸರಳವಾಗಿ “ತಾಯ್ನಾಡು” ಅಂದಿದ್ದ ಆತ. ಗಾಂಬಿಯಾದಲ್ಲಿ ಸಾವು ಅವನಿಗಾಗಿ ಕಾಯುತ್ತಿದ್ದರೂ ಆತನಿಗೆ ಅದರ ಬಗ್ಗೆ ಭಯವಿದ್ದಂತಿರಲಿಲ್ಲ. ಆತನ ಗಡೀಪಾರಿಗೆ ಸಂಬಂಧಪಟ್ಟಂತೆ ಸರಕಾರಿ ಪ್ರಕ್ರಿಯೆಗಳೆಲ್ಲವೂ ನಡೆಯುತ್ತಿದ್ದವು. ಈ ನಡುವೆ ಇವನೂ ಇಲ್ಲಿಯವನೇ ಆಗಿಬಿಟ್ಟಿದ್ದ. ಆದರೆ ಅವನಿಗೆ ಮಾತ್ರ ನಿಜವಾದ ಸ್ವಾತಂತ್ರ್ಯವೆಂಬುದು ತನ್ನ ದೇಶವಾದ ಗಾಂಬಿಯಾದಲ್ಲೇ ಕಾಣುತ್ತಿತ್ತು. ಅಲ್ಲಿಗೆ ತೆರಳಿದ ಮೇಲೂ ಬರೆಯುವುದನ್ನು ಬಿಡಬೇಡ ಮಾರಾಯ. ಅದೇನು ಬರೆದರೂ ಸರಿ, ನಾನು ಇಲ್ಲಿಂದಲೇ ಓದುತ್ತೇನೆ ಎಂದು ಕೇಳಿಕೊಂಡೆ. ಓ ಅದಕ್ಕೇನಂತೆ ಎಂದು ಖುಷಿಯಾಗಿಯೇ ಒಪ್ಪಿಕೊಂಡ. ಅಂದು ನಮ್ಮಲ್ಲಿ ಕೆಲವರಿಗೆ ಆತ ಸಾಹಸಿಯಂತೆ ಕಂಡರೆ, ಮತ್ತೆ ಕೆಲವರಿಗೆ ಸಂತನಂತೆ ಕಂಡಿದ್ದ. ಅಂತೂ ಮುಗುಳ್ನಗು ಮತ್ತು ಶುಭಹಾರೈಕೆಯೊಂದನ್ನು ಬಿಟ್ಟರೆ ಅವನಿಗೆ ಬೇರೇನಾದರೂ ಕೊಡಬಲ್ಲಷ್ಟು ಸ್ಥಿತಿವಂತರು ನಾವಲ್ಲ ಎಂದನ್ನಿಸಿತ್ತು.

