ಉನ್ನತ ಶಿಕ್ಷಣದಲ್ಲಿ ಅನಾಥ ಮಕ್ಕಳಿಗೆ ವಿಶೇಷ ರಿಯಾಯಿತಿ ನೀಡಲು ಚಿಂತನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Most read

ಬೆಂಗಳೂರು: ಅನಾಥಾಶ್ರಮಗಳಲ್ಲಿ ಇರುವ ಮಕ್ಕಳಿಗೆ ಪದವಿ ಪೂರ್ವ ಶಿಕ್ಷಣದವರೆಗೂ ದಾಖಲಾತಿ ಬಗ್ಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಉನ್ನತ ಶಿಕ್ಷಣಕ್ಕೆ ದಾಖಲಾಗುವ ಸಂದರ್ಭದಲ್ಲಿ ಸಾಮಾನ್ಯವರ್ಗದ ಇತರ ಮಕ್ಕಳಂತೆ ಈ ಮಕ್ಕಳನ್ನು ದಾಖಲಾತಿ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇಂಥ ಮಕ್ಕಳಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಭರವಸೆ ನೀಡಿದ್ದಾರೆ.

ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕದಲ್ಲಿ 108 ಸರ್ಕಾರಿ, 54 ಅನುದಾನಿತ ಮತ್ತು 550 ಖಾಸಗಿ ಒಟ್ಟು 712 ಮಕ್ಕಳ ಪಾಲನಾ ಸಂಸ್ಥೆಗಳು  ಕಾರ್ಯನಿರ್ವಹಿಸುತ್ತಿದ್ದು, 712 ಸಂಸ್ಥೆಗಳಲ್ಲಿ ಒಟ್ಟು ಮಕ್ಕಳ ಸಾಮರ್ಥ್ಯ 38,975 ಇದ್ದು, ಈ ಪೈಕಿ 17,048 (7874 ಹೆಣ್ಣು, 9175 ಗಂಡು) ಮಕ್ಕಳು ದಾಖಲಾಗಿರುತ್ತಾರೆ ಎಂದು ಮಾಹಿತಿ ನೀಡಿದರು.

ಮಕ್ಕಳ ಪಾಲನಾ ಸಂಸ್ಥೆಗಳಿಗೆ ಅನಾಥ, ನಿರ್ಗತಿಕ ಹಾಗೂ ಒಪ್ಪಿಸಲ್ಪಟ್ಟ ಮಕ್ಕಳು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ದಾಖಲಾಗುತ್ತಿದ್ದು, ಕೆಲವು ಮಕ್ಕಳಿಗೆ ಸಂಬಂಧಿಸಿದಂತೆ ತಮ್ಮ ಕೌಟುಂಬಿಕ ಹಿನ್ನೆಲೆ ಹಾಗೂ ಜಾತಿಯ ಮಾಹಿತಿ ಇರುವುದಿಲ್ಲ. ಜಿಲ್ಲಾ ಶಸ್ತ್ರ ಚಿಕಿತ್ಸಕರ ವೈದ್ಯಕೀಯ ತಪಾಸಣೆ ಮತ್ತು ವರದಿಯಂತೆ ಮಗುವಿನ ವಯಸ್ಸನ್ನು ದೃಢೀಕರಿಸಲಾಗುತ್ತದೆ ಎಂದರು.

ಪದವಿ ಪೂರ್ವ ಶಿಕ್ಷಣದವರೆಗೂ ಶಿಕ್ಷಣ ಮುಂದುವರಿಸಲು ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ. ಆದರೆ, ಪದವಿ ಪೂರ್ವ ಶಿಕ್ಷಣದ ಬಳಿಕ ವೃತ್ತಿಪರ ಕೋರ್ಸ್‌ಗಳಿಗೆ ಸೇರುವ ಸಂದರ್ಭದಲ್ಲಿ ತಮ್ಮ ಜಾತಿ ಹಿನ್ನಲೆಯ ಮಾಹಿತಿ ಲಭ್ಯವಿಲ್ಲದೇ ಇರುವ ಮಕ್ಕಳನ್ನು ಸಾಮಾನ್ಯ ವಿಭಾಗದಲ್ಲಿ ದಾಖಲು ಮಾಡಲಾಗುತ್ತಿದೆ. ಜೊತೆಗೆ ಅರ್ಹತೆ ಇರುವ ಎಲ್ಲಾ ಮಕ್ಕಳಿಗೂ ಉನ್ನತ ಶಿಕ್ಷಣವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದರು.

ಜಾತಿ ಹಿನ್ನೆಲೆ ಇಲ್ಲದೆ ಇರುವ ಮಕ್ಕಳಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡ ವರ್ಗಗಳಿಗೆ ಸೇರಿಸಬೇಕು ಅಂತ ಸಮಾಜ ಕಲ್ಯಾಣ ಇಲಾಖೆಗೆ ಕೋರಲಾಗಿತ್ತು. ಆದರೆ, ಈ ವರ್ಗಕ್ಕೆ ಸೇರಿಸಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯಿಂದ ಉತ್ತರ ಬಂದಿದೆ. ಜಯಪ್ರಕಾಶ್‌ ಹೆಗ್ಡೆ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ವೇಳೆ ಈ ಮಕ್ಕಳನ್ನು ಕ್ಯಾಟಗೆರಿ-1ಕ್ಕೆ ಸೇರಿಸಬೇಕು ಎಂದು ಶಿಫಾರಸ್ಸು ಮಾಡಿದ್ದರು.  ಈ ಮಕ್ಕಳ ಹಿತದೃಷ್ಟಿಯಿಂದ ಸಮಾಜ ಕಲ್ಯಾಣ ಇಲಾಖೆ ಸಚಿವರೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಮಕ್ಕಳ ಪಾಲನಾ ಸಂಸ್ಥೆಯಿಂದ ಬಿಡುಗಡೆಯಾಗಿರುವ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸ್ವ-ಉದ್ಯೋಗ, ಖಾಸಗಿ ಉದ್ಯೋಗವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಚಿವರು ಹೇಳಿದರು.

More articles

Latest article