ಬೆಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಆದೇಶಿಸಲಾಗಿದ್ದ ಗಡಿಪಾರು ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದ ತಿಮರೋಡಿ ಅವರು ನಿಟ್ಟುಸಿರು ಬಿಡುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಮಾಡಲಾಗಿದ್ದ ಗಡಿಪಾರು ಆದೇಶ ಪ್ರಶ್ನಿಸಿ ತಿಮರೋಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಗಡಿಪಾರು ಆದೇಶವನ್ನು ರದ್ದು ಮಾಡಿದೆ. ಜತೆಗೆ ಹೊಸದಾಗಿ ವಿಚಾರಣೆ ನಡೆಸಿ 15 ದಿನಗಳಲ್ಲಿ ಆದೇಶ ನೀಡಲು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಉಪ ವಿಭಾಗಾಧಿಕಾರಿಗೆ ಸೂಚನೆಯನ್ನೂ ನೀಡಿದೆ. ನ್ಯಾ ಸೂರಜ್ ಗೋವಿಂದರಾಜು ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು.
ಮಹೇಶ್ ತಿಮರೋಡಿ ವಿರುದ್ಧ ಸುಮಾರು 32 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಹಲವು ಪ್ರಕರಣಗಳು ಖುಲಾಸೆಯಾಗಿದ್ದವು. ಧರ್ಮಸ್ಥಳದಲ್ಲಿ ಎಸ್ ಐಟಿ ತನಿಖೆ ಆರಂಭವಾದ ನಂತರ ಬೇರೆ ಬೇರೆ ಕಾರಣಗಳಿಗೆ ಅವರ ವಿರುದ್ಧ ನಾನಾರೀತಿಯ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಸಪ್ಟೆಂಬರ್ 20ರಂದು ಆದೇಶ ಹೊರಡಿಸಿದ್ದರು. ವಿಶೇಷವೆಂದರೆ ಖುಲಾಸೆಯಾದ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳನ್ನೂ ಸಹ ಬಂಟ್ವಾಳ ವೃತ್ತ ಆರಕ್ಷಕ ನಿರೀಕ್ಷಕರು ಉಪವಿಭಾಗಾಧಿಕಾರಿಗಳಿಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಿದ್ದರು

