ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ನೌಕರರನ್ನು ಬೆದರಿಸುತ್ತಿದ್ದ ಮಾಜಿ ಪೊಲೀಸ್‌ ಪೇದೆ ಬಂಧನ

Most read



ಬೆಂಗಳೂರು: ಲೋಕಾಯುಕ್ತ ಅಧಿಕಾರಿ ಎಂದು ಪರಿಚಯಿಸಿಕೊಂಡು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಮಾಜಿ ಪೊಲೀಸ್‌ ಪೇದೆ ಮುರುಗಪ್ಪ ನಿಂಗಪ್ಪ ಕುಂಬಾರ್‌ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ  ಬಸವರಾಜು ಆರ್. ಮಗದಮ್ ಅವರು ವಿಧಾನಸೌಧ ಪೊಲೀಸ್‌ ಠಾಣೆಯಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು.
ಮುರುಗಪ್ಪ, ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲ್ಲೂಕಿನ ಸದಲಗ ಗ್ರಾಮದ ನಿವಾಸಿ. ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಕೆಲವು ವರ್ಷಗಳ ಹಿಂದೆ ಉದ್ಯೋಗದಿಂದ ವಜಾಗೊಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ ಆರೋಪಿ, ತಾನು ಲೋಕಾಯುಕ್ತ ಕಚೇರಿಯ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ. ನಿಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗುತ್ತಿದೆ. ಹೀಗಾಗಿ ಮುನ್ಸೂಚನೆ ನೀಡುತ್ತಿದ್ದೇನೆ ಎಂದು ಹೆದರಿಸುತ್ತಿದ್ದ. ಪ್ರಕರಣ ದಾಖಲಾಗಬಾರದು ಎಂದರೆ ಹಣ ನೀಡಬೇಕು ಎಂದು ಒತ್ತಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಾದ ಮೇಲೆ ಆರೋಪಿಯ ಮೊಬೈಲ್ ನಂಬರ್‌ ಅನ್ನು ಟ್ರೂಕಾಲರ್‌ನಲ್ಲಿ ಪರಿಶೀಲನೆ ಮಾಡಿದಾಗ ಲೋಕಾಯುಕ್ತ ಡಿವೈಎಸ್‌ಪಿ ಎಂದು ನೋಂದಣಿಯಾಗಿತ್ತು. ಆದರೆ ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ಮಹಾರಾಷ್ಟ್ರದ ಶಿರೋಳ್‌ ಎಂಬ ಪಟ್ಟಣವನ್ನು ತೋರಿಸುತ್ತಿತ್ತು. ಕೊನೆಗೆ ಪೊಲೀಸ್ ತಂಡ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದೆ ಎಂದು ವಿಧಾನಸೌಧ ಪೊಲೀಸರು ಹೇಳಿದ್ದಾರೆ.

More articles

Latest article