ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿಪತ್ರಗಳು, ಕೋಟಿ ಕೋಟಿ ಮೌಲ್ಯದ ಚಿನ್ನ, ವಜ್ರದ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಇಂದು ಹಸ್ತಾಂತರಿಸಲಾಗಿದೆ.
ಜಯಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿಪತ್ರಗಳು, 11,344 ರೇಷ್ಮೆ ಸೀರೆಗಳು, 7 ಕೆಜಿ ಚಿನ್ನ ಮತ್ತು ವಜ್ರಖಚಿತ ಆಭರಣಗಳು 750 ಜೊತೆ ಚಪ್ಪಲಿಗಳು, ದುಬಾರಿ ಬೆಲೆಯ ಕೈ ಗಡಿಯಾರಗಳು ಸೇರಿದಂತೆ ಇನ್ನಿತರ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.
ಭಾರೀ ಗಾತ್ರದ ಟ್ರಂಕ್ ಗಳ ಜೊತೆ ಬಿಗಿ ಭದ್ರತೆಯಲ್ಲಿ ಬಂದ ತಮಿಳುನಾಡಿನ ಅಧಿಕಾರಿಗಳು ನ್ಯಾಯಾಲಯದ ನ್ಯಾಯಾಧೀಶರ ಸಮ್ಮುಖದಲ್ಲಿ ಜಯಲಲಿತಾ ಅವರಿಗೆ ಸೇರಿದ ಬೆಲೆ ಬಾಳುವ ವಸ್ತುಗಳನ್ನು ತಮಿಳುನಾಡಿಗೆ ಕೊಂಡೊಯ್ದಿದ್ದಾರೆ. ತಮಿಳುನಾಡಿನ ಸರಕಾರದ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿ ಚಿನ್ನದ ಒಡವೆಗಳನ್ನು ತೂಕ ಹಾಕಿದ್ದಾರೆ. ನಂತರ ತಮಿಳುನಾಡಿನಿಂದ ಅಗಮಿಸಿದ್ದ ಗೃಹ ಇಲಾಖೆ ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಜಯಲಲಿತಾರ ಒಡವೆ ವಸ್ತುಗಳನ್ನು ತಮಿಳುನಾಡಿಗೆ ಸಾಗಿಸಿದರು.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಹೆಚ್.ಎ.ಮೋಹನ್ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಸಾವಿರಾರು ಕೋಟಿ ಮೌಲ್ಯದ ಸ್ಥಿರಾಸ್ತಿಗಳ ಹರಾಜು ಮಾಡಬೇಕು ಅಥವಾ ಸಾರ್ವಜನಿಕ ಉದ್ದೇಶಗಳಿಗಾಗಿ ಬಳಸಬೇಕೆಂದು ಕೋರ್ಟ್ ಆದೇಶಿಸಿದೆ. ತಮಿಳುನಾಡಿನ ಚೆನ್ನೈ, ತಂಜಾವೂರು, ಚೆಂಗಲಪಟ್ಟು, ಕಾಂಚಿಪುರಂ, ತಿರುವಳ್ಳೂರ್, ತಿರುವರೂರ್, ತೂತುಕುಡಿಯಲ್ಲಿನ 1526 ಎಕರೆ ಜಮೀನು ಹರಾಜಿನ ಬದಲು ಸಾರ್ವಜನಿಕ ಬಳಕೆಗೆ ಮೀಸಲಿಡಲು ಕೋರ್ಟ್ ಸಲಹೆ ನೀಡಿದೆ. ಬಡಾವಣೆಗಳನ್ನು ನಿರ್ಮಿಸಿ ಬಡವರಿಗೆ ನಿವೇಶನಗಳನ್ನು ಹಂಚಬಹುದು ಅಥವಾ ಸಾರ್ವಜನಿಕ ಹರಾಜಿನಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಸದುದ್ದೇಶಕ್ಕೆ ಬಳಸಬಹುದು ಎಂದು ಸಲಹೆ ನೀಡಲಾಗಿದೆ. ಚಿನ್ನಾಭರಣಗಳನ್ನು ಆರ್‌ಬಿಐಗೆ ಮಾರಾಟ ಮಾಡಿ ಆ ಹಣವನ್ನು ಸಾರ್ವಜನಿಕರ ಕಲ್ಯಾಣಕ್ಕೆ ಬಳಸಲು ಸೂಚನೆ ನೀಡಲಾಗಿದೆ. ಗ್ರಾಮೀಣ ಮೂಲಸೌಕರ್ಯ, ಶಿಕ್ಷಣ, ಆರೋಗ್ಯಕ್ಕೆ ಬಳಸಲು ಸಲಹೆ ನೀಡಲಾಗಿದ್ದು, ಇದರಿಂದ ಸಂವಿಧಾನ ರಚಿಸಿದವರ ಆಶಯ ಈಡೇರುತ್ತದೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗದಂತೆ ಅಧಿಕಾರದಲ್ಲಿರುವವರಿಗೆ ಪಾಠವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.