ಮೇ 1 ರಿಂದ ಜಿಪಿಎಸ್ ಆಧಾರಿತ ಫಾಸ್ಟ್‌ ಟ್ಯಾಗ್‌: ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನೀಡಿದ ಸ್ಪಷ್ಟನೆ ಏನು?

Most read

ಬೆಂಗಳೂರು: ಟೋಲ್ ಸಂಗ್ರಹ ಕೇಂದ್ರಗಳಲ್ಲಿ 2025 ರ ಮೇ 1 ರಿಂದ ಜಿಪಿಎಸ್ ಆಧಾರಿತ ಫಾಸ್ಟ್‌ ಟ್ಯಾಗ್‌ (FASTag) ವ್ಯವಸ್ಥೆ ಜಾರಿಗೊಳಿಸುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಟೋಲ್ ಗಳಲ್ಲಿ  2025 ರ ಮೇ 1 ರಿಂದ ಜಿಪಿಎಸ್ ಆಧಾರಿತ ಫಾಸ್ಟ್‌ ಟ್ಯಾಗ್‌ ವ್ಯವಸ್ಥೆ ಜಾರಿಗೆ ಬರಲಿದೆ ಎಂಬ ಸುದ್ದಿಗಳು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.

ಆದರೆ, ಈ ವರದಿಗಳನ್ನು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ತಳ್ಳಿಹಾಕಿ ಸ್ಪಷ್ಟನೆ ನೀಡಿದೆ. ಮೇ 1 ರಿಂದ ಜಿಪಿಎಸ್ ಆಧಾರಿತ ಫಾಸ್ಟ್‌ ಟ್ಯಾಗ್‌ ವ್ಯವಸ್ಥೆ ಬರಲಿದೆ ಎಂದು ಕೆಲ ಮಾಧ್ಯಮಗಳು ಹೇಳಿವೆ. ಆದರೆ, ಆ ರೀತಿಯ ಯಾವುದೇ ನಿರ್ಧಾರವನ್ನು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ತೆಗೆದುಕೊಂಡಿರುವುದಿಲ್ಲ  ಎಂದು ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

ದೇಶದ ಎಲ್ಲ ಭಾಗಗಳಲ್ಲಿಯೂ ಸದ್ಯ ಫಾಸ್ಟ್‌ ಟ್ಯಾಗ್‌ ವ್ಯವಸ್ಥೆಯೇ ಮುಂದುವರೆಯಲಿದೆ. ಆದರೆ, ಕೆಲವು ಭಾಗಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ಆಧರಿಸಿ ಟೋಲ್ ವಸೂಲಿ ಮಾಡುವ ವಿಧಾನವನ್ನು (NPR-FASTag) ಪ್ರಾಯೋಗಿಕವಾಗಿ ಅಳವಡಿಸುವ ಚಿಂತನೆ ಮಾಡಲಾಗುತ್ತಿದೆ. ಅದರ ಸಾಧಕ ಬಾಧಕಗಳನ್ನು ನೋಡಿಕೊಂಡು ಉಳಿದ ಟೋಲ್‌ ಗಳಲ್ಲಿಯೂ ಅಳವಡಿಸಲು ತಯಾರಿ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ಹಾಲಿ ಫಾಸ್ಟ್‌ ಟ್ಯಾಗ್‌ ವ್ಯವಸ್ಥೆಯ ಲೋಪದೋಷಗಳನ್ನು ಕುರಿತು ಬಳಕೆದಾರರು ಹೆದ್ದಾರಿ ಪ್ರಾಧಿಕಾರಕ್ಕೆ ನಿರಂತರವಾಗಿ ದೂರುಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಹೀಗಾಗಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಬರಬೇಕು ಎನ್ನುವುದು ಅವರ ಗ್ರಾಹಕರ ಬೇಡಿಕೆಯಾಗಿದೆ.

More articles

Latest article