ಬಂಗಾರಪೇಟೆ : ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿಯ ಗ್ರಾಮವೊಂದರಲ್ಲಿ ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿ, ಐದು ತಿಂಗಳ ಗರ್ಭಿಣಿ ಮಾಡಿರುವ ಹೀನಾಯ ಪ್ರಕರಣ ಬೆಳಕಿಗೆ ಬಂದಿದೆ. ಈ ಕೃತ್ಯ ಎಸಗಿದ ಆರೋಪಿ ಅಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. 55 ವರ್ಷದ ಆರೋಪಿಗೆ ಮೂವರು ಮಕ್ಕಳಿದ್ದು, ಈತ ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕನಾಗಿ ಕೆಲಸ
ಮಾಡುತ್ತಿದ್ದಾನೆ.
ಹನ್ನೊಂದು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ ಈ ವ್ಯಕ್ತಿ ಕಳೆದ ಆರು ತಿಂಗಳ ಹಿಂದೆ ತನ್ನ 20ರ ಹರೆಯದ ಪುತ್ರಿ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದ. ಸತತ ಮೂರು ದಿನ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯ ಋತುಚಕ್ರದಲ್ಲಿ ಏರುಪೇರು ಕಂಡು ಬಂದ ಕಾರಣ ಆಕೆಯ ಅಕ್ಕ ಕೋಲಾರದ ಆಸ್ಪತ್ರೆಯೊಂದಕ್ಕೆ ಕರೆತಂದು ಪರೀಕ್ಷಿಸಿದ್ದಾರೆ. ಆಗ ಆಕೆ ಐದು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಯನ್ನು ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ.
ಪುತ್ರಿ ನೀಡಿದ ದೂರಿನ ಮೇರೆಗೆ ಕಾಮಸಮುದ್ರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.