ಮಂಗಗಳ ನಿಯಂತ್ರಣದ ಬಗ್ಗೆ ಮಾತನಾಡಿದಾಗ ಅಪಸ್ವರ ಎತ್ತುವ ಪ್ರಾಣಿದಯಾ ಸಂಘಗಳಾಗಲಿ, ಕೆಲವು ಪರಿಸರವಾದಿಗಳಾಗಲಿ ಕಪಿಕಾಟದಿಂದ ಮಲೆನಾಡಿನ ಕೃಷಿಬದುಕು ರೋಸಿ ಹೋಗಿದೆ ಅಂತ ಅರ್ಥಮಾಡಿಕೊಳ್ಳುವುದೇ ಇಲ್ಲ. ಮಾನವನ ಅತೀ ಹಸ್ತಕ್ಷೇಪಗಳಿಂದ ಅವುಗಳ ಸಂತತಿಯಲ್ಲಿ ಆಗಿರುವ ವೈಪರೀತ್ಯವನ್ನು ಕೆಲವು ಕ್ರಮಗಳಿಂದ ನಾವೇ ಸ್ವಲ್ಪ ಹತೋಟಿಗೆ ತರಬೇಕು – ನಾಗರಾಜ ಕೂವೆ, ಪರಿಸರ ಬರಹಗಾರರು.
ಮನೆಯೊಳಗೆ ಪುಸ್ತಕ ಹಿಡಿದು ಕುಳಿತಿದ್ದೆ. ಅಲ್ಲೇ ಸಮೀಪದ ತೋಟದಿಂದ ಏನೋ ಒಂದು ಸದ್ದು ಕೇಳಿಸಿತು. ಆ ಸದ್ದು ಕಿವಿಗೆ ಬಿದ್ದೊಡನೆಯೇ, ಈ ಮಟ ಮಟ ಮಧ್ಯಾಹ್ನ ತೋಟಕ್ಕೆ ಬಂದಿರುವ ಅತಿಥಿಗಳು ಬೇರಾರೂ ಅಲ್ಲ, ಮಂಗಗಳ ಸೈನ್ಯ ಎಂದು ತಕ್ಷಣ ಹೊಳೆಯಿತು! ಎಲ್ಲವನ್ನೂ ಹಾಳುಗೆಡುವುವ ಈ ಉಪದ್ರವಕಾರಿ ಮಂಗಗಳನ್ನು ಓಡಿಸೋಣ ಎಂದು ಮನೆಯ ನಾಯಿಯನ್ನು ‘ಛೂ… ಛೂ…’ ಎಂದು ಕರೆದು, ಬೊಗಳಿ ಮಂಗಗಳನ್ನು ದೂರ ಅಟ್ಟಲು ಪ್ರೋತ್ಸಾಹಿಸಿದೆ. ಅಂಗಳದಲ್ಲೇ ಮಲಗಿದ್ದ ಆ ನಾಯಿ ತಲೆಯೆತ್ತಿ ನನ್ನನ್ನೊಮ್ಮೆ, ಮಂಗಗಳಿದ್ದ ಹಲಸಿನ ಮರವನ್ನೊಮ್ಮೆ ನೋಡಿ ಯಾವುದೇ ಉತ್ಸಾಹ ತೋರಿಸದೇ ಇದ್ದಲ್ಲೇ ಇನ್ನಷ್ಟು ಮುದುರಿ ಮಲಗಿತು.
