ಹೆಣ್ಣು ಯಾವಾಗಲೂ ಅಹಿಂಸಾವಾದಿ : ಡಾ. ಅನಸೂಯಾ ಕಾಂಬಳೆ

Most read

ಧಾರವಾಡ: ಜನರದ್ದು ದೇವರು, ಧರ್ಮ, ಯಜ್ಞ, ಯಾಗಾದಿಗಳ ಹೆಸರಿನಲ್ಲಿ ಎಷ್ಟು ಸುಲಿಗೆಯಾಗುತ್ತಿದೆ ಅಂತಹದ್ದರಿಂದ ಜನರನ್ನು ಹೊರತರಬೇಕು. ಸಾಮುದಾಯಿಕ ಪ್ರಯೋಜನಕ್ಕೆ, ಸಮಾಜಕ್ಕೆ ಕಾವ್ಯ ಏನು ಮಾಡುತ್ತಿದೆ. ಬುದ್ಧಗುರು ಹೇಳಿದ್ದು ಮೊದಲು ಮಹಿಳೆಯರ ಸುಧಾರಣೆ ಆಗಬೇಕು ಅಂತ. ನಾವು ಪುರುಷನ ವರ್ತನೆಗಳನ್ನು ಬದಲಾಗುವಂತಹ ಸಾಹಿತ್ಯ ಬರೆಯುತ್ತಿದ್ದೇವಾ? ಪುರುಷ ಮನುಷ್ಯನಾಗುವಂತಹ ಸಾಹಿತ್ಯ ಬರೆಯುತ್ತಿದ್ದೇವಾ? ಕೊನೆಯ ವ್ಯಕ್ತಿಯವರೆಗೂ ಕಾವ್ಯವು ವಿಸ್ತಾರಗೊಳ್ಳಬೇಕೆಂದು ಮೂಡ್ನಾಕಾಡು ಚಿನ್ನಸ್ವಾಮಿ ಅವರು ಹೇಳಿದ ಮಾತು ಸತ್ಯ ಅಲ್ಲವೇ?

ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಮಾನವ ಹಕ್ಕುಗಳು ಹೇಳುತ್ತವೆ ಮಹಿಳೆಯರಿಗೂ ಬದುಕುವ ಹಕ್ಕು ಇವೆ ಅಂತ. ಹಾಗಾದರೆ ಬದುಕುವ ಹಕ್ಕನ್ನು ಕಸಿಯುತ್ತಿರುವ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬ ಮಾನವ. ಹೆಣ್ಣು ಕೂಡ ಮಾನವ ಎಂದು ಅನ್ನಿಸಿಕೊಳ್ಳಬೇಕೆಂಬ ಈ ದುರಿತ ಕಾಲದಲ್ಲಿ ಮಹಿಳೆಯ ಮೊಟ್ಟಮೊದಲ ಜನಪದ ಸಾಹಿತ್ಯ ನೋಡಿ, ತನ್ನ ಪಾಡನ್ನೇ ಹೇಳುವುದರ ಮೂಲಕ ಬದಲಾವಣೆಯ ಆಶಯವನ್ನು ಸೂಚಿಸುವುದು. ಕಷ್ಟಗಳು, ತನ್ನ ಮೇಲೆ ಶೋಷಣೆ, ದೌರ್ಜನ್ಯ ಆಗಿದೆ ಅಂದಾಗ ಬದಲಾವಣೆಯ ಆಶಯವನ್ನು ಸೂಚಿಸಬೇಕೆಂದಾಗ ಯಾರಿಗಾಗಿ ಬದಲಾವಣೆ ಬೇಕಾಗಿದೆ? ಈ ಬೀದಿಗೆ ಬಂತು ಕಾವ್ಯ ಎಂಬ ಘೋಷಣೆ ಒಂದು ರಾಜಕೀಯ ಘೋಷಣೆ ಅಂತ ನನಗೆ ಅನ್ನಿಸುತ್ತದೆ. ಅಂದ್ರೆ ರಾಜಕಾರಣಿಗಳು ಮಾಡಿದ ಘೋಷಣೆಗಳಲ್ಲ! ಕಾವ್ಯ ಯಾರನ್ನು ತಲುಪಬೇಕು, ದೀನ-ಜನತೆಯ ಬಗ್ಗೆ ನಾವು ಚಿಂತಿಸಬೇಕಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಅನಸೂಯಾ ಕಾಂಬಳೆ ಅವರು ಹೇಳಿದರು.

