ಕರ್ನಾಟಕದ ರೈಲ್ವೇ ಯೋಜನೆಗಳಿಗೆ ವೇಗ ನೀಡಲು ರಾಜ್ಯಸಭೆಯಲ್ಲಿ ಒತ್ತಾಯಿಸಿದ ಹೆಚ್.ಡಿ.ದೇವೇಗೌಡರು

Most read

ನವದೆಹಲಿ: ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಹಾಗೂ ನೆನೆಗುದಿಗೆ ಬಿದ್ದಿರುವ ರೈಲ್ವೇ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರವನ್ನು ಕೋರಿದರು. ರಾಜ್ಯಸಭೆಯಲ್ಲಿ ರೈಲ್ವೇ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕರ್ನಾಟಕದ ರೈಲ್ವೇ ಯೋಜನೆಗಳ ಅಗತ್ಯವನ್ನು ಒತ್ತಿ ಹೇಳಿದರು.

ಹಿಂದಿನ ಸರ್ಕಾರಗಳು ಕರ್ನಾಟಕದ ಹಲವಾರು ನಿರ್ಣಾಯಕ ರೈಲ್ವೇ ಯೋಜನೆಗಳನ್ನು ನಿರ್ಲಕ್ಷಿಸಿವೆ.  ಆದಾಗ್ಯೂ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ರಾಜ್ಯಕ್ಕೆ ರೈಲ್ವೇ ಅನುದಾನ ಹಂಚಿಕೆಯಲ್ಲಿ ಭಾರೀ ಏರಿಕೆ ಕಂಡಿದೆ. ಈ ಹಂಚಿಕೆಯು ರೂ. 800 ಕೋಟಿಯಿಂದ ರೂ.7,000 ಕೋಟಿಗೂ ಮೀರಿ ಹೆಚ್ಚಾಗಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಮತ್ತು ಶೃಂಗೇರಿಗೆ ರೇಲ್ವೆ ಮಾರ್ಗ  ಮತ್ತು ಬೆಂಗಳೂರಿನಿಂದ ಭಾರತದ ಇತರೆ  ಭಾಗಗಳಿಗೆ ಸಂಪರ್ಕ ಸೇರಿದಂತೆ ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬಾರದೆ ಇನ್ನೂ ಬಾಕಿ ಉಳಿದಿವೆ. ಸಚಿವರು ತಕ್ಷಣ ಗಮನ ಹರಿಸಬೇಕಾಗಿದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ರೈಲ್ವೇ ಯೋಜನೆಗಳನ್ನು ಮತ್ತಷ್ಟು ವೇಗಗೊಳಿಸುವಂತೆ ಸರ್ಕಾರವನ್ನು ಪದೇ ಪದೆ ಮನವಿ ಮಾಡಿದ ಅವರು ರೈಲ್ವೇ ಸಂಪರ್ಕವು ಸಾಮಾನ್ಯ ನಾಗರಿಕರಿಗೆ ಕೈಗೆಟುಕುವ ಪ್ರಯಾಣಕ್ಕೆ ಕಾರಣವಾದ ಕೆಲ ಮಹತ್ವದ ಅಂಶಗಳನ್ನು ಉದಾಹರಣೆ ಸಮೇತವಾಗಿ ಉಲ್ಲೇಖಿಸಿದರು.

ಹಾಸನದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಮಾಡಿದರೆ ಟಿಕೆಟ್ ವೆಚ್ಚ ರೂ.30 ಆಗುತ್ತದೆ. ಆದರೆ ಬಸ್ ದರಗಳು ಬಹುತೇಕ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗಿರುತ್ತವೆ. ಇದಕ್ಕಾಗಿಯೇ ರೈಲ್ವೇ ಯೋಜನೆಗಳ ವಿಸ್ತರಣೆ ಪೂರ್ಣ ವೇಗದಲ್ಲಿ ಮುಂದುವರಿಯಬೇಕು ಎಂದು ಅವರು ಪ್ರತಿಪಾದಿಸಿದರು.

More articles

Latest article