ಮಂಗಗಳನ್ನು ಓಡಿಸಲು ಸ್ವಲ್ಪವೂ ಪ್ರಯತ್ನಿಸದ ನಾಯಿಯನ್ನು ಹೀನಾಮಾನ ಶಪಿಸುತ್ತಾ ಅಂಗಳಕ್ಕೆ ಇಳಿದೆ. ಜೋರು ಬೊಬ್ಬೆ, ಕಲ್ಲು ಎಸೆತ, ಡಬ್ಬಿ ಬಡಿತ ಎಲ್ಲಾ ಸೇವೆಯೂ ಆಯಿತು. ಆದರೆ ಮಂಗಗಳು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಆರಾಮವಾಗಿ ಹಲಸಿನ ಕಾಯಿ ತಿನ್ನುತ್ತಾ ಕುಳಿತೇ ಇದ್ದವು. ಈ ಬೇಸಿಗೆಯ ಮೂವತ್ತೆಂಟು ಡಿಗ್ರಿ ಉಷ್ಣಾಂಶದ ಮಧ್ಯೆ ನನ್ನ ಕಸುವೆಲ್ಲಾ ಮುಗಿದು ಹೋಗಿ ಇನ್ನು ಸಾಧ್ಯವೇ ಇಲ್ಲ ಎಂದು ನಿರಾಶನಾಗಿ ವಾಪಸ್ಸು ಮನೆಯಡೆಗೆ ಮರಳಿದೆ…
ಚಾಟಿ ಬಿಲ್ಲಿನಿಂದ ಕಲ್ಲು ಹೊಡೆಯುವುದು, ಜೋರಾಗಿ ಬೊಬ್ಬೆ ಹೊಡೆಯುವುದು, ತಮಟೆಯಂತಹ ಸಾಧನ ಬಳಸಿ ಜೋರು ಶಬ್ದ ಬರಿಸುವುದು, ಹುಲಿ ಮಂಗನನ್ನು ಹಿಡಿಯುತ್ತಿರುವ ಬ್ಯಾನರ್ ಕಟ್ಟುವುದು, ಕನ್ನಡಿ ಇಡುವುದು, ಬೆದರುಗೊಂಬೆಗಳನ್ನಿರಿಸುವುದು, ನಾಯಿಯನ್ನು ಛೂ ಬಿಡುವುದು, ಕೋವಿಯಿಂದ ಹೆದರಿಸುವುದು, ಹುಲಿ ಕೂಗಿನ ಆಡಿಯೋ ಜೋರಾಗಿ ಹಾಕುವುದು, ಒಣಮೀನಿಗೆ ಮೆಣಸಿನ ಪುಡಿ ಹಚ್ಚಿಡುವುದು ಇತ್ಯಾದಿ… ಮಂಗಗಳನ್ನು ಓಡಿಸಲು ಮಲೆನಾಡಿನ ರೈತರು ಅದೆಷ್ಟು ಪ್ರಯೋಗಗಳನ್ನು ಮಾಡಿದ್ದಾರೋ/ಮಾಡುತ್ತಿದ್ದಾರೋ ಅದಕ್ಕೆ ಲೆಕ್ಕವೇ ಇಲ್ಲ. ಇಲ್ಲಿನ ಕೆಲವು ಮನೆಗಳಿಗೊಬ್ಬನಂತೆ ಮಂಗನ ಕಾವಲುಗಾರರನನ್ನು ನೇಮಿಸುವುದೂ ಇದೆ. ಉಹುಂ, ಏನು ಮಾಡಿದರೂ ಕಪಿಸೈನ್ಯ ಮಾತ್ರ ಯಾವುದಕ್ಕೂ ಜಗ್ಗುವುದೇ ಇಲ್ಲ. ರೈತರ ಯಾವ ಕಡಿವಾಣದ ಪ್ರಯೋಗಗಳೂ ಒಂದೆರಡು ತಿಂಗಳುಗಳಿಗಿಂತ ಹೆಚ್ಚಿಗೆ ಬಾಳಿಕೆ ಬರಲಾರವು ಅನ್ನುವಷ್ಟು ಇವತ್ತು ಮಂಗಗಳು ಮುಂದುವರೆದುಬಿಟ್ಟಿವೆ.
ನಮ್ಮ ದೇಶದಲ್ಲಿ ಹತ್ತನ್ನೆರಡು ಮಂಗಗಳ ಪ್ರಭೇದಗಳಿವೆ. ಮಲೆನಾಡಿನಲ್ಲಿ ಕಾಣಿಸುವುದು ಮುಖ್ಯವಾಗಿ ಬಿಳಿಮಂಗ ಮತ್ತು ಲಂಗೂರ್. ಬಿಳಿಮಂಗ ಅಥವಾ ಬಾನೆಟ್ ಕೋತಿ ಜನವಸತಿ ಪ್ರದೇಶಗಳ ಸಮೀಪ ಹೆಚ್ಚಿದ್ದರೆ, ದಟ್ಟಕಾಡಿನಲ್ಲಿ ಲಂಗೂರ್ ಗಳಿವೆ. ಈ ಮಂಗಗಳನ್ನು ಹನುಮಂತ ಸ್ವರೂಪಿ ಎಂದು ಗುಡಿಕಟ್ಟಿ ಆರಾಧಿಸುವ ಸಂಸ್ಕೃತಿಯೊಂದು ನಮ್ಮಲ್ಲಿದೆ. ಹಾಗಾಗಿ ಇದರ ಬೇಟೆಗೆ ಯಾರೂ ಹೋಗುವುದಿಲ್ಲ. ಹಿಂದೆಲ್ಲಾ ಊರುಗಳಲ್ಲಿ ವರ್ಷಕ್ಕೊಮ್ಮೆ ಮಂಗನಬ್ಯಾಟೆ ಮಾಡುತ್ತಿದ್ದರಂತೆ. ಆದರೆ ಈಗ ಮಲೆನಾಡಿನಲ್ಲಿ ಈ ಮಂಗಗಳನ್ನು ತಿನ್ನುವವರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಬೇಟೆಯಾಡುವುದನ್ನಂತೂ ನಾನು ಕಂಡಿಲ್ಲ.
