ಎಲೆಕ್ಟ್ರಿಕ್‌ ಬೈಕ್‌ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ ಗಳು ಸುಟ್ಟು ಭಸ್ಮ

Most read

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಮತ್ತೊಂದು ಎಲೆಕ್ಟ್ರಿಕ್‌ ಬೈಕ್‌ ಶೋರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 20 ಬೈಕ್‌ಗಳು ಸುಟ್ಟು ಭಸ್ಮವಾಗಿವೆ. ಒಕಿನೊವಾ ಎಲೆಕ್ಟ್ರಿಕ್‌ ಬೈಕ್‌ ಶೋರೂಂನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬ್ಯಾಟರಿ ಓವರ್‌ ಚಾರ್ಜ್‌ ಆಗಿ ಸ್ಫೋಟಿಸಿದ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಶೋ ರೂಂನಲ್ಲಿದ್ದ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲವಾದರೂ ಆರ್ಥಿಕವಾಗಿ ನಷ್ಟ ಉಂಟಾಗಿದೆ. ಇಡೀ ಕಟ್ಟಡ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಶೋರೂಂನಲ್ಲಿ  ಒಟ್ಟು 74 ಬೈಕ್​ಗಳಿದ್ದು, 19 ಬೈಕ್​ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. 9 ಬೈಕ್​ಗಳು ಭಾಗಶಃ ಹಾನಿಯಾಗಿವೆ. ಪರವಾನಗಿ ಅವಧಿ ಮೀರಿದ ಬೈಕ್ ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಶುಕ್ರವಾರವಷ್ಟೇ ಆರ್​​ಟಿಓ ಅಧಿಕಾರಿಗಳು ಈ ಶೋರೂಂ ​ ಮೇಲೆ ದಾಳಿ ಮಾಡಿದ್ದರು. ಬ್ಯಾಟರಿ ಕ್ವಾಲಿಟಿ ಇಲ್ಲದಿರುವುದೇ ಘಟನೆಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.

ಅಗ್ನಿಶಾಮಕದಳದ ಅಧಿಕಾರಿ ಕಿಶೋರ್ ಮಾತನಾಡಿ ಇಂದು ಮಧ್ಯಾಹ್ನ 2.06 ನಿಮಿಷಕ್ಕೆ ಅಗ್ನಿಶಾಮಕ ಕಂಟ್ರೋಲ್ ಗೆ ರೂಂ ಗೆ ದೂರು ಬಂದಿದೆ. ನಂತರ ರಾಜಾಜಿನಗರ ಅಗ್ನಿಶಾಮಕ ಸೆಂಟರ್ ನಿಂದ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿವೆ.  ಬೆಂಕಿಯನ್ನು  ಸಂಪೂರ್ಣವಾಗಿ ನಂದಿಸಲಾಗಿದೆ. ಮೇಲ್ನೋಟಕ್ಕೆ ಶಾರ್ಟ್ ಸೆಕ್ಯೂರಿಟ್ ಅಥವಾ ಬ್ಯಾಟರಿ ಸ್ಪೋಟಗೊಂಡು ಈ ದುರಂತ ಸಂಭವಿಸಿರಬಹುದು ಎಂದು ಊಹಿಸಲಾಗಿದೆ ಎಂದು ಹೇಳಿದ್ದಾರೆ. ಅಗ್ನಿ ಅವಘಡ ಸಂಭವಿಸಿದಾಗ  ನಾಲ್ವರು ಶೋರೂಂನಲ್ಲಿದ್ದರು. ಅವರು ಕೂಡಲೇ ಹೊರ ಬಂದಿದ್ದಾರೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದರು.

ಕಳೆದ ವರ್ಷದ ಕೊನೆಯಲ್ಲಿ ಇದೇ ರಸ್ತೆಯ ಎಲೆಕ್ಟ್ರಿಕ್​ ಬೈಕ್​ ಶೋರೂಂ​ನಲ್ಲಿ ಅಗ್ನಿ ದುರಂತ ಸಂಭಿವಿಸಿತ್ತು. ಆಗ ಓರ್ವ ಯುವತಿ ಸಜೀವ ದಹನವಾಗಿದ್ದರು. 2025ರ ಹೊಸ ವರ್ಷದ ಮೊದಲ ದಿನವೇ  ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ನಾರಾಯಣಪುರದಲ್ಲಿರುವ ಬೈಕ್ ಶೋರೂಂಗೆ  ಬೆಂಕಿಬಿದ್ದು ಯಮಹಾ ಬ್ರ್ಯಾಂಡಿನ ಸುಮಾರು 60ಬೈಕ್ ಗಳು ಅಗ್ನಿಗಾಹುತಿಯಾಗಿದ್ದವು. ಇದರ ಬೆನ್ನಲ್ಲೇ ಇಂದು ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ.

More articles

Latest article