ಚನ್ನರಾಯಪಟ್ಟಣ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೇಳಿದ್ದರು. ಆದರೆ ಒಂದು ವರ್ಷವಾದರೂ ಒಪ್ಪಿಗೆ ಕೊಡಿಸಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಟೀಕಿಸಿದ್ದಾರೆ.
ಯುವ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಯುವಪರ್ವ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ರಾಜ್ಯದಿಂದ ಬಿಜೆಪಿ ಮತ್ತು ಜೆಡಿಎಸ್ ನಿಂದ 19 ಸಂಸದರು ಆಯ್ಕೆಯಾಗಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಈ ಎರಡೂ ಪಕ್ಷಗಳ ಸಂಸದರು ಧ್ವನಿ ಎತ್ತುತ್ತಿಲ್ಲ. ಕನ್ನಡಿಗರಿಂದ ಆಯ್ಕೆಯಾದ ಇವರು ಕನ್ನಡಿಗರನ್ನು ವಂಚಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರೂ.5,300 ಕೋಟಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ನಯಾಪೈಸೆ ಸಹ ಬಿಡುಗಡೆಮಾಡಿಲ್ಲ. ಈ ತಾರತಮ್ಯವನ್ನು ಪ್ರಶ್ನಿಸಲು ಧೈರ್ಯ ತಾಕತ್ತು ಇಲ್ಲದ ಬಿಜೆಪಿ, ಜೆಡಿಎಸ್ ಸಂಸದರು ನಿಜವಾದ ಕರ್ನಾಟಕದ ದ್ರೋಹಿಗಳು ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕದ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವುದರಿಂದ ಇವರ ವಿರುದ್ಧ ಕೇಂದ್ರ ಸರ್ಕಾರ ಇ.ಡಿ, ಸಿಬಿಐ, ಐ.ಟಿ ದಾಳಿ ಮಾಡಿಸುತ್ತದೆ. ಕರ್ನಾಟಕಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ನೀಡದೇ ಅನ್ಯಾಯ ಎಸಗಲಾಗುತ್ತಿದೆ. ಬಿಹಾರ, ಉತ್ತರಪ್ರದೇಶಕ್ಕೆ ಹೆಚ್ಚು ಪ್ರಮಾಣದಲ್ಲಿ ತೆರಿಗೆಯ ಪಾಲನ್ನು ನೀಡಲಾಗುತ್ತಿದೆ. ಕನ್ನಡ ಭಾಷೆಯನ್ನು ನೇಪಥ್ಯಕ್ಕೆ ಸರಿಸಿ, ಹಿಂದಿ ಭಾಷೆ ಹೇರಲು ಹೊರಟಿದೆ. ಇದನ್ನು ಪ್ರಶ್ನಿಸದ ಜೆಡಿಎಸ್, ಬಿಜೆಪಿಯ ಗುಲಾಮಗಿರಿ ಮಾಡುತ್ತಿದೆ ಎಂದು ಆಪಾದಿಸಿದರು.
ಎನ್‌ಡಿಎ ಸರ್ಕಾರದ ಅನ್ಯಾಯ ಕುರಿತು ರಾಜ್ಯ ಯುವ ಕಾಂಗ್ರೆಸ್ ಹೋರಾಟ ಮಾಡುವ ಮೂಲಕ ಕರ್ನಾಟಕದ ಹಿತ ಕಾಪಾಡಲು ಮುಂದಾಗಬೇಕು. ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಿಮಗೆ ಸಾಕಷ್ಟು ಅವಕಾಶ ಲಭಿಸುತ್ತದೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಸಂಘಟನೆಯ ಸಾಮರ್ಥ್ಯದಿಂದ ಭವಿಷ್ಯದ ನಾಯಕರಾಗಿ ರೂಪುಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಶಾಸಕರಾದ ರಿಜ್ವಾನ್ ಅರ್ಷದ್, ಕೆ.ಎಂ. ಶಿವಲಿಂಗೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮೊದಲಾದವರು ಉಪಸ್ಥಿತರಿದ್ದರು.