ವಾಸ್ತವದಲ್ಲಿ ಈ ಬಾನೆಟ್ ಮಂಗಗಳು ಮಲೆನಾಡಿನವುಗಳಲ್ಲ. ಜನವಸತಿಗಳೊಂದಿಗೆ ವಲಸೆ ಬಂದ ಇವು ಆಧುನಿಕ ಪರಿಸರಕ್ಕೆ ತಕ್ಷಣ ಒಗ್ಗಿಕೊಳ್ಳುವ ಪ್ರಕ್ರಿಯೆಯೇ ಜೀವವೈವಿಧ್ಯದ ಬಹುದೊಡ್ಡ ಅಚ್ಚರಿ. ಮನೆ ಮಾಡು ಹತ್ತಿ ಅಡುಗೆ ಮನೆಗೆ ಬಂದು ಊಟ ಮಾಡುವಷ್ಟು, ನಲ್ಲಿ ತಿರುಗಿಸಿ ನೀರು ಕುಡಿಯುವಷ್ಟು, ಮನುಷ್ಯರು ಕೊಡುವ ಆಹಾರಕ್ಕಾಗಿ ಕೈಚಾಚಿ ನಿಲ್ಲುವಷ್ಟು ಅವು ಇವತ್ತು ಮುಂದುವರೆದಿವೆ. ಬಾನೆಟ್ ಮಕಾಕ್ ಗಳು ಪಶ್ಚಿಮ ಘಟ್ಟದ ಸ್ಥಳೀಯ ಜಾತಿ ಅಲ್ಲವಾದುದರಿಂದ ಅವುಗಳಿಗೆ ಇಲ್ಲಿ ಶತ್ರುಗಳು ತೀರಾ ಕಡಿಮೆ. ಬಯಲು ನಾಡಿನಲ್ಲಿ ಅವುಗಳನ್ನು ತಿನ್ನುವ ತೋಳ ಇಲ್ಲಿ ಇಲ್ಲವೇ ಇಲ್ಲ. ಕುರುಚಲು ಕಾಡಿನಲ್ಲಿ ಅವುಗಳನ್ನು ಹಿಡಿದು ತಿನ್ನುವ ಚಿರತೆಗಳೂ ಮಲೆನಾಡಿನಲ್ಲಿ ವಿರಳ. ಮಂಗನ ಮರಿಗಳನ್ನು ಹಿಡಿದು ತಿನ್ನುವ ದೊಡ್ಡ ರಣಹದ್ದುಗಳು ಇಲ್ಲಿ ಕಾಣಿಸುವುದಿಲ್ಲ. ಎಲ್ಲಿಂದಲೋ ಬಂದು ಮಲೆನಾಡು ಸೇರಿರುವ ವಾನರ ಸೇನೆಯನ್ನು ಭಕ್ಷಿಸುವ ಜೀವಿಗಳಿಲ್ಲದೇ ಅವು ಬೇಕಾಬಿಟ್ಟಿ ಹೆಚ್ಚಾಗಿವೆ. ವಿಪರೀತ ಹೆಚ್ಚಾಗಿರುವ ಮಂಗಗಳು ಕೆಲವು ಜಾತಿಯ ಹಕ್ಕಿಗಳ ಸಂತಾನೋತ್ಪತ್ತಿಗೆ ಮಾರಕವಾಗಿಬಿಟ್ಟಿವೆ. ಇಡೀ ಜೀವವ್ಯವಸ್ಥೆಯ ಅಸಮತೋಲನಕ್ಕೆ ಕಾರಣವಾಗಿವೆ.
