ಬೆಂಗಳೂರು: ಬರೋಬ್ಬರಿ 25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಬೆಂಗಳೂರಿನ ಬ್ಯಾಟರಾಯನಪುರದ ಅಬಕಾರಿ ಡಿಸಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಲಂಚ ಪಡೆಯುತ್ತಿದ್ದಾಗಲೇ ಅಬಕಾರಿ ಡಿಸಿ ಜಗದೀಶ್ ನಾಯಕ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಮೈಕ್ರೋ ಬ್ರಿವೇರಿ, ಸಿಎಲ್- 7 ಪರವಾನಗಿಗೆ 2 ಕೋಟಿ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನ ರೂ.25 ಲಕ್ಷ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವೇಳೆ ಅಬಕಾರಿ ಅಧೀಕ್ಷಕ ತಮ್ಮಣ್ಣ, ಮಧ್ಯವರ್ತಿ ಲಕ್ಕಪ್ಪ ಎಂಬುವವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಬಿಎಂಪಿ ಮಾಜಿ ಸದಸ್ಯ ಲಕ್ಷ್ಮೀನಾರಾಯಣ್ ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿತ್ತು. ಲಕ್ಷ್ಮೀನಾರಾಯಣ್ ಪ್ರತಿಕ್ರಿಯಿಸಿ, ಎರಡು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದೆವು. ಆದರೆ ಜಗದೀಶ್ ಅವರು ಲಂಚಕ್ಕೆ ಬೇಡಿಎಕ ಇಟ್ಟಿದ್ದರು. ಎರಡೂವರೆ ಕೋಟಿ ಹಣ ಎಲ್ಲಿಂದ ತರಲು ಸಾಧ್ಯ? ಕೊನೆಗೆ ರೂ. 5 ಲಕ್ಷ ಕಡಿಮೆ ಮಾಡಿದ್ದರು ಎಂದು ತಿಳಿಸಿದರು.