ಜಿಲ್ಲಾ ಕಸಾಪ ಸಾಹಿತ್ಯ ಭವನದಲ್ಲಿ ನಡೆದ ಕಾವ್ಯ ಸಂಸ್ಕೃತಿ ಯಾನ ಜನರೆಡೆಗೆ ಕಾವ್ಯ ಎಂಬ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು-ಜನಸಾಮಾನ್ಯರ ಮದ್ದಾಗಲಿ ಕಾವ್ಯದ ಮೊದಲ ಕವಿಗೋಷ್ಠಿಯ ಆಶಯ ನುಡಿ ಮಾತನಾಡುತ್ತಾ ಅವರು, ಭಾರತದಲ್ಲಿ ಹತ್ತು ಜನ ಶ್ರೀಮಂತರಾಗಿದ್ದಾರೆ ಅಂದರೆ ತೊಂಬತ್ತು ಜನ ಬಡವರಾಗಿದ್ದಾರೆಂದು ಯೋಚನೆ ಮಾಡಬೇಕು. ನಮ್ಮ ದೇಶ ಶ್ರೀಮಂತ ಅಂತ ಹೇಳುತ್ತೇವೆ. ಆ ದೇಶದಲ್ಲಿ ತೊಂಬತ್ತು ಜನ ಬಡವರು ಇದಾರಲ್ಲಾ? ಅವರ ಬಗ್ಗೆ ಯೋಚನೆ ಮಾಡಬೇಕಿದೆ. ಹಾಗಾದರೆ ಈ ಪ್ರಭುತ್ವವನ್ನು ಎಚ್ಚರಿಸಬೇಕೆಂದರೆ, ಈ ಜನರೆಡೆಗಿನ ಕಾವ್ಯ ಎಂಬ ಒಂದು ರಾಜಕೀಯ ತಂತ್ರ ಇದೆಯಲ್ಲಾ ಆ ತಂತ್ರವನ್ನು ನಾವು ಹೇಗೆ ಜನರೆಡೆಗೆ ಒಯ್ಯಬೇಕು. ಆ ತಂತ್ರ  ಹೆಣ್ಣನ್ನು ಸಬಲಗೊಳಿಸಬೇಕು. ಇವತ್ತಿನ ನಮ್ಮ ಹೊಸ ಶಬ್ದಗಳು, ಹೊಸ ನುಡಿಗಟ್ಟುಗಳು, ಹೊಸ ಭಾಷೆಗಳು ಈ ಇಕ್ರಲಾ! ಒದಿರ್ಲಾ! ಅಂತ ಹೇಳೋಕೆ ಆಗುವುದಿಲ್ಲ ನಮಗೆ ಎಂದರು.

