Sunday, July 14, 2024

ಸಂತ್ರಸ್ತೆಯ ನಗ್ನ ಮೆರವಣಿಗೆ ವೇಳೆ ಮೂಕಪ್ರೇಕ್ಷಕರಾಗಿ ನಿಂತ ಗ್ರಾಮಸ್ಥರಿಗೆ ದಂಡ ವಿಧಿಸಿ : ಕರ್ನಾಟಕ ಹೈಕೋರ್ಟ್

Most read


ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ವಂಟಮುರಿ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಸಂದರ್ಭದಲ್ಲಿ ಮೂಕಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದ ಗ್ರಾಮದ ಜನರಿಂದ ಪರಿಹಾರದ ರೂಪದಲ್ಲಿ ಹಣ ಸಂಗ್ರಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಮೌಖಿಕ ಆದೇಶ ನೀಡಿದೆ.


ಬೆಳಗಾವಿ ಘಟನೆ ಕುರಿತು ಸ್ವಯಂಪ್ರೇರಿತವಾಗಿ ಕೋರ್ಟ್‌ ಪ್ರಕರಣ ದಾಖಲಿಸಿಕೊಂಡಿದೆ. ಸೋಮವಾರ ಮುಖ್ಯ ನ್ಯಾಯಮೂರ್ತಿ ಪಿಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠವು ಅರ್ಜಿಯನ್ನು ಪರಿಶೀಲಿಸಿ, “ಗ್ರಾಮದಲ್ಲಿ ಸೇರಿದ್ದ ಜನಗಳ ಮುಂದೆ ಆರೋಪಿಗಳು ಹಿರೋಗಳಾಗಲು ಬಯಸುತ್ತಾರೆ. ಇದು ಸಾಮೂಹಿಕ ಮೂರ್ಖತನವು ಹೌದು, ಗ್ರಾಮಸ್ಥರ ಬೇಜವಾಬ್ದಾರಿತನವು ಹೌದು. ಹಾಗಾಗಿ ಕರ್ನಾಟಕ ಸರ್ಕಾರವು ಬೆಳಗಾವಿಯ ವಂಟಮುರಿ ಗ್ರಾಮದ ಜನರಿಗೆ ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದೆ.


ವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು, ಬ್ರಿಟೀಷ್ ಆಕ್ರಮಿತ ಭಾರತದ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕ್ ಎಂಬಾತ, ಕಳ್ಳತನದಲ್ಲಿ ತೊಡಗಿರುವ ಹಳ್ಳಿಗಳ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಿದ್ದಾರೆ ಎಂದು ಬೆಂಚ್ ಉಲ್ಲೇಖಿಸಿದೆ. ಅಂತೆಯೇ, ಅದೇ ರೀತಿಯಲ್ಲಿ ತೆರಿಗೆ ವಿಧಿಸಿದಲ್ಲಿ ಗ್ರಾಮಗಳಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಲಿದೆ. ಜನರು ಭವಿಷ್ಯದಲ್ಲಿ ಇಂತಹ ಘಟನೆ ನಡೆದರೆ ಮೌನವಾಗಿರದೆ ಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಹೇಳಿದೆ.

“ಇಂತಹ ಘಟನೆಗಳು ಸಂಭವಿಸಿದಾಗ ಜನರು ಮೂಕ ಪ್ರೇಕ್ಷಕರಾಗಿ ಇದ್ದರೆ, ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತದೆ? ಸ್ವಾರ್ಥಕ್ಕಾಗಿ ಹೇಡಿತನ ಪ್ರದರ್ಶಿಸುವ ಗ್ರಾಮಸ್ಥರು ಸಮುದಾಯದ ಬಗ್ಗೆ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಗ್ರಾಮದ ಪ್ರತಿಯೊಬ್ಬ ನಿವಾಸಿಯಿಂದ ಸರ್ಕಾರ ಹೆಚ್ಚುವರಿ ಸುಂಕಗಳನ್ನು ವಿಧಿಸಬೇಕು ಮತ್ತು ದಂಡವನ್ನು ಸಂಗ್ರಹಿಸಬೇಕು, ”ಎಂದು ಪೀಠ ಹೇಳಿದೆ.


“ಮಹಿಳೆಯೊಬ್ಬಳನ್ನು ಬಟ್ಟೆ ಬಿಚ್ಚಿದ ಮತ್ತು ಹಲ್ಲೆ ಮಾಡಿದ ಸಂದರ್ಭದಲ್ಲಿ ಗ್ರಾಮಸ್ಥರು ಮೂಕಪ್ರೇಕ್ಷಕರಾಗಿ ನಡೆದುಕೊಂಡ ರೀತಿ ಖಂಡನೀಯ. ಭವಿಷ್ಯದಲ್ಲಿ ಇಂತಹ ಘಟನೆಗಳು ನಿಲ್ಲಬೇಕಾದರೆ ನಾಗರಿಕ ಸಮಾಜಕ್ಕೆ ಸಂದೇಶ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ದಂಡ ವಸೂಲಿಗೆ ಆದೇಶಿಸುತ್ತಿದ್ದೇವೆ’ ಎಂದು ಪೀಠ ವಿವರಿಸಿತು.


