ಗುಂಟೂರು ಮೆಣಸು: ಕರ್ನಾಟಕಕ್ಕೂ ನೆರವು ವಿಸ್ತರಿಸುವಂತೆ ಮೋದಿಗೆ ಸಿಎಂ ಪತ್ರ

Most read

ಬೆಂಗಳೂರು: ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್‌) ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕರ್ನಾಟಕದ ಕೆಂಪು ಮೆಣಸಿನಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದಲ್ಲಿ, ವಿಶೇಷವಾಗಿ ಕಲ್ಯಾಣ ಕರ್ನಾಟದ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಬೆಳೆದಿರುವ ಲಕ್ಷಾಂತರ ರೈತರು ದರ ಕುಸಿತದಿಂದಾಗಿ ತೀವ್ರ ಕಂಗೆಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ರೈತರು ಬೆಳೆದ ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್‌) ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಉತ್ಪಾದನೆಯ ಶೇ 25ವರೆಗಿನ ವ್ಯಾಪ್ತಿಯೊಂದಿಗೆ ಕ್ವಿಂಟಲ್‌ಗೆ ₹11,781 ಕನಿಷ್ಠ ಮಧ್ಯಸ್ಥಿಕೆ ಬೆಲೆ (ಎಂಐಪಿ)ಯನ್ನು ನಿಗದಿಪಡಿಸಿದೆ. ಅದನ್ನು ಕರ್ನಾಟಕದ ರೈತರಿಗೂ ವಿಸ್ತರಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದಲ್ಲಿ ಗುಂಟೂರು ಮೆಣಸಿನಕಾಯಿ ಉತ್ಪದನಾ ವೆಚ್ಚವನ್ನು ಕ್ವಿಂಟಲ್‌ಗೆ ₹12,675 ಕೃಷಿ ಬೆಲೆ ಆಯೋಗ ನಿಗದಿಪಡಿಸಿದೆ. ಆದರೆ, ರೈತರು ಅದನ್ನು ಈಗ ಕ್ವಿಂಟಲ್‌ಗೆ ₹8,300ರಂತೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಇದರಿಂದ ಅವರು ಹಣಕಾಸು ನಷ್ಟ ಎದುರಿಸುತ್ತಿದ್ದು, ಸಂಕಷ್ಟಕ್ಕಿಡಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ದೇಶದ ಅತ್ಯಂತ ಹಿಂದುಳಿದ ಮತ್ತು ಬರ ಪೀಡಿತ ಪ್ರದೇಶಗಳಲ್ಲಿ ಒಂದಾದ ಕಲ್ಯಾಣ ಕರ್ನಾಟಕ ಪ್ರದೇಶವು ಕೆಂಪು ಮೆಣಸಿನಕಾಯಿ ಕೃಷಿಯನ್ನು ಅವಲಂಬಿಸಿರುವ ಸಾವಿರಾರು ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೆಲೆಯಾಗಿದೆ. ಅವರ ಪರಿಸ್ಥಿತಿಯನ್ನು ನಿರಂತರವಾಗಿ ನಿರ್ಲಕ್ಷಿಸಿದರೆ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತದೆ. ಅಲ್ಲದೆ, ಅನೇಕ ರೈತರನ್ನು ಸಾಲದ ದವಡೆಗೆ ತಳ್ಳುತ್ತದೆ. ಆದ್ದರಿಂದ, ಕೇಂದ್ರ ಸರ್ಕಾರವು ಆಂಧ್ರಪ್ರದೇಶದಂತೆ ಕರ್ನಾಟಕಕ್ಕೂ ಬೆಲೆ ಕೊರತೆ ಪಾವತಿ ಯೋಜನೆಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.

More articles

Latest article