ಹೊಸದಿಲ್ಲಿ: ಎಎಪಿ ಸರ್ವೋಚ್ಛ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ನಿನ್ನೆ ರಾತ್ರಿ ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ರೋಸ್ ಅವೆನ್ಯೂ ಕೋರ್ಟ್ ಗೆ ಹಾಜರುಪಡಿಸಿದರು.
ಅರವಿಂದ ಕೇಜ್ರಿವಾಲ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹೊರೆಸಿರುವ ಇಡಿ ಅಧಿಕಾರಿಗಳು ಅಬಕಾರಿ ಹಗರಣದ ಮೂಲ ಸೂತ್ರಧಾರಿ ಕೇಜ್ರಿವಾಲ್ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರ ವಿಚಾರಣೆಗೆ ಇನ್ನಷ್ಟು ಕಾಲಾವಕಾಶ ಬೇಕಾಗಿರುವುದರಿಂದ ಹತ್ತು ದಿನಗಳ ಕಸ್ಟಡಿಗೆ ನೀಡುವಂತೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ವಿನಂತಿಸಿದರು.
ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳು ಮತ್ತು ಸೌತ್ ಗ್ರೂಪ್ ನಡುವೆ ಕೇಜ್ರಿವಾಲ್ ಮಧ್ಯವರ್ತಿಯಂತೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿರುವ ಇಡಿ ಅಧಿಕಾರಿ ವಿಜಯ್ ನಾಯರ್, ಹಗರಣದಲ್ಲಿ 600 ಕೋಟಿ ರುಪಾಯಿಗಳಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ. ಈ ಪೈಕಿ ನೂರು ಕೋಟಿ ರುಪಾಯಿಗಳನ್ನು ಸೌತ್ ಗ್ರೂಪ್ ನೀಡಿದೆ ಎಂದು ಜಾರಿ ನಿರ್ದೇಶನಾಲಯ ವಾದಿಸಿದೆ.
ಅಕ್ರಮ ಹಣ ಸಾಗಣೆ ಕಾಯ್ದೆ (ಪಿಎಂಎಲ್ಎ) ಸೆಕ್ಷನ್ 19ರ ಅನ್ವಯ ತನಿಖೆ ನಡೆಸುತ್ತಿದ್ದು, ಕೇಜ್ರಿವಾಲ್ ಅವರ ಬಂಧನದ ಕುರಿತು ಅವರ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದೆ. ಬಂಧನಕ್ಕೆ ಕಾರಣಗಳನ್ನೂ ತಿಳಿಸಲಾಗಿದೆ ಎಂದು ಇಡಿ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಸ್.ವಿ.ರಾಜು ನ್ಯಾಯಾಲಯಕ್ಕೆ ತಿಳಿಸಿದರು.
ಅಬಕಾರಿ ನೀತಿ ಜಾರಿಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರೇ ನೇರವಾಘಿ ಪಾಲ್ಗೊಂಡಿದ್ದಾರೆ ಮತ್ತು ಸೌತ್ ಗ್ರೂಪ್ ಸಂಸ್ಥೆಗೆ ಸಹಾಯ ಮಾಡಿದ್ದಾರೆ. ಸಹಾಯಕ್ಕೆ ಬದಲಾಗಿ ಅವರು ಹಣದ ಬೇಡಿಕೆ ಇಟ್ಟಿದ್ದಾರೆ. ಈ ವಿಷಯಗಳು ಈಗಾಗಲೇ ಬಂಧಿತರಾಗಿರುವವರಿಂದ ತಿಳಿದುಬಂದಿದೆ. ಎಂದು ರಾಜು ನ್ಯಾಯಾಲಯದ ಮುಂದೆ ವಾದಿಸಿದರು.
ಎಲ್ಲ ಗುತ್ತಿಗೆದಾರರೂ ಲಂಚದ ಹಣವನ್ನು ನಗದು ರೂಪದಲ್ಲೇ ನೀಡಿದ್ದಾರೆ. ದಿಲ್ಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅವರಿಗೆ ನೀಡಲಾಗಿರುವ ಸರ್ಕಾರಿ ಬಂಗಲೆಯಲ್ಲಿ ಈ ವ್ಯವಹಾರಗಳನ್ನು ಕೇಜ್ರಿವಾಲ್ ನಡೆಸಿದ್ದು, ಸೌತ್ ಗ್ರೂಪ್ ಮತ್ತು ಎಎಪಿ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.
ಕೇಜ್ರಿವಾಲ್ ಪರವಾಗಿ ಹಿರಿಯ ನ್ಯಾಯವಾಧಿ ವಿಕ್ರಮ್ ಚೌಧರಿ ತಮ್ಮ ವಾದ ಮಂಡಿಸಿದರು.