ಮುಂದುವರೆದು, ಅನುಸೂಯ ಮೇಲೆ ಅತ್ಯಾಚಾರ ಆದಾಗಂತೂ ಎಲ್ಲರೂ ನನ್ನ ತಂಗಿ ಅನುಸೂಯ ಅಂದರು. ನಮಗೆ ನನ್ನ ತಂಗಿ ಅನ್ನುವ ಶಬ್ದ ಮತ್ತೆ ಇವತ್ತೇ ಬೇಕಾಗಿದೆ. ಹೇಗೆ ಕಾವ್ಯ ಮಿತ್ರನಾಗಬೇಕೆಂದು ಹೇಳಿದರೋ, ನೋವಿಗೆ ತುಡಿಯುವ ಮಿತ್ರ ಸಂಹಿತೆ ಬೇಕಿದೆ. ಪ್ರಭು ಸಂಹಿತೆಯನ್ನು ಆಚೆ ಇಟ್ಟು ಭಾರತೀಯ ಕಾವ್ಯ ಮೀಮಾಂಸೆ ಎಂಬುದು ವ್ಯಕ್ತಿ ಪ್ರಯೋಜನದ ನೆಲೆಯಲ್ಲಿ ನಡೆದಿದ್ದು. ಆದರೆ ಇವತ್ತು ವಚನ ಸಾಹಿತ್ಯವನ್ನು, ದಲಿತ, ಬಂಡಾಯ ಸಾಹಿತ್ಯವನ್ನು ಆ ಭಾರತೀಯ ಕಾವ್ಯ ಮೀಮಾಂಸೆಗೆ ಹೇಗೆ ಸಮೀಕರಿಸಿ ನೋಡುತ್ತೀರಿ!? ಅಲ್ಲಿರುವುದು ಸಮುದಾಯದ ಒಳಿತೇ ಹೊರತು, ವ್ಯಕ್ತಿ ಪ್ರಯೋಜನವಲ್ಲ. ಹಾಗಾಗಿ ಭಾರತೀಯ ಕಾವ್ಯ ಮೀಮಾಂಸೆ, ವಚನ ಸಾಹಿತ್ಯ ಮತ್ತು ದಲಿತ ಬಂಡಾಯ ಸಾಹಿತ್ಯವನ್ನು ಆ ನಮ್ಮ ಭಾರತೀಯ ಕಾವ್ಯ ಮೀಮಾಂಸೆಗೆ ಅನ್ವಯಿಸಲಿಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಇಲ್ಲಿ ನೋವಿನ ಕಾವ್ಯವನ್ನು ಯಾವ ರಸ ಅನುಭವಿಸುತ್ತೇವೆ ನಾವು, ರಸ ಬೇಕಲ್ಲಾ ಮನುಷ್ಯನಿಗೆ? ಕಾವ್ಯದ ರಸ ಇವತ್ತು ಜನ ಬದುಕಿದರೆ, ಸುಖವಾಗಿದ್ದರೆ, ನೋವಿಲ್ಲದೇ ಬದುಕಿದರೆ ನಮಗೆ ರಸ ದೊರಕುತ್ತದೆ. ಬದುಕಿನ ರಸ ಹೆಚ್ಚುತ್ತೆ ಆದರೆ ವ್ಯಕ್ತಿ ಪ್ರಯೋಜನದ ರಸ ಇದೆಯಲ್ಲಾ ಅದನ್ನು ನಮ್ಮ ವಚನ ಸಾಹಿತ್ಯ ಆವಾಗಲೇ ಹಿಂದಕ್ಕೆ ತಳ್ಳಿದೆ. ಸಾಮಾನ್ಯ ಒಬ್ಬ ಸೂಳೆ(ವೇಶ್ಯೆ) ಕೂಡ ವಚನ ಬರೆದದ್ದು. ಪುಣ್ಯ ಸ್ತ್ರೀ ಅಂತ ಅವರನ್ನು ಬಸವಣ್ಣ ಮುಂದೆ ತಂದ. ಇವತ್ತು ಆ ಮಹಿಳಾ ಕುಲವನ್ನು ನಾವು ಹೇಗೆ ನೋಡುತ್ತೀವಿ. ನಮ್ಮ ಜನರೆಡೆಗೆ ಕಾವ್ಯ ಹೋಗುವಾಗ ಈ ಮಹಿಳೆಯನ್ನು ನಾವು ಎಷ್ಟರಮಟ್ಟಿಗೆ ಒಳಗೊಳ್ಳಬೇಕೆಂದು ಸೂಚಿಸಿದರು.

