ಬೆಳಗಾವಿ: ಗೋಕಾಕ್ ನಗರದ ಮಹಾಲಕ್ಷ್ಮಿ ಜಾತ್ರೆಯಲ್ಲಿ ಇಂದು ಶಾಸಕ ರಮೇಶ ಜಾರಕಿಹೊಳಿ ಅವರ ಪುತ್ರ ಸಂತೋಷ್, ಜನಸಂದಣಿಯ ಮಧ್ಯೆಯೇ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ಹತ್ತು ವರ್ಷಗಳ ನಂತರ ಗೋಕಾಕ್ ನಗರದಲ್ಲಿ ಅದ್ಧೂರಿ ಜಾತ್ರೆ ನಡೆಯುತ್ತಿದೆ. ಜಾರಕಿಹೊಳಿ ಕುಟುಂಬದವರೇ ಜಾತ್ರೆಯ ಮುಂದಾಳತ್ವ ವಹಿಸಿದ್ದಾರೆ. ಉತ್ಸವದ ಆರನೇ ದಿನವಾದ ಇಂದು ಸಂತೋಷ ಜಾರಕಿಹೊಳಿ ಕೂಡ ಭಂಡಾರದ ಓಕುಳಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಬಂದೂಕು ಹಿಡಿದುಕೊಂಡು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರು. ಸುತ್ತ ಸೇರಿದ್ದ ಅವರ ಬೆಂಬಲಿಗರೆಲ್ಲ ಮಹಾಲಕ್ಷ್ಮೀಗೆ ಜೈ ಎಂದು ಘೋಷಣೆ ಕೂಗಿದರು. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ ಅಪರಾಧ ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.