ಇತರೆ ಸಸ್ತನಿಗಳಿಗೆ ಹೋಲಿಸಿದರೆ ಬಹು ಚುರುಕಾದ ಮೆದುಳು ಹೊಂದಿರುವ ಮಂಗಗಳ ಸಾಮೂಹಿಕ ಜೀವನ ವಿಸ್ಮಯವೇ ಸರಿ. ಆಹಾರ ಸಂಗ್ರಹಣೆ, ಸಂಗಾತಿಯ ಆಯ್ಕೆ, ವಂಶಾಭಿವೃದ್ಧಿ ಸೇರಿದಂತೆ ಅವುಗಳ ಬದುಕಿನ ಪ್ರತಿ ಘಟ್ಟದಲ್ಲೂ ಪರಸ್ಪರ ಸಹಾಯ ಮಾಡುತ್ತಾ ಜೀವನ ಸಾಗಿಸುತ್ತವೆ. ಚಿಕ್ಕ ಮರಿಗಳಿದ್ದಾಗ ತಾಯಿಯನ್ನೇ ಅವು ಅವಚಿಕೊಳ್ಳಬೇಕೆಂದೇನಿಲ್ಲ. ಅಪಾಯದ ಸೂಚನೆ ಸಿಕ್ಕೊಡನೆ ಸಮೀಪದಲ್ಲಿರುವ ದೊಡ್ಡ ಮಂಗನನ್ನು ಹಿಡಿದುಕೊಂಡು ಓಡಿ ಬಿಡುತ್ತವೆ. ಅಷ್ಟರ ಮಟ್ಟಿಗಿನ ಒಗ್ಗಟ್ಟು ಅವುಗಳಲ್ಲಿದೆ.
ಕಳೆದ ಒಂದೆರಡು ದಶಕಗಳಿಂದ ಮಲೆನಾಡಿಗರು ಹಂತಹಂತವಾಗಿ ಗದ್ದೆಗಳನ್ನೆಲ್ಲಾ ತೋಟ ಮಾಡಿದರು. ಕೊಳವೆಬಾವಿ ತೆಗೆಸಿ ಅಂತರ್ಜಲ ಎತ್ತಿ ತೋಟಗಳಿಗೆ ನೀರುಣಿಸಿದರು. ಬೋಳುಗುಡ್ಡಗಳಲೆಲ್ಲಾ ಅಕೇಶಿಯಾ, ನೀಲಗಿರಿ, ಸಾಗುವಾನಿ ಮೊದಲಾದ ಏಕಜಾತಿ ನೆಡುತೋಪನ್ನು ಅರಣ್ಯ ಇಲಾಖೆ ಎಬ್ಬಿಸಿತು. ಈ ಮಧ್ಯೆ ಕಾಡು ಸವರಿ ರಬ್ಬರ್ ತೋಟ ಮಾಡಲಾಯಿತು, ಗುಡ್ಡಗುಡ್ಡಗಳನ್ನೇ ಕಾಫಿ, ಟೀ, ಸಿಲ್ವರ್ ಗಳಾಗಿ ಮಾರ್ಪಡಿಸಲಾಯಿತು. ಅರಣ್ಯವನ್ನು ಜನಸಮುದಾಯ ನಿರ್ವಹಿಸಿದ ರೀತಿಗೆ, ಪರಿಸರವನ್ನು ಬೇಕಾಬಿಟ್ಟಿ ದುರ್ಬಳಕೆ ಮಾಡಿಕೊಂಡ ವೇಗಕ್ಕೆ ಹನುಮಂತರಾಯರೆಲ್ಲಾ ತೋಟಗಳಲ್ಲೇ ಠಿಕಾಣಿ ಹೂಡುವ ಪರಿಸ್ಥಿತಿ ಬಂದಿತು. ಕಾಡಿಗಿಂತ ಸುಲಭವಾಗಿ ಕೃಷಿ ಜಾಗದಲ್ಲೇ ಪ್ರೋಟೀನ್ ಯುಕ್ತ ಸಮೃದ್ಧ ಆಹಾರ ದೊರೆಯಲು ಶುರುವಾಗಿದ್ದೇ ಕಪಿಸೈನ್ಯ ಕಾಡು ಮರೆಯಿತು. ನಿದ್ದೆಗೆ ಮಾತ್ರ ಕಾಡು ಮರಗಳು ಎಂಬ ತೀರ್ಮಾನಕ್ಕೆ ಬಂದುಬಿಟ್ಟವು. ಜೊತೆ ಜೊತೆಗೆ ಪ್ರವಾಸಿಗರು ತಮ್ಮ ಅಜ್ಞಾನದಿಂದ ಮಾನವೀಯತೆಯ ಲೇಪ ಹಚ್ಚಿಕೊಂಡು ಹಣ್ಣು, ಆಹಾರ ಕೊಟ್ಟು ಅವುಗಳ ಆಹಾರ ಹುಡುಕಿ ತಿನ್ನುವ ಕೌಶಲ್ಯವನ್ನು ಇಲ್ಲವಾಗಿಸಿದರು. ಆಹಾರಕ್ಕಾಗಿ ಮನುಷ್ಯನನ್ನು ಅವಲಂಬಿಸುವ ಮಟ್ಟಕ್ಕೆ ಇವತ್ತು ಅವು ಬಂದು ನಿಂತಿವೆ. ಕಾಡಿಗಿಂತ ನಾಡೇ ಅವಕ್ಕೆ ಪ್ರಶಸ್ತ ಅನ್ನಿಸಿಬಿಟ್ಟಿದೆ.
