ವಿವಾಹವಾಗದೆ ತಾಯಿಯಾಗುತ್ತಿರುವ ಚಿತ್ರನಟಿ ಭಾವನಾ ರಾಮಣ್ಣ; ನನ್ನ ಜೀವನದಲ್ಲಿ ಹೊಸ ಅಧ್ಯಾಯ… ಭಾವನಾತ್ಮಕ ಬರಹ

Most read

ಬೆಂಗಳೂರು: ಮದುವೆಯೇ ಆಗದೆ ತಾಯಿಯಾಗುವ ಮೂಲಕ ನಟಿ, ರಾಜಕಾರಣಿ ಭಾವನಾ ರಾಮಣ್ಣ ಅವರು ತಾಯಿಯಾಗುತ್ತಿದ್ದಾರೆ. ಈ ಮೂಲಕ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನ ಬರೆದುಕೊಂಡಿರುವ ಮಾಹಿತಿ ಮತ್ತು ಲಗತ್ತಿಸಿರುವ ಫೋಟೊ ಹುಬ್ಬೇರುವಂತೆ ಮಾಡಿದೆ. ಫೇಸ್‌ ಬುಕ್‌ ನಲ್ಲಿ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಬಳಿ ಇಂತಹ  ವಿಚಾರವನ್ನು ಹಂಚಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ನನಾನು ಊಹಿಸಿರಲಿಲ್ಲ. ರೀಕ್ಷೆಯನ್ನೂ ಹೊಂದಿರಲಿಲ್ಲ. ನಾನೀಗ ಅವಳಿ ಮಕ್ಕಳಿಗೆ ಆರು ತಿಂಗಳ ಗರ್ಭಿಣಿ. ಕೃತಜ್ಞಳಾಗಿದ್ದೇನೆ. ನನ್ನ 20 ಮತ್ತು 30ವಯಸ್ಸಿನಲ್ಲಿ  ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. ಆದರೆ ನನಗೆ 40 ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ, ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಆಸ್ಪತ್ರೆಗಳು ನನ್ನನ್ನು ಸಂಪೂರ್ಣವಾಗಿ ತಿರಸ್ಕರಿಸಿದವು. ಕೊನೆಗೆ  ಬನ್ನೇರುಘಟ್ಟ ರಸ್ತೆಯ ರೈನ್ ಬೊ ಆಸ್ಪತ್ರೆಯಲ್ಲಿ ಡಾ. ಸುಷ್ಮಾರನ್ನು ಭೇಟಿಯಾದೆ. ಅವರು ನನ್ನನ್ನು ಯಾವುದೇ ಉದ್ವೇಗ ಮತ್ತು ಪೂರ್ವನಿರ್ಧರಿತ ಅಭಿಪ್ರಾಯಗಳಿಲ್ಲದೆ ನನ್ನ ನಿರ್ಧಾರವನ್ನು ಒಪ್ಪಿಕೊಂಡರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ ಎಂದು ಭಾವನಾ ಹೇಳಿಕೊಂಡಿದ್ದಾರೆ.

ನನ್ನ ತಂದೆ ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಜತೆ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರಾದರೂ ನಾನು ಮಾನಸಿಕವಾಗಿ ಸಿದ್ಧಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ ಎಂದು ಹೇಳಿದ್ದಾರೆ.

ನನ್ನ ಈ ನಿರ್ಧಾರ ಯಾವುದೇ ಬಂಡಾಯ ಮಾರ್ಗವಲ್ಲ. ನನ್ನ ಸತ್ಯವನ್ನು ಗೌರವಿಸಲು ನಾನು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ.ನನ್ನ ಈ ನಿರ್ಧಾರ ಯಾವುದೇ ಮಹಿಳೆ ತನ್ನಲ್ಲಿ ತಾನು ನಂಬಿಕೆ ಹೊಂದಲು ಪ್ರೇರೇಪಿಸಿದರೆ ನನಗಷ್ಟೇ ಸಾಕು ಎಂದು ಹೇಳಿಕೊಂಡಿದ್ದಾರೆ. ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ, ಅದು ನನ್ನ ಬದುಕಿನ ಎಲ್ಲವೂ ಆಗಿರುತ್ತವೆ. ನನ್ನ ಪಕ್ಕದಲ್ಲಿ ನಡೆದಿದ್ದಕ್ಕಾಗಿ ವೈದ್ಯರಾದ ಡಾ. ಸುಷ್ಮಾ ಅವರಿಗೆ ಧನ್ಯವಾದಗಳು ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.

ಭಾವನಾ ಅವರು ಚಿತ್ರರಂಗ ಮಾತ್ರವಲ್ಲದೆ ರಾಜಕಾರಣದಲ್ಲೂ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ಅವರು ವಿಧಾನಸಭಾ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಪ್ರಯತ್ನ ಫಲ ನೀಡಿರಲಿಲ್ಲ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಬಾಲಭವನದ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದರು. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರಚಾರ ಮಾಡಿದ್ದರು.

ಚಂದ್ರಮುಖಿ ಪ್ರಾಣಸಖಿ, ದೇವೇರಿ, ದೀಪಾವಳಿ, ಪರ್ವ, ನಿನಗಾಗಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಭಾವನಾ ಭಾಗೀರಥಿ ಚಿತ್ರಕ್ಕಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ.

More articles

Latest article