ಅರಣ್ಯ ‌ಇಲಾಖೆಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕ ಶೀಘ್ರ: ಸಚಿವ ಈಶ್ವರ ಬಿ.ಖಂಡ್ರೆ

Most read

ಕಲಬುರಗಿ: ವನ್ಯಜೀವಿಗಳ ಸಂರಕ್ಷಣೆಯನ್ನು ಮತ್ತಷ್ಟು ಸಮರ್ಪಕವಾಗಿ ನಿರ್ವಹಿಸಲು ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 6000 ಕಾಯಂ ಹಾಗೂ ಗುತ್ತಿಗೆ ಆಧರಿತ ಹುದ್ದೆಗಳನ್ನು ಶೀಘ್ರ ನೇಮಕ ಮಾಡಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ 341 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 540 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಸಕಾಲಕ್ಕೆ ಅರಣ್ಯ ಸಿಬ್ಬಂದಿಗೆ ವೇತನ ಪಾವತಿಯಾಗದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಹುಕಾಲದಿಂದ 2 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ. ಅರಣ್ಯ ‌ಭೂಮಿ ಕ್ಷೀಣಿಸುತ್ತಿರುವುದರಿಂದ ವನ್ಯಜೀವಿ ಮಾನವ ಸಂಘರ್ಷ ನಡೆಯಲು ಕಾರಣವಾಗಿದೆ. ಬೆಂಗಳೂರಿನಲ್ಲಿ 248 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿದ್ದು, ರೂ.10 ಸಾವಿರ ಕೋಟಿ ಮೌಲ್ಯದ 6231 ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಪಡೆಯಲಾಗಿದೆ ಎಂದರು.

ಆನೆ ಮತ್ತು ಹುಲಿಗಳ ದಾಳಿಯಿಂದ ಪ್ರತಿ ವರ್ಷ 50ರಿಂದ 60 ಜನ ಮರಣ ಹೊಂದುತ್ತಿದ್ದಾರೆ. ಆನೆ ಮಾನವ ಸಂಘರ್ಷ ತಪ್ಪಿಸಲು ಕಾಡಿನಿಂದ ಆನೆಗಳು ‌ಬರುವುದನ್ನು ತಪ್ಪಿಸಬೇಕಿದ್ದು, ಅರಣ್ಯದಲ್ಲಿ ಹೆಚ್ಚಿನ ಬಿದಿರು ಬೆಳೆಸಿ ಆನೆಗಳಿಗೆ ಆಹಾರ ಒದಗಿಸಲಾಗುವುದು. ಆನೆ ಕಾರಿಡಾರ್ ಗಳನ್ನು ಹಂತ ಹಂತವಾಗಿ ಪುನರ್ ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕಲ್ಯಾಣ ‌ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದ ಬಿಸಿಲಿನ ತಾಪ ತಗ್ಗಿಸಲು ಈ ಭಾಗದ ಐದು ಜಿಲ್ಲೆಗಳಲ್ಲಿ 25 ಲಕ್ಷ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಇಂದು ಕಲಬುರಗಿಯಲ್ಲಿ ಹಸಿರು ಪಥ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಹಾಜರಿದ್ದರು.

More articles

Latest article