ಮಲೆನಾಡಿನಲ್ಲಿ ಮಂಗಗಳ ನಿಯಂತ್ರಣಕ್ಕೆ ಈಗಿರುವ ಕೆಲವು ದಾರಿಗಳೆಂದರೆ, ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ಅಳವಡಿಸುವುದು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಒಟ್ಟಾಗಿ ಅಲ್ಲಲ್ಲಿ ರೈತರು ಮಂಗಗಳನ್ನು ಓಡಿಸಲು ಬಳಸುತ್ತಿರುವ ತಂತ್ರಗಳಿಗೆಲ್ಲಾ ಅಗತ್ಯ ಸೌಲಭ್ಯ ನೀಡಿ ಉತ್ತೇಜಿಸುವುದು. ಸರ್ಕಾರಿ ಸಂಘಸಂಸ್ಥೆಗಳು, ಗ್ರಾಮ ಅರಣ್ಯ ಸಮಿತಿಗಳು ಮತ್ತು ರೈತ ಸಂಘಟನೆಗಳ ಸಹಭಾಗಿತ್ವದಲ್ಲಿ ಹೊಸದಾರಿ ಹುಡುಕಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವಕಾಶವಿದ್ದಲ್ಲಿ ಊರವರನ್ನೆಲ್ಲಾ ಒಗ್ಗೂಡಿಸಿ ವಾನರ ಸೇನೆಗಳನ್ನು ಆದಷ್ಟು ದೂರದ ಕಾಡುಗಳಿಗೆ ಅಟ್ಟುವ ಪ್ರಯತ್ನಗಳನ್ನು ಮಾಡಬಹುದು. ಮಂಗಗಳು ಮಾಡಿದ ಹಾನಿಗೆ ಪರಿಹಾರವೆಂದು ಜಮೀನಿನ ಆಧಾರದ ಮೇಲೆ ರೈತರಿಗೆ ವಾರ್ಷಿಕ ಆರ್ಥಿಕ ಪರಿಹಾರವನ್ನು ಸರ್ಕಾರ ನೀಡಬೇಕು. ನಿರಂತರ ಅರಣ್ಯ ಒತ್ತುವರಿಯನ್ನು ತಡೆಯಬೇಕು. MPMಗೆ ಕೊಟ್ಟಿರುವ ಭೂಮಿಯ ಒಪ್ಪಂದ ಮುಗಿದಿರುವುದರಿಂದ ಆ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಅಲ್ಲಿ ಅಕೇಶಿಯಾ ಬೆಳೆದಿದ್ದ ಜಾಗದಲ್ಲಿ ಸ್ಥಳೀಯ ಜಾತಿಯ ಹಲಸು, ನೇರಳೆ, ಮಾವು, ಅತ್ತಿ, ಆಲ, ಕಲ್ಲು ಸಂಪಿಗೆ ಮೊದಲಾದ ಕಾಡು ಹಣ್ಣುಗಳ ಗಿಡ ಬೆಳಸಬೇಕು. ಸಹಜ ಕಾಡು ಬೆಳೆಯಲು ಅನುವು ಮಾಡಿಕೊಡಬೇಕು. ತೋಟ-ಗದ್ದೆಗಳಿಗೆ ತಾಕಿಕೊಂಡಿರುವ ಕಾಡನ್ನು ಸಂರಕ್ಷಿಸಬೇಕು. ಕಠಿಣ ಕಾನೂನು ತಂದು ಜೀವನಾಧಾರಕ್ಕೆ ಹೊರತುಪಡಿಸಿದ ಭೂದಾಹಿಗಳ ಅರಣ್ಯ ಒತ್ತುವರಿ ತೆರವುಗೊಳಿಸಿ ಅಲ್ಲಿ ಹೊಸ ಕಾಡು ಬೆಳೆಯಲು ಅನುವು ಮಾಡಿಕೊಡಬೇಕು. ಒತ್ತುವರಿಯಾಗಿರುವ ಕೆರೆಗಳ ಪುನರುಜ್ಜೀವನ ಕೂಡಾ ಮುಖ್ಯ. ಕೃಷಿಗೆ ಕೇವಲ ಮಂಗವೊಂದೇ ಮಾತ್ರವಲ್ಲ; ನವಿಲು, ಕಾಡುಕೋಣ, ಕಾಡುಹಂದಿ ಮೊದಲಾದವುಗಳ ಕಾಟವೂ ಇರುವುದರಿಂದ ಅರಣ್ಯ ಪುನರುಜ್ಜೀವನದ ಹೊರತಾಗಿ ಮಂಗ ಸೇರಿದಂತೆ ಕಾಡು ಪ್ರಾಣಿಗಳ ಕಾಟಕ್ಕೆ ಬೇರೆ ತಕ್ಷಣದ ದಾರಿಗಳು ಇಲ್ಲ. ಪಶ್ಚಿಮ ಘಟ್ಟದ ತಪ್ಪಲಿನ ರೈತರ ಒಳಗೊಳ್ಳುವಿಕೆ ಮತ್ತು ಪರಿಸರ ಸ್ನೇಹಿಯಾದ ಕ್ರಮಗಳ ಹೊರತಾಗಿ ಕಪಿಕಾಟಕ್ಕೆ ನೈಜ ಉತ್ತರ ಸಿಗಲಾರದು.
ಮಂಗಗಳ ನಿಯಂತ್ರಣದ ಬಗ್ಗೆ ಮಾತನಾಡಿದಾಗ ಅಪಸ್ವರ ಎತ್ತುವ ಪ್ರಾಣಿದಯಾ ಸಂಘಗಳಾಗಲಿ, ಕೆಲವು ಪರಿಸರವಾದಿಗಳಾಗಲಿ ಕಪಿಕಾಟದಿಂದ ಮಲೆನಾಡಿನ ಕೃಷಿಬದುಕು ರೋಸಿ ಹೋಗಿದೆ ಅಂತ ಅರ್ಥಮಾಡಿಕೊಳ್ಳುವುದೇ ಇಲ್ಲ. ಮಾನವನ ಅತೀ ಹಸ್ತಕ್ಷೇಪಗಳಿಂದ ಅವುಗಳ ಸಂತತಿಯಲ್ಲಿ ಆಗಿರುವ ವೈಪರೀತ್ಯವನ್ನು ಕೆಲವು ಕ್ರಮಗಳಿಂದ ನಾವೇ ಸ್ವಲ್ಪ ಹತೋಟಿಗೆ ತರಬೇಕು. ಬದುಕಲು ಇತರೇ ಯಾವ ಮೂಲಗಳಿಂದಲೂ ಆದಾಯವಿಲ್ಲದ ಕೇವಲ ಭೂಮಿಯೊಂದನ್ನೇ ನಂಬಿಕೊಂಡಿರುವ ಅದೆಷ್ಟೋ ಮಲೆನಾಡಿನ ಸಣ್ಣ ರೈತರ ಬದುಕು ಅವರ ಪರಿಸರವಾದ, ಪ್ರಾಣಿಪ್ರೀತಿಯಲ್ಲಿ ಕರಗಿ ಹೋಗದಂತೆ ಎಚ್ಚರ ವಹಿಸಬೇಕು. ಸ್ಥಳೀಯ ಜನಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸದೇ ಅವರ ವಿಶ್ವಾಸ ಸಂಪಾದಿಸದೇ ಯಾವುದೇ ಕಾಯ್ದೆ, ಕಾನೂನು, ವರದಿಗಳಿಂದಲೂ ಪರಿಸರ ಸಂರಕ್ಷಣೆ ಸಾಧ್ಯವಾಗುವುದಿಲ್ಲ ಎನ್ನುವುದು ನೆಲದ ಸತ್ಯ.
ನಾಗರಾಜ ಕೂವೆ
ಪರಿಸರ ಬರಹಗಾರರು.
ಇದನ್ನೂ ಓದಿ- ಅತಿಮಾನವ ಯುಗ ಮತ್ತು ಹವಾಗುಣ ಬದಲಾವಣೆ