Saturday, July 27, 2024

ರೈತರ ಗ್ರಾಮೀಣ ಭಾರತ್ ಬಂದ್ ಯಶಸ್ವಿ : ರೈತರ ಮೇಲೆ ಅಶ್ರುವಾಯು ದಾಳಿ, ಹೃದಯಾಘಾತದಿಂದ ರೈತ ಸಾವು

Most read

‘ದಿಲ್ಲಿ ಚಲೋ’ ಜತೆ ಜತೆಗೆ ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಗ್ರಾಮೀಣ ಭಾರತ ಬಂದ್‌ ಭಾಗಶಃ ಯಶಸ್ವಿಯಾಯಿತು. ಭಾರತ ಬಂದ್‌ ಪರಿಣಾಮ ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ದೇಶಾದ್ಯಂತ ರೈತರು ಸಾಂಕೇತಿಕವಾಗಿ ಶಾಂತಿಯುತ ಪ್ರತಿಭಟನೆ ನಡೆಸಿದರು.

ಬಂದ್‌ನಿಂದ ಬಹುತೇಕ ವಾಹನಗಳು ಪಂಜಾಬ್‌-ಹರಿಯಾಣದ ಶಂಭು ಗಡಿ ಭಾಗದಲ್ಲೇ ನಿಂತವು. ಬಹುತೇಕ ಕಡೆಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಬಂದ್‌ ಆಗಿದ್ದವು. ದೇಶದ ವಿವಿಧ ಭಾಗಗಳಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ರಸ್ತೆ ತಡೆ ನಡೆಸಿದ ರೈತರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.

ಪಂಜಾಬ್‌ನ ಪಠಾಣ್‌ಕೋಟ್‌, ತರಣ್‌, ಭಟಿಂಡಾ, ಜಲಂಧರ್‌ನಲ್ಲಿ ರೈತರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಹರಿಯಾಣದ ಹಿಸ್ಸಾರ್‌, ಕುರುಕ್ಷೇತ್ರದಲ್ಲಿ ಬಂದ್‌ ಪರಿಣಾಮ ವಾಹನ ಸಂಚಾರ ವಿರಳವಾಗಿತ್ತು. ಮಳಿಗೆಗಳನ್ನು ಬಂದ್‌ ಮಾಡಿದ ವರ್ತಕರು, ವಾಹನ ಚಾಲಕರು ರೈತರ ಹೋರಾಟ ಬೆಂಬಲಿಸಿದರು.

ಪ್ರತಿಭಟನೆ ಪಾಲ್ಗೊಂಡು ರೈತ ಮುಖಂಡ ರಾಕೇಶ್‌ ಟಿಕಾಯತ್‌ ಮಾತನಾಡಿ, ”ರೈತರ ಸಾಲ ಮನ್ನಾ ಮಾಡುವ ಜತೆಗೆ ಸ್ವಾಮಿನಾಥನ್‌ ವರದಿಯನ್ನುಯ ಸರಕಾರ ಯಥವತ್ತಾಗಿ ಜಾರಿ ಮಾಡಬೇಕು,” ಎಂದು ಆಗ್ರಹಿಸಿದರು. ಭಾಗ್‌ಪತ್‌ನಲ್ಲಿ ರಸ್ತೆ ತಡೆ ನಡೆಸಿದ ರೈತರನ್ನು ಪೊಲೀಸರು ಬಂಧಿಸಿದರು.

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತ್ರಿ ಸೇರಿದಂತೆ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ದಿಲ್ಲಿ ಚಲೋ ಪ್ರತಿಭಟನೆ ಶುಕ್ರವಾರ 4 ದಿನ ಪೂರೈಸಿದೆ. ಪಂಜಾಬ್‌-ಹರಿಯಾಣದ ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ದಾಟಿ ನುಗ್ಗಲು ಯತ್ನಿಸಿದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ದಿಲ್ಲಿ ಚಲೋ ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್‌ ರೈತರೊಬ್ಬರು ಶುಕ್ರವಾರ ಹೃದಯಾಘತದಿಂದ ನಿಧನರಾಗಿರುವ ಘಟನೆ ವರದಿಯಾಗಿದೆ.

More articles

Latest article