ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6 ರಂದು ವಿಧಾನಸೌಧದಲ್ಲಿ ಮಂಡಿಸಲಿರುವ 2026–27ನೇ ಸಾಲಿನ ರಾಜ್ಯದ ಆಯವ್ಯಯದ ಬಜೆಟ್ ಭಾಷಣವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯದ ಆಯ್ದ ಬಸ್ ನಿಲ್ದಾಣಗಳಲ್ಲಿರುವ ಎಲ್‌ಇಡಿ ಮತ್ತು ಟಿವಿ ಪರದೆಗಳ ಮೂಲಕ ಮೊತ್ತ ಮೊದಲ ಬಾರಿಗೆ ನೇರ ಪ್ರಸಾರ ಮಾಡುತ್ತಿದೆ.
ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ಈ ಮಹತ್ವದ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್, ಐಪಿಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬೆಂಗಳೂರು ಮೂಲದ ವೃತ್ತಿ ಮೀಡಿಯಾ ಸಲ್ಯೂಷನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ ಇರುವ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಜಿಟಲ್ ಡಿಸ್ಪ್ಲೇ ಮತ್ತು ಟಿವಿ ಪರದೆಗಳ ಮೂಲಕ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ಮಾರ್ಚ್ 6 ರಂದು ಬೆಳಿಗ್ಗೆ 10.15 ಗಂಟೆಯಿಂದ ಪ್ರಸಾರ ಮಾಡಲಿದೆ.
ವಿಧಾನಸೌಧದಲ್ಲಿ ನಡೆಯುವ ಬಜೆಟ್ ಮಂಡನೆ ಹಾಗೂ ನಂತರ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯನ್ನೂ ಇದೇ ಪರದೆಗಳ ಮೂಲಕ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುತ್ತದೆ. ಇದರ ಮೂಲಕ ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿಯೇ ಈ ಮಹತ್ವದ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶವನ್ನು ಪಡೆಯಲಿದ್ದಾರೆ.