ಆಸ್ಕರ್ ವಿಜೇತ “ಪ್ಯಾರಸೈಟ್” ಚಿತ್ರದಲ್ಲಿ ಕಾಡುವ ದೃಶ್ಯವೊಂದು ಬರುತ್ತದೆ. ಆತ ಕಾರು ಓಡಿಸುತ್ತಿದ್ದಾನೆ. ಹಿಂದಿನ ಸೀಟಿನಲ್ಲಿ ಸ್ಫುರದ್ರೂಪಿ ಹೆಂಗಸೊಬ್ಬಳು ಕೂತಿದ್ದಾಳೆ. ಆ ಕಾರುಚಾಲಕ ಕಡುಬಡವ. ಹಿಂದೆ ಕೂತವಳು ಮಹಾ ಸಿರಿವಂತೆ. ಹಿಂದೆ ಕೂತು ಫೋನಿನಲ್ಲಿ ಮಾತಾಡುತ್ತಾ, ಕಳೆದ ರಾತ್ರಿ ಧೋ ಎಂದು ಎಡೆಬಿಡದೆ ಸುರಿದ ಮಳೆಯು ಅದೆಷ್ಟು ಚಂದವಿತ್ತು ಎಂದು ಯಾರ ಬಳಿಯೋ ಹೇಳುತ್ತಿದ್ದಾಳೆ. ಆಕೆಯ ಮಾತನ್ನು ಕೇಳುತ್ತಾ ಮುಂದಿನ ಸೀಟಿನಲ್ಲಿ ಕೂತು ಕಾರು ಓಡಿಸುತ್ತಿರುವ ಚಾಲಕ ಒಳಗೊಳಗೇ ಕುದಿಯುತ್ತಿದ್ದಾನೆ. ಅವನ ಕಿರಿದಾದ ಕಣ್ಣುಗಳಲ್ಲಿ ಈ ಶ್ರೀಮಂತರ ಬಗ್ಗೆ ಅದೆಂಥದ್ದೋ ಅಸಹ್ಯ ಮತ್ತು ತೀವ್ರ ಅಸಮಾಧಾನ. ಏಕೆಂದರೆ ಆ ಮಹಾಮಳೆಗೆ ಅವನ ಬೆಂಕಿಪೊಟ್ಟಣದಂತಿದ್ದ ಪುಟ್ಟ ಮನೆಯು ಬಹುತೇಕ ಕೊಚ್ಚಿಹೋಗಿದೆ.

ಸ್ವಾತಂತ್ರ್ಯವೂ ಹಾಗೆಯೇ. ಕೆಲವೊಮ್ಮೆ ಸುಪ್ತಪ್ರಜ್ಞೆಯಂತಿದ್ದರೆ, ಇನ್ನು ಕೆಲವೊಮ್ಮೆ ಬಂದು ದುಃಸ್ವಪ್ನದಂತೆ ಕಾಣುತ್ತದೆ. ಒಮ್ಮೆ ಟೇಕನ್ ಫಾರ್ ಗ್ರಾಂಟೆಡ್ ಆಗಿಬಿಟ್ಟರೆ, ಮತ್ತೊಮ್ಮೆ ಅದುವೇ ಜೀವನಾಡಿ ಅಂತನ್ನಿಸಿಬಿಡುತ್ತದೆ. ಪಕ್ಕದ ದೇಶದಲ್ಲೆಲ್ಲೋ ಆಂತರಿಕ ಯುದ್ಧ ಶುರುವಾಗುವಾಗ, ದೂರದ ದೇಶದಲ್ಲೆಲ್ಲೋ ಏಕಾಏಕಿ ಯುದ್ಧಘೋಷಣೆಯಾಗಿ ಅಮಾಯಕರ ಹೆಣಗಳು ಹಾತೆಗಳಂತೆ ಬೀಳತೊಡಗಿದಾಗ, ಸಿದ್ಧಲಿಂಗಯ್ಯರ “ನಲವತ್ತೇಳರ ಸ್ವಾತಂತ್ರ್ಯ” ಪದ್ಯ ಓದಿದಾಗ, ಸ್ವಂತದ ಮನೆಯಂಗಳದಲ್ಲೇ ವ್ಯಕ್ತಿಸ್ವಾತಂತ್ರ್ಯದ ಹಕ್ಕುಗಳು ಬಲು ದುಬಾರಿಯೆಂದು ಭಾಸವಾಗುವಾಗ… ಜೀವ ತಲ್ಲಣಿಸಿಬಿಡುತ್ತದೆ.

ಆ ಕ್ಷಣದಲ್ಲೇ ಸ್ವಾತಂತ್ರ್ಯವೆಂಬುದು ಮತ್ಯಾವುದೋ ರೂಪದಲ್ಲಿ ಕಣ್ಣೆದುರು ನಿಂತು ತನ್ನ ಹೊಸ ವಿಶ್ವರೂಪವನ್ನು ಅನಾವರಣಗೊಳಿಸುತ್ತಿರುತ್ತದೆ.

ಪ್ರಸಾದ್‌ ನಾಯ್ಕ್‌, ದೆಹಲಿ 

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article