ಬೆಂಗಳೂರು: ಕರ್ನಾಟಕದ ಅರಣ್ಯ ಪಡೆಗೆ ಪ್ರಥಮ ಮಹಿಳಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಐಎಫ್ಎಸ್ ಅಧಿಕಾರಿ ಮೀನಾಕ್ಷಿ ನೇಗಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಹಿರಿಯ ಐಎಫ್ಎಸ್ ಅಧಿಕಾರಿಯಾಗಿರುವ ಮೀನಾಕ್ಷಿ ನೇಗಿ ಮೂಲತಃ ಉತ್ತರಾಖಂಡದವರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯೂ ಆಗಿದ್ದ ಮೀನಾಕ್ಷಿ ಅವರನ್ನು ಆ ಸೇವೆಯಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದೀಗ ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
1989ರ ಬ್ಯಾಚ್ನ ಕರ್ನಾಟಕ ಕೆಡೇರ್ ನ ಐಎಫ್ಎಸ್ ಅಧಿಕಾರಿಯಾಗಿರುವ ಮೀನಾಕ್ಷಿ ನೇಗಿ 35 ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷ ಅಧಿಕಾರಿಯೆಂದು ಹೆಸರು ಮಾಡಿರುವ ಮೀನಾಕ್ಷಿ ನೇಗಿ ಬಳ್ಳಾರಿ, ಚಿಕ್ಕಮಗಳೂರು, ಮಂಡ್ಯದಲ್ಲಿ ಡಿಸಿಎಫ್ ಆಗಿ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ನಂತರ ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡ ಅವರು ಆಯುಷ್ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದರು. ಕಳೆದ 2 ವರ್ಷಗಳಿಂದ ಅವರು ಕೇಂದ್ರ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಇದೀಗ ಮತ್ತೆ ಕರ್ನಾಟಕ ಸರ್ಕಾರದ ಸೇವೆಗೆ ಮರಳಿರುವ ಮೀನಾಕ್ಷಿ ನೇಗಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಮೀನಾಕ್ಷಿ ನೇಗಿ ಅವರ ಪತಿ ವಿಜಯ ಶರ್ಮಾ ಕೂಡ ಕರ್ನಾಟಕ ಕೇಡರ್ನ ಐಎಫ್ಎಸ್ ಅಧಿಕಾರಿಯಾಗದ್ದು ನಿವೃತ್ತರಾಗಿದ್ದಾರೆ.