ಬೆಂಗಳೂರು: ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ಜನಪ್ರಿಯ ತೆಲುಗು ಚಿತ್ರ ನಟ ಪವನ್ ಕಲ್ಯಾಣ್, ಹೆಂಡತಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದವನಿಗೆ ಬುದ್ಧಿ ಹೇಳಿ 40 ಕೋಟಿ ರೂ. ದಾನ ಮಾಡಿದ್ದಾರೆ ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕನ್ನಡದ ಸುದ್ದಿ ವಾಹಿನಿಗಳಲ್ಲಿ ಒಂದಾದ ಬಿಟಿವಿ ಇದೇ ಚಿತ್ರವನ್ನು ತನ್ನ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡು, ‘ಇನ್ನೊಂದು ರಾಜ್ಯದಲ್ಲಿ’ (in other state…! ) ಎಂಬ ಶೀರ್ಷಿಕೆ ನೀಡಿದೆ.
ಗೆಳತಿ ಪವಿತ್ರ ಗೌಡಗೆ ಕೆಟ್ಟದಾಗಿ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿ ಎಂಬ ಯುವಕನನ್ನು ಚಿತ್ರನಟ ದರ್ಶನ್ ಮತ್ತು ಸಹಚರರು ಕೊಲೆಗೈದ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಕುರಿತ ಪೋಸ್ಟರ್ ಎಲ್ಲೆಡೆ ಆಕರ್ಷಣೆಗೆ ಒಳಗಾಗಿತ್ತು.
ಈ ಪೋಸ್ಟರ್ ನಲ್ಲಿ ಹೇಳಿರುವ ಅಂಶ ನಿಜವೇ ಎಂದು ಕನ್ನಡ ಪ್ಲಾನೆಟ್ Fact Check ಮಾಡಿದ್ದು, ಈ ಮಾಹಿತಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂದು ಕಂಡುಕೊಂಡಿದೆ.
ಪೋಸ್ಟರ್ ನಲ್ಲಿ ಪವನ್ ಕಲ್ಯಾಣ್ ಅವರೊಂದಿಗೆ ಕಾಣಿಸಿಕೊಂಡಿರುವ ವ್ಯಕ್ತಿ ತೆಲುಗಿನ ಸಂಗೀತ ನಿರ್ದೇಶಕ ಅನೂಪ್ ರುಬೇನ್ಸ್. ಟೆಂಪರ್, ಮನಮ್, ಸೀತಾರಾಮ ಕಲ್ಯಾಣ, ಸುಕುಮಾರುಡು ಸೇರಿದಂತೆ ಹಲವಾರು ಜನಪ್ರಿಯ ತೆಲುಗು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದವರು.
ಮಿರಮಿರಮೀಸಮ್ ಎಂಬ ಹೊಸ ಸಿನಿಮಾದ ಹಾಡೊಂದರ ಬಿಡುಗಡೆ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರು ಶುಭಾಶಯ ಹೇಳಿರುವುದಾಗಿ ಅನೂಪ್ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾರ್ಚ್ 17ರಂದು ಪೋಸ್ಟ್ ಮಾಡಿದ್ದರು. ಇದೇ ಚಿತ್ರವನ್ನು ಹರಿಬಿಟ್ಟು ಸುಳ್ಳು ಸುದ್ದಿ ಹರಿಬಿಡಲಾಗಿದೆ.
ಹೀಗಾಗಿ ತಮ್ಮ ಪತ್ನಿಗೆ ಕೆಟ್ಟ ಸಂದೇಶ ಕಳುಹಿಸಿದ ವ್ಯಕ್ತಿಗೆ ಪವನ್ ಕಲ್ಯಾಣ್ ಬುದ್ಧಿ ಹೇಳಿ 40 ಕೋಟಿ ರುಪಾಯಿ ಕೊಟ್ಟರೆಂಬುದು ಸುಳ್ಳು ಸುದ್ದಿಯಾಗಿರುತ್ತದೆ.