ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎಲ್ಲ ಆರೋಪಿಗಳೂ ಈಗ ಜೈಲು ಸೇರಿದ್ದಾರೆ. ಚಿತ್ರನಟ ದರ್ಶನ್, ಸ್ನೇಹಿತೆ ಪವಿತ್ರ ಗೌಡ ಸೇರಿದಂತೆ ಎಲ್ಲ ಆರೋಪಿಗಳ ಪರವಾಗಿ ಜಾಮೀನು ಅರ್ಜಿಗಳು ದಾಖಲಾಗುವುದು ನಿಶ್ಚಿತ. ಆದರೆ ಜಾಮೀನು ಅರ್ಜಿ ಸಲ್ಲಿಸುವ ಅಗತ್ಯವೇ ಇಲ್ಲದೇ ದರ್ಶನ್ ಬಿಡುಗಡೆಯಾಗಲಿದ್ದಾರೆಯೇ?
ಈ ಪ್ರಶ್ನೆ ಈಗ ಕಾನೂನು ಪಂಡಿತರ ವಲಯದಲ್ಲಿ ಚರ್ಚೆಗೆ ಒಳಪಟ್ಟಿದೆ. ಇದಕ್ಕೆ ಕಾರಣವಾಗಿರುವುದು ಪ್ರಕರಣದ ಎ-8 ಆರೋಪಿ ರವಿ ಪರವಾಗಿ ಹೈಕೋರ್ಟ್ ನಲ್ಲಿ ಇಂದು ದಾಖಲಾಗಿರುವ ರಿಟ್ ಅರ್ಜಿ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ರವಿ ಒಬ್ಬ ಕಾರು ಚಾಲಕ. ಮೂಲತಃ ಚಿತ್ರದುರ್ಗ ತಾಲ್ಲೂಕಿನ ಕುರುಬರಹಟ್ಟಿ ಗ್ರಾಮದವನು. ದರ್ಶನ್ ಅಭಿಮಾನಿ ಸಂಘದ ಚಿತ್ರದುರ್ಗ ಘಟಕದ ಅಧ್ಯಕ್ಷ ತನ್ನ ಸ್ನೇಹಿತರೊಬ್ಬರ ಮೂಲಕ ಕಾರೊಂದನ್ನು ಬಾಡಿಗೆಗೆ ಪಡೆದಿದ್ದ. ಈ ಕಾರಿನ ಚಾಲಕನಾಗಿ ಬಂದವನೇ ರವಿ. ರೇಣುಕಾಸ್ವಾಮಿಯವನ್ನು ಅಪಹರಿಸಿದ ದರ್ಶನ್ ತಂಡ ಬಂದಿದ್ದ ಕಾರು ಡ್ರೈವ್ ಮಾಡಿಕೊಂಡು ಬಂದಿದ್ದ ರವಿಗೆ ಯಾವ ವಿಷಯವೂ ಗೊತ್ತಿರಲಿಲ್ಲ.
ಕಾರು ಪಟ್ಟಣಗೆರೆಯ ಶೆಡ್ ತಲುಪಿದ ನಂತರ ರವಿಯನ್ನು ಹೊರಗೇ ಇರಲು ಹೇಳಲಾಗಿತ್ತು. ರೇಣುಕಾಸ್ವಾಮಿಯ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿದ ಮೇಲೆ ಆತ ಸತ್ತೇ ಹೋಗಿದ್ದ. ಈ ಸಂದರ್ಭದಲ್ಲಿ ಹೊರಗೆ ಬಂದ ದರ್ಶನ್ ತಂಡ ರವಿಯನ್ನು ಕರೆದು, ಆಗಿರುವ ಕೊಲೆಯ ಬಗ್ಗೆ ಹೇಳಿ, ಕೊಲೆ ಮಾಡಿರುವುದಾಗಿ ಹೇಳಿ ಶರಣಾದರೆ ಹಣ ನೀಡುವ ಆಮಿಷ ಒಡ್ಡಲಾಗಿತ್ತು. ರವಿ ಇದಕ್ಕೆ ಒಪ್ಪದೇ ಬಾಡಿಗೆ ಹಣ ಪಡೆದು ವಾಪಾಸಾಗಿದ್ದ. ಕೊಲೆ ಪ್ರಕರಣ ಬಯಲಾದ ನಂತರ ಭೀತನಾದ ರವಿ ತಾನೇ ಬಂದು ಚಿತ್ರದುರ್ಗ ಡಿವೈಎಸ್ ಪಿ ಕಚೇರಿಯಲ್ಲಿ ಶರಣಾಗಿದ್ದ. ನಡೆದ ಘಟನೆಯನ್ನು ವಿವರಿಸಿದ್ದ.