ಜಹಾಂಗೀರ್ ಎಂಬ ವ್ಯಕ್ತಿ ಮಹಿಳೆಗೆ ಸಹಾಯ ಮಾಡಿದ್ದಾರೆ ಎಂದು ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ವಾದಿಸಿದರು. ಆದರೆ “ಘಟನೆ ನಡೆದಾಗ, 60 ರಿಂದ 70 ಜನರಿದ್ದರು, ಮತ್ತು ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಯಾರೂ ಸಂತ್ರಸ್ತರಿಗೆ ಸಹಾಯ ಮಾಡಲು ಧೈರ್ಯ ಮಾಡಲಿಲ್ಲ” ಎಂದು ಅಡ್ವೊಕೇಟ್ ಜನರಲ್ ಶೆಟ್ಟಿ ಕೋರ್ಟಿನಲ್ಲಿ ಹೇಳಿದ್ದಾರೆ.


“ಸಂತ್ರಸ್ತ ಮಹಿಳೆಗೆ ಸಮಾಲೋಚನೆ ನಡೆಸಲಾಗಿದ್ದು, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಆರೋಗ್ಯ ಪ್ರತಿದಿನ ಸುಧಾರಿಸುತ್ತಿದೆ. “ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಪರಿಣಾಮಕಾರಿ ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಿದೆ ಎಂದು ಹೇಳಿದ್ದಾರೆ. ಈವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಬಂಧಿಸಲಾಗಿದೆ. ಸರ್ಕಾರವು ಮಹಿಳೆಗೆ ಎರಡು ಎಕರೆ ಭೂಮಿ ಮತ್ತು 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿದೆ,” ಎಂದುವಿವರಿಸಿದರು.

ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳು ಹಾಗೂ ಇತರರನ್ನು ಅಮಾನತುಗೊಳಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಮಧ್ಯಪ್ರವೇಶಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ. ಘಟನೆಗೆ ಯಾವುದೇ ರಾಜಕೀಯ ಸಂಬಂಧವಿಲ್ಲ ಮತ್ತು ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವುದು ಉದ್ದೇಶವಾಗಿದೆ ಎಂದು ಪೀಠ ಹೇಳಿದೆ.

ಘಟನೆಯನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಈ ಹಿಂದೆ ಸರ್ಕಾರವನ್ನು ತೀವ್ರವಾಗಿ ಟೀಕಿಸಿತ್ತು. ಪೀಠವು, “ಈ ಘಟನೆಯಿಂದಾಗಿ ಇತರ ಮಹಿಳೆಯರಿಗೆ ದೇಶದಲ್ಲಿ ಅಸುರಕ್ಷಿತ ಭಾವನೆ ಮೂಡುತ್ತದೆ. ಮಹಾಭಾರತದಲ್ಲೂ ಹೀಗಾಗಲಿಲ್ಲ. ದ್ರೌಪದಿಯು ತನಗೆ ಸಹಾಯ ಮಾಡಲು ಬಂದ ಶ್ರೀಕೃಷ್ಣ ಬಂದರು, ಆದರೆ ಆಧುನಿಕ ಜಗತ್ತಿನಲ್ಲಿ ಯಾರೂ ಅವಳ ಸಹಾಯಕ್ಕೆ ಬರಲಿಲ್ಲ. ದುರದೃಷ್ಟವಶಾತ್, ಇದು ದುರ್ಯೋಧನರು ಮತ್ತು ದುಶ್ಶಾಸನರ ಪ್ರಪಂಚವಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.


ಡಿಸೆಂಬರ್ 10 ರಂದು 42 ವರ್ಷದ ಮಹಿಳೆಯನ್ನು ಆಕೆಯ ಮನೆಯ ಹೊರಗೆ ಎಳೆದೊಯ್ದು, ವಿವಸ್ತ್ರಗೊಳಿಸಿ, ಮೆರವಣಿಗೆ ನಡೆಸಿದಾಗ ಘಟನೆ ಸಂಭವಿಸಿದೆ. ನಂತರ ಆಕೆಯ ಮಗ ಗ್ರಾಮದ ಹುಡುಗಿಯೊಂದಿಗೆ ಓಡಿಹೋಗಿದ್ದರಿಂದ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

More articles

Latest article