ಬೆಂಗಳೂರು: ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರು. ಹೀಗಾಗಿ ವೈದ್ಯರ ಸೂಚನೆ ಮೇರೆಗೆ ಇಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರಂತರ ಪ್ರವಾಸ ಮತ್ತು ಕಾರ್ಯ ಒತ್ತಡದಿಂದ ಅವರು ಆಯಾಸಗೊಂಡಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಕಲವು ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ.
ಕೇಂದ್ರ ಸಚಿವರಾದ ಬಳಿಕ ಸದಾ ಪ್ರವಾಸದಲ್ಲಿರುವುದರಿಂದ ಕುಮಾರಸ್ವಾಮಿ ಅವರಿಗೆ ಅಗತ್ಯ ವಿಶ್ರಾಂತಿ ಸಿಗುತ್ತಿಲ್ಲ. ಹೀಗಾಗಿ ಜ್ವರದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದಾರೆ. ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿದ್ದು, ಅವರ ಈ ವಾರದ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ. ಮುಂದಿನ ಸೋಮವಾರದಿಂದ ಮತ್ತೆ ಇಲಾಖೆ ಕೆಲಸದಲ್ಲಿ ಕುಮಾರಸ್ವಾಮಿ ತೊಡಗಿಸಿಕೊಳ್ಳಲಿದ್ದಾರೆ.