ಇದೇ ರವಿ ಪರವಾಗಿ ಈಗ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಪ್ರಕರಣದ ಆರೋಪಿಗಳ ರಿಮ್ಯಾಂಡ್ ಪಡೆಯುವಾಗ ರಿಮ್ಯಾಂಡ್ ಅರ್ಜಿಯನ್ನು ಆರೋಪಿಗಳಿಗೆ ಅಥವಾ ಆರೋಪಿಗಳ ಪರ ವಕೀಲರಿಗೆ ಕೊಡಬೇಕಿರುವುದು ನಿಯಮ. ಆದರೆ ಎರಡು ಬಾರಿ ರಿಮ್ಯಾಂಡ್ (ಪೊಲೀಸ್ ಕಸ್ಟಡಿ) ಪಡೆದಾಗಲೂ ರಿಮ್ಯಾಂಡ್ ಅರ್ಜಿಯನ್ನು ಆರೋಪಿಗಳಿಗಾಗಲೀ, ವಕೀಲರಿಗಾಗಲೀ ನೀಡಿರಲಿಲ್ಲ ಎಂಬುದು ಆರೋಪಿ ವಕೀಲರ ತಕರಾರು. ಇದೇ ತಾಂತ್ರಿಕ ಲೋಪವನ್ನು ಇಟ್ಟುಕೊಂಡು ರಿಮ್ಯಾಂಡ್ ವಜಾಗೊಳಿಸುವಂತೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಇಂಥದ್ದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪೊಂದನ್ನು (ಸೈಟೇಷನ್) ಉಲ್ಲೇಖಿಸಲಾಗಿದೆ.
ಒಂದು ವೇಳೆ ಹೈಕೋರ್ಟ್ ಈ ಅರ್ಜಿಯನ್ನು ಪುರಸ್ಕರಿಸಿದರೆ ಎಂಟನೇ ಆರೋಪಿ ರವಿ ಮಾತ್ರವಲ್ಲದೆ ಉಳಿದೆಲ್ಲ ಆರೋಪಿಗಳ ಬಂಧನ ಅಕ್ರಮವಾಗುವುದರಿಂದ ಅವರ ಬಂಧನವೇ ಅನೂರ್ಜಿತಗೊಂಡು ಬಿಡುಗಡೆಯಾಗಲಿದ್ದಾರೆ ಎಂಬುದು ದರ್ಶನ್ ಪರ ವಕೀಲರ ವಾದ. ಒಂದು ವೇಳೆ ಪೊಲೀಸ್ ರಿಮ್ಯಾಂಡ್ ಅಕ್ರಮವಾದಲ್ಲಿ ರಿಮ್ಯಾಂಡ್ ಸಮಯದಲ್ಲಿ ನಡೆಸಿದ ಪೊಲೀಸ್ ತನಿಖೆಯೂ ಅನೂರ್ಜಿತವಾಗಿಬಿಡುತ್ತದೆ. ಹೈಕೋರ್ಟ್ ಈ ವಿಷಯದಲ್ಲಿ ಯಾವ ತೀರ್ಪು ನೀಡುತ್ತದೆ ಎಂದು ಕಾದುನೋಡಬೇಕಾಗುತ್ತದೆ.