ವಚನದ ನಂತರ ದಲಿತ ಬಂಡಾಯ ಸಾಹಿತ್ಯದಲ್ಲಿಯೇ ಹೆಚ್ಚು ಮಹಿಳೆಯರೇ ಕಾಣಿಸಬೇಕು ಅಂತಾ ಹೇಳುತ್ತಿದ್ದೇವು ಆದರೆ ಮಹಿಳೆಯರೇನೂ ಕಾಣಿಸಿಕೊಂಡರು. ಆದರೆ ಚಳುವಳಿಗಳ ಜೊತೆ ಅವರು ಹೆಜ್ಜೆ ಹಾಕಿದ್ದು ಕಡಿಮೆ ಅಂತಾ ನನ್ನ ಓದಿನ ಮಿತಿಯಲ್ಲಿಯೇ ಹೇಳುತ್ತಿರೋದು. ಇವತ್ತು ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ಆಗುತ್ತಿರುವ ಸಂದರ್ಭದಲ್ಲಿ, ಮಹಿಳೆಯ ಬದುಕನ್ನು ನಗಣ್ಯವಾಗಿಸಿ, ಅವರನ್ನು ಎಲ್ಲಿಬೇಕಾದಲ್ಲಿ ಕೊಂದು ಹಾಕಬಹುದು. ಆದರೆ ದಲಿತ ಶೇವಿಂಗ್ ಮಾಡಿಸಿಕೊಳ್ಳಬೇಕೆಂದು ಹೋದರೂ ಕೊಂದು ಹಾಕಿದರು. ಇಂತಹ ಪರಿಸ್ಥಿತಿಯಲ್ಲಿ ನಾವಿರುವಾಗ ನಮ್ಮ ಕಾವ್ಯದ ಉಸಿರು ಅಥವಾ ಶಕ್ತಿ ಹೇಗಿರಬೇಕು, ಮತ್ತೆ ಹೊಸದಾಗಿ ಯೋಚಿಸಬೇಕಾದಂತಹ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಹಸಿವು ಮತ್ತು ದೌರ್ಜನ್ಯಗಳ ವಿರುದ್ಧ ಇನ್ನೊಂದು ಲಿಂಗಾಧಾರಿತ ದೌರ್ಜನ್ಯ ಇದೆಯಲ್ಲಾ, ಇದನ್ನು ನಾವು ಕಾವ್ಯ ಕಟ್ಟುವಿಕೆಯಲ್ಲಿ ಹೇಗೆ ಬಳಸಿಕೊಳ್ಳಬೇಕು. ಅದಕ್ಕೆ ಮುಖಾಮುಖಿಯಾಗಬೇಕು. ಬೇಡರ ಕಣ್ಣಪ್ಪ ಎಂಥಾ ಭಕ್ತ ಅಂತಾ ಹೇಳುತ್ತಿವೆ ಅಂದಿನ ಆಹಾರ ರಾಜಕೀಯಕ್ಕೆ ಮುಖಾಮುಖಿಯಾದವನು ಬೇಡರ ಕಣ್ಣಪ್ಪ. ಇವತ್ತು ಶ್ರಾವಣದಲ್ಲಿ ಮಾಂಸ ತಿನ್ನಬೇಡಿ ಅಂತಾ ಹೇಳುತ್ತಿದ್ದಾರೆ. ಅದನ್ನು ನಂಬಿ ಆಚರಣೆಗೆ ತರುತ್ತಿರುವುದೇ ದಲಿತರು! ತಂಪು ಇದ್ದಾಗ ಜನಕ್ಕೆ ಮಾಂಸಾಹಾರ ಬೇಕು. ಮನುಷ್ಯನಿಗೆ Joint pain ಬರುವುದಿಲ್ಲ ಅಂತ. ಬುದ್ಧಗುರುವಿಗೆ ಒಬ್ಬ ಕೇಳುತ್ತಾನೆ. ಮಾಂಸಹಾರ ತಿನ್ನಬೇಕೋ, ಬೇಡ್ವೋ ಅಂತ. ಆಗ ಬುದ್ಧಗುರು ಯಾವ ಪ್ರದೇಶದಲ್ಲಿ ಏನು ತಿನ್ನಬೇಕೋ ಅದನ್ನು ತಿನ್ನಿ ಅಂತಾರೆ. ಒಬ್ಬ ದಲಿತ ಬ್ರಾಹ್ಮಣ ಅಥವಾ ಮೇಲ್ಜಾತಿಯವನಲ್ಲಿ ನಾನು ಮಾಂಸ ತಿನ್ನುವುದಿಲ್ಲ, ಮದ್ಯ ತ್ಯಜಿಸಿದ್ದೇನೆಂದು ಸಾರಿಕೊಂಡಾಗಲೂ ಅವನ ಜಾತಿ ಬದಲಾಗಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸಾಮಾನ್ಯ ಮನುಷ್ಯ ಸಾಹಿತ್ಯದಲ್ಲಿ ಎಲ್ಲಿಯವರೆಗೂ ಕಾಣಿಸಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಅದು ಸಾಹಿತ್ಯವೇ ಅಲ್ಲ ಅಂತ ದಲಿತ ಕವಿ ಸಿದ್ಧಲಿಂಗಯ್ಯ ಹೇಳುತ್ತಾರೆ. ಮನುಷ್ಯ ಪ್ರೀತಿಯನ್ನು ನಾವೆಲ್ಲರೂ ಭಾರತೀಯರು ಅನ್ನುವ ಸಂವಿಧಾನದ ಆಶಯ ಇದೆಯಲ್ಲಾ!? ಅದನ್ನು ನಾವು ಕಾವ್ಯದಲ್ಲಿ ಹೇಗೆ ತರಬೇಕು ಎಂಬ ಕಾಳಜಿ ಬರಬೇಕಿದೆ. ಯಾಕೆಂದರೆ ನಮ್ಮ ಮೇಲಿನ ದೌರ್ಜನ್ಯವನ್ನು ನಾವು ವಿರೋಧಿಸುತ್ತಿಲ್ಲ, ನಮ್ಮ ಮೇಲಿನ ಕೊಲೆಗಳನ್ನು ವಿರೋಧಿಸುತ್ತಿದ್ದೇವೆ. ಅದಕ್ಕೆ ನಾವು ಬೀದಿಗೆ ಬರುತ್ತಿದ್ದೇವೆ. ಈ ಜನಪ್ರಜ್ಞೆಯನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದಕ್ಕೆ ಬಹಳ ಸೂಕ್ತವಾದ ಒಂದು ವೇದಿಕೆ ಈ ಕಾವ್ಯ ಯಾನ. ತೃತೀಯ ಲಿಂಗಿಗಳಿಗೆ ಅವರಿಗೆ ಯಾವ ಲಿಂಗ ಇಲ್ಲಾ ಅಂತಾ ಹೇಳುವಾಗಲೂ ಅವರು ತಮ್ಮ ಲಿಂಗ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ನಾವು ಲಿಂಗಪ್ರಜ್ಞೆಯನ್ನು ಮೀರಿ ಮತ್ತೆ ಹೋರಾಟವನ್ನು ಕಟ್ಟಬೇಕಾದಂತಹ ಕಾವ್ಯದ ಅನಿವಾರ್ಯತೆ ಇದೆ. ಸ್ತ್ರೀ ಸಂವೇದನೆಯನ್ನು ನಾವು ಹೇಗೆ ಗುರುತಿಸಿಕೊಳ್ಳಬೇಕೆಂದು ಸೂಕ್ಷ್ಮವಾಗಿ ವಿಷಯಗಳನ್ನು ಬಿಡಿಬಿಡಿಯಾಗಿ ಮನವರಿಕೆ ಮಾಡಿ ಹೇಳುತ್ತಿದ್ದರು.

