ಹಾಸನದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನು ಉಚ್ಚಾಟಿಸಿ ಮಾಜಿ ಪ್ರಧಾನಿ ದೇವೇಗೌಡರು ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ಪಕ್ಷದಲ್ಲಿಯೇ ಪ್ರಜ್ವಲ್ ರೇವಣ್ಣ ಅವರ ಉಚ್ಚಾಟನೆಗೆ ಭಾರಿ ಒತ್ತಡ ಕೇಳಿ ಬಂದ ಬೆನ್ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಅವರು ’19 ಜನ ಶಾಸಕರ ಭವಿಷ್ಯ ಬೇಕೋ ತಮ್ಮ ಕುಟುಂಬದ ರೇವಣ್ಣರವರು.. ಪ್ರಜ್ವಲ್ ಅವರು ಮುಖ್ಯವೋ ತೀರ್ಮಾನಿಸಬೇಕಿದೆ’ ಎಂದು ಒತ್ತಡ ಹಾಕಿದ್ದಾರೆ.
“ಇತ್ತಿಚಿನ ದಿನಗಳಲ್ಲಿ ಹಾಸನದ ಲೀಲೆಗಳು ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ರಾಜ್ಯದಲ್ಲೆಡೆ ಮುಜುಗರಕ್ಕೆ ಒಳಗಾಗಿರುವುದಲ್ಲದೆ ಪಕ್ಷದ ಹೆಸರು ಹೇಳಲು ಸಹ ಹೇಸಿಗೆ ಅನಿಸುವಂತ ಸ್ಥಿತಿಗೆ ತಲುಪಿದೆ. ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ದಯನೀಯ ಪರಿಸ್ಥಿತಿ ಮೊದಲ ಬಾರಿಗೆ ಶಾಸಕನಾಗಿರುವ ನನಗೆ ಈ ಕಷ್ಟಕರ ಸನ್ನಿವೇಶಗಳು ಎದುರಾಗುತ್ತಿದ್ದರೆ, ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿಯೇನು ಯೋಚಿಸಿ..??” ಎಂದು ಪ್ರಶ್ನಿಸಿದ್ದಾರೆ.
“ಮಾನ್ಯ ವರಿಷ್ಠರು ರಾಷ್ಟ್ರಾಧ್ಯಕ್ಷರು ಎಚ್.ಡಿ.ದೇವೇಗೌಡ ಅಪ್ಪಾಜಿ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಣ್ಣ ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯವಿದಾಗಿದೆ. ವಿನಂತಿಸಿಕೊಳ್ಳುವುದೇನೆಂದರೆ 19 ಜನ ಶಾಸಕರ ಭವಿಷ್ಯ ಬೇಕೋ ತಮ್ಮ ಕುಟುಂಬದ ರೇವಣ್ಣರವರು ಪ್ರಜ್ವಲ್ ರವರು ಮುಖ್ಯವೋ ತೀರ್ಮಾನಿಸಬೇಕಿದೆ” ಎಂದು ತಿಳಿಸಿದ್ದಾರೆ.
ಜೊತೆಗೆ, “24 ಗಂಟೆಗಳಲ್ಲಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಪಕ್ಷದ ಸಿದ್ಧಾಂತಗಳನ್ನು ಉಳಿಸಿ ಕಾರ್ಯಕರ್ತರನ್ನು ನಮ್ಮನ್ನು ಮುಜುಗರದಿಂದ ಪಾರು ಮಾಡಲು ಕೋರುತ್ತೇನೆ” ಎಂದು 24 ಗಂಟೆಗಳ ಸಮಯಾವಕಾಶ ನೀಡಿದ್ದಾರೆ.