ಬೆಂಗಳೂರು: ನಕಲಿ ಕಂಪನಿ ಮೂಲಕ ಇ ಪೆಹಚಾನ್ ಕಾರ್ಡ್ ಸೃಷ್ಟಿಸಿ ಇಎಸ್ ಐ ಆಸ್ಪತ್ರೆಯ ಚಿಕಿತ್ಸಾ ಕಾರ್ಡ್ ಮಾಡಿಕೊಡುತ್ತಿದ್ದ ಆರು ಮಂದಿ ವಿರುದ್ಧ ಸಿಸಿಬಿ ಪೊಲೀಸರು ದೂರು ದಾಖಲಿಸಿದ್ದಾರೆ. ಶ್ರೀಧರ್, ರಮೇಶ್, ಶಿವಗಂಗಾ, ಶ್ವೇತಾ, ಶಶಿಕಲಾ ಹಾಗೂ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಕೆಲವು ಆರೋಪಿಗಳು ಬೇರೆ ಬೇರೆ ಹೆಸರಿನಲ್ಲಿ ನಕಲಿ ಕಂಪನಿ ಸೃಷ್ಟಿಸಿದ್ದರು. ಅದರಲ್ಲಿ ಕೆಲಸ ಮಾಡದೇ ಇರುವವರಿಗೂ ನಕಲಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಂತೆ ಇ ಪೆಹಚಾನ್ ಕಾರ್ಡ್ ಮಾಡಿ ಕೊಡುತ್ತಿದ್ದರು. ಆ ಕಾರ್ಡ್ ಸಹಾಯದಿಂದ ಆರೋಪಿಗಳು ಇಎಸ್ಐ ಆಸ್ಪತ್ರೆ ಚಿಕಿತ್ಸಾ ಕಾರ್ಡ್ಗಳನ್ನು ಮಾಡಿಕೊಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಶ್ರೀಧರ್, ರಮೇಶ್, ಶಿವಗಂಗಾ, ಶ್ವೇತಾ, ಲೆಕ್ಕ ಪರಿಶೋಧಕಿ ಶಶಿಕಲಾ ಸೇರಿದಂತೆ ಇತರ ಆರೋಪಿಗಳು ಅಕ್ರಮವಾಗಿ ಹಣ ಸಂಪಾದನೆ ಮಾಡಲು ಈ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಅಸ್ತಿತ್ವದಲ್ಲೇ ಇಲ್ಲದಿದ್ದ ದೇವು ಮಾರ್ಕೆಟಿಂಗ್, ಭಾಸ್ಕರ್ ಎಂಟರ್ಪ್ರೈಸಸ್, ವಿಪಿಶ್ರೀ ಎಂಟರ್ಪ್ರೈಸಸ್, ಗೌರಿ ಮಾರ್ಕೆಟಿಂಗ್ ಹೆಸರಿನಲ್ಲಿ ನಕಲಿ ಕಂಪನಿ ಹುಟ್ಟು ಹಾಕಿದ್ದರು. ಆ ಕಂಪನಿಗಳಲ್ಲಿ ಸಾರ್ವಜನಿಕರು ಹಾಗೂ ರೋಗಿಗಳು ಕೆಲಸ ಮಾಡುತ್ತಿರುವಂತೆ ದಾಖಲೆ ಸೃಷ್ಟಿಸಿ ವಂಚನೆ ಮಾಡುತ್ತಿದ್ದರು ಎನ್ನವುದು ತನಿಖೆಯಿಂದ ತಿಳಿದು ಬಂದಿದೆ.
ಇಎಸ್ ಐ ಮಾನ್ಯತೆ ಪಡೆದಿರುವ ಆಸ್ಪತ್ರೆಗಳಲ್ಲಿ ಅಧಿಕೃತ ನೌಕರರಿಗೆ ಸಿಗಬೇಕಾದ ಸವಲತ್ತುಗಳನ್ನು ತಪ್ಪಿಸಿ ನಕಲಿ ಇಎಸ್ ಐ ಕಾರ್ಡ್ ಪಡೆದವರಿಗೆ ಚಿಕಿತ್ಸೆ ದೊರಕುವಂತೆ ಮಾಡುತ್ತಿದ್ದರು. ಅರ್ಹ ಕಾರ್ಮಿಕರಿಗೆ ಆಸ್ಪತ್ರೆಯ ಬೆಡ್, ಚಿಕಿತ್ಸೆ ಮತ್ತು ಔಷಧೋಪಚಾರ ಲಭ್ಯವಾಗದಂತೆ ಈ ತಂಡ ಮೋಸ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.