ಗಟ್ಟಿಯಾದ ಕಾವ್ಯ ಬರುತ್ತಿಲ್ಲ ಅನ್ನುವ ಸಂದರ್ಭದಲ್ಲೇ, ಇದಕ್ಕೊಂದು ಗಟ್ಟಿಯಾದ ಜನಧ್ವನಿಯನ್ನು ಭುಗಿಲೆಬ್ಬಿಸಿ ಆ ಮೂಲಕ ಸಾಂಸ್ಕೃತಿಕ ಹೋರಾಟವನ್ನು ರೂಪಿಸಲಿ ಅದಕ್ಕೆ ಹೋರಾಟಕ್ಕೆ ಸಾಂಸ್ಕೃತಿಕ, ಸಾಹಿತ್ಯದ Touch(ಸ್ಪರ್ಶ) ಇಲ್ಲದಾಗ ಅದು ನಿಷ್ಕ್ರಿಯಗೊಳ್ಳುತ್ತದೆ. ಹಿನ್ನೆಲೆಗೆ ಸರಿದಿದೆ. ಅಂತಹ ಒಂದು ಸಾಂಸ್ಕೃತಿಕ ಸ್ಪರ್ಶ ಕೊಡುವುದರ ಮೂಲಕ ಮತ್ತೊಂದು ಸಲ ನಾಡಿನಲ್ಲಿ ಇಂತಹ ಒಂದು ಚಳುವಳಿ ಹುಟ್ಟಿಕೊಳ್ಳಲಿ ಅಂತ ಹೇಳುತ್ತಾ, ಬಯಲುಪ್ರಜ್ಞೆಯ ಮಹಾಮನೆ ಧರೆಗೆ ದೊಡ್ಡವರು ಎನ್ನುವ ಪ್ರಜ್ಞೆ ನಮ್ಮಲ್ಲಿ ಇದೆ ಆ ಧರೆಗೆ ದೊಡ್ಡವರು ಅನ್ನುವ ಪ್ರಜ್ಞೆಯನ್ನೂ ಕೂಡ ಮತ್ತೆ ದ್ವಿಗುಣಗೊಳಿಸುವಲ್ಲಿ ನಮ್ಮ ಈ ಕಾವ್ಯ ಯಾನ ಸಾಗಲಿ ಅಂತ ಆಶಿಸಿದರು.

